Site icon Vistara News

Siddheshwar Swamiji | ಕೂಡಲ ಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ

Siddheshwar Swamiji

ವಿಜಯಪುರ: ನಡೆದಾಡುವ ದೇವರು, ಶತಮಾನದ ಸರಳ ಸಂತ ಶ್ರೇಷ್ಠ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಇಚ್ಛೆಯಂತೆ ಚಿತಾಭಸ್ಮವನ್ನು ಸಾಗರ, ಸಂಗಮದಲ್ಲಿ ವಿಸರ್ಜಿಸಲಾಗಿದೆ. ಮೊದಲಿಗೆ ಭಾನುವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಶ್ರೀಗಳ ಚಿತಾಭಸ್ಮ ವಿಸರ್ಜಿಸಲಾಯಿತು. ನಂತರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಕಡಲತೀರದಲ್ಲಿ (Siddheshwar Swamiji) ಚಿತಾಭಸ್ಮ ವಿಲೀನ ಮಾಡಲಾಯಿತು.

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.

ಶ್ರೀಗಳಿಗೆ ಬಸವಣ್ಣನ ಐಕ್ಯಸ್ಥಳ, ಕೂಡಲಸಂಗಮದ ಬಗ್ಗೆ ಅಪಾರ ಒಲವಿತ್ತು. ಇಲ್ಲಿಯೆ ಚಿತಾಭಸ್ಮ ಬಿಡಬೇಕು ಎಂದು ಅವರ ಇಚ್ಛೆಯಾಗಿತ್ತು. ಎಲ್ಲವೂ ಅವರ ಇಚ್ಛೆಯಂತೆ ನಡೆದಿದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಮಾತೃಭಾಷೆ ಶಿಕ್ಷಣಕ್ಕೆ ಬೇಕಿದೆ ಸಾಂವಿಧಾನಿಕ ರಕ್ಷಣೆ: ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಸೆ

ನಂತರ ದಕ್ಷಿಣ ಕಾಶಿ ಖ್ಯಾತಿಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಚಿತಾಭಸ್ಮವನ್ನು ವಿಸರ್ಜನೆ ಮಾಡಲಾಯಿತು. ಇದಕ್ಕೂ ಮುನ್ನ ಸುಮಾರು ಅರ್ಧ ಗಂಟೆ ಕಾಲ ಸಿದ್ದೇಶ್ವರರ ಚಿತಾಭಸ್ಮವನ್ನು ಭಕ್ತರ ದರ್ಶನಕ್ಕೆ ಇರಿಸಲಾಯಿತು. ಈ ವೇಳೆ ಸ್ವಾಮಿಗಳನ್ನು ನೆನೆದು ಭಜನೆಗಳನ್ನು ಹಾಡಿ ಭಕ್ತರು ಆರಾಧಿಸಿದರು. ಭಜನೆ ನಂತರ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಹಾಗೂ ಚಿತಾಭಸ್ಮಕ್ಕೆ ಪೂಜೆ ನೆರವೇರಿಸಲಾಯಿತು.

ಬಳಿಕ ಶ್ರೀಗಳ ಚಿತಾಭಸ್ಮವನ್ನು ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬೋಟ್ ಮೂಲಕ ಅರಬ್ಬೀ ಸಮುದ್ರಕ್ಕೆ ಕೊಂಡೊಯ್ಯಲಾಯಿತು. ಸಮುದ್ರದಲ್ಲಿ ಎಲ್ಲ ಭಕ್ತರ ಸಮ್ಮುಖದಲ್ಲಿ ನಿಗದಿಯಂತೆ 5 ಗಂಟೆ ವೇಳೆಗೆ ಶ್ರೀಗಳ ಚಿತಾಭಸ್ಮವನ್ನು ವಿಸರ್ಜನೆ ಮಾಡುವುದರೊಂದಿಗೆ ಸಿದ್ದೇಶ್ವರ ಶ್ರೀಗಳು ಸಾಗರದಲ್ಲಿ ಲೀನರಾದರು. ಈ ವೇಳೆ ಶ್ರೀಗಳ ಚಿತಾಭಸ್ಮದ ದರ್ಶನಕ್ಕೆ ವಿವಿಧ ಜಿಲ್ಲೆಗಳಿಂದ ಐನೂರಕ್ಕೂ ಅಧಿಕ ಮಂದಿ ಭಕ್ತರು ಆಗಮಿಸಿದ್ದರು.

ಗೋಕರ್ಣದಲ್ಲಿ ಸಾಮಾನ್ಯವಾಗಿ ಇಲ್ಲಿನ ಮಹಾಬಲೇಶ್ವರ ದೇವಸ್ಥಾನದ ಬಳಿಯಿರುವ ತಾಮ್ರಪರ್ಣಿಯಲ್ಲಿ ಚಿತಾಭಸ್ಮವನ್ನು ವಿಸರ್ಜನೆ ಮಾಡಲಾಗುತ್ತದೆ. ಇದೇ ಮೊದಲಬಾರಿಗೆ ಸಮುದ್ರದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಿದ್ದು, ಶ್ರೀಗಳ ಆಶಯದಂತೆ ಕಾರ್ಯವನ್ನು ನೆರವೇರಿಸಿದ್ದಾಗಿ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ. ಈ ವೇಳೆ ವಚನಾನಂದ ಸ್ವಾಮೀಜಿ ಸೇರಿದಂತೆ 20ಕ್ಕೂ ಅಧಿಕ ಸ್ವಾಮೀಜಿಗಳು ಭಕ್ತರು ಹಾಜರಿದ್ದರು.

ಇದ್ದರೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ವಿರೋಧಿ ಸಾಹಿತಿಗಳೇ ಸಾಹಿತ್ಯ ಪರಿಷತ್ತಿಗೆ ಬನ್ನಿ: ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಕರೆ

Exit mobile version