ಬೆಂಗಳೂರು: ದಣಿವರಿಯದ ಮಹಾನ್ ದಾರ್ಶನಿಕ, ಸದಾ ಭಕ್ತರಿಗಾಗಿಯೇ ಮಿಡಿಯುವ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರ ದರ್ಶನಕ್ಕಾಗಿ ಕಳೆದ ೨-೩ ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜ್ಞಾನಯೋಗಾಶ್ರಮಕ್ಕೆ ಬಂದು ಸೇರುತ್ತಿದ್ದರು. ಆವರಣದಲ್ಲಿಯೇ ಬಿಸಿಲು, ಚಳಿಯನ್ನು ಲೆಕ್ಕಿಸದೇ ಚಕ್ಕಲಪಟ್ಟೆ ಹೊಡೆದು ಕುಳಿತುಬಿಟ್ಟಿದ್ದರು. ತಮ್ಮ ನೆಚ್ಚಿನ ಸ್ವಾಮೀಜಿ ಗುಣಮುಖರಾಗಲಿ ಎಂದು ಕುಳಿತಲ್ಲಿಂದಲೇ ದೇವರಿಗೆ ಮೊರೆ ಇಡುತ್ತಿದ್ದರು. ಒಂದು ಬಾರಿ, ಒಂದೇ ಒಂದು ಬಾರಿ ಅವರನ್ನು ಕಣ್ತುಂಬಿಕೊಂಡು ಹೋಗುತ್ತೇವೆಂದು ತುದಿಗಣ್ಣಿನಲ್ಲಿ ಶ್ರೀಗಳು ತಂಗಿದ್ದ ಮೊದಲ ಮಹಡಿಯ ಕೊಠಡಿಯತ್ತಲೇ ಕಣ್ಣನ್ನು ನೆಟ್ಟಿದ್ದರು. ಇತ್ತ ಶ್ರೀಗಳೂ ಸಹ ಭಕ್ತರು ತಮಗಾಗಿ ಕಾಯುತ್ತಿದ್ದಾರೆಂದು ತಿಳಿದಾಕ್ಷಣ ಆರೋಗ್ಯವನ್ನೂ ಲೆಕ್ಕಸದೇ ಭಕ್ತರ ಬಳಿಗೆ ಹೋಗಿಬಿಡುತ್ತಿದ್ದರು. ಆದರೆ, ಕಳೆದೆರಡು ದಿನದಿಂದ ಮಾತ್ರ ಶ್ರೀಗಳ ದರ್ಶನ ಆಗಲೇ ಇಲ್ಲ. ಆಶ್ರಮದಲ್ಲಿ ಸೇರಿದ್ದ ಭಕ್ತರು ಕಾದು ಕಾದು ಮನೆಗೆ ತೆರಳಿದ್ದರು. ಕೊನೇ ಪಕ್ಷ ವರ್ಚುವಲ್ ದರ್ಶನವೂ ಆಗದಿರುವ ನೋವು ಇಂದು ಸಾವಿರಾರು ಭಕ್ತರನ್ನು ಕಾಡಿದೆ.
ಶ್ರೀಗಳಿಗೆ ಕೆಲವು ದಿನಗಳ ಹಿಂದೆ ಅನಾರೋಗ್ಯ ಎಂಬ ಮಾತುಗಳು ಕೇಳಿ ಬಂದಾಗಲೇ ಭಕ್ತರು ಸೇರಿದಂತೆ ರಾಜಕೀಯ ನಾಯಕರು, ವಿವಿಧ ಮಠಾಧೀಶರು ಆಶ್ರಮಕ್ಕೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸುತ್ತಲೇ ಬಂದಿದ್ದರು. ಈ ನಡುವೆ ಸಿದ್ದೇಶ್ವರ ಶ್ರೀಗಳ ಆರೋಗ್ಯವೂ ಚೇತರಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳೂ ಸಹ ಭಕ್ತರಿಗೆ ದರ್ಶನ ನೀಡುತ್ತಿದ್ದರು.
ಅದೇ ರೀತಿಯಾಗಿ ಕಳೆದ ಶುಕ್ರವಾರ (ಡಿ. ೩೦) ಶ್ರೀಗಳಿಗೆ ನಿತ್ರಾಣಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದರೂ ಸಹ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತಮ್ಮ ದರ್ಶನಕ್ಕೆ ಕಾಯುತ್ತಿದ್ದಾರೆ ಎಂಬ ವಿಚಾರ ತಿಳಿದು ಭೇಟಿ ಮಾಡಲು ಹೊರಡಲು ಮುಂದಾದರು. ಆಗ ಶ್ರೀಗಳಿಗೆ ಆರೋಗ್ಯ ಅಷ್ಟು ಸರಿ ಇಲ್ಲದಿದ್ದರಿಂದ ವಿಶ್ರಾಂತಿ ಪಡೆಯಿರಿ ಎಂದು ಜತೆಗಿದ್ದವರು ಸಲಹೆ ನೀಡಿದರೂ ಕೇಳದೆ, ಸಿಡಿಮಿಡಿಗೊಂಡು ಭಕ್ತರನ್ನು ನೋಡಿಯೇ ನೋಡುತ್ತೇನೆಂದು ಎಲ್ಲರಿಗೂ ಒಂದು ಗಂಟೆ ಕಾಲ ದರ್ಶನ ಭಾಗ್ಯವನ್ನು ಕರುಣಿಸಿದ್ದರು.
ಇದನ್ನೂ ಓದಿ | Siddheshwar Swamiji | ಜ್ಞಾನ ಯೋಗಾಶ್ರಮದ ಕಡೆಗೆ ಹರಿದು ಬಂತು ಜನ ಸಾಗರ; ಅಂತಿಮ ದರ್ಶನ ಪಡೆದ ಭಕ್ತರು
ಈ ಹಿನ್ನೆಲೆಯಲ್ಲಿ ಜ್ಞಾನಯೋಗಾಶ್ರಮವು ಭಕ್ತರಿಗೆ ಪ್ರಕಟಣೆ ಮೂಲಕ ಮನವಿಯನ್ನೂ ಮಾಡಿತ್ತು. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಯಾರೂ ಸಹ ಆಶ್ರಮಕ್ಕೆ ಬರುವುದು ಬೇಡ. ಸದ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಚೇತರಿಸಿಕೊಂಡಿದೆ. ಹೀಗಾಗಿ ಭಾನುವಾರದಿಂದ (ಜ.1) ಶ್ರೀಗಳ ನೇರ ದರ್ಶನವನ್ನು ರದ್ದುಪಡಿಸಿ, ಕೇವಲ ವರ್ಚುವಲ್ (ಆನ್‌ಲೈನ್) ದರ್ಶನ ನೀಡಿಸಲಾಗುತ್ತದೆ ಎಂದು ಪ್ರಕಟಿಸಿತ್ತು. ಇನ್ನು ಮುಂದೆ ನಿಗದಿತ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಫೇಸ್‌ಬುಕ್, ಯೂಟ್ಯೂಬ್ ಲೈವ್‌ನಲ್ಲಿ ಶ್ರೀಗಳ ದರ್ಶನ ಪ್ರಸಾರವನ್ನು ಸಹ ಮಾಡಲಾಗುವುದು, ಯಾರೂ ಅವರನ್ನು ನೇರವಾಗಿ ನೋಡಬೇಕೆಂದು ಆಶ್ರಮದ ಬಳಿ ಬರಬೇಡಿ ಎಂದು ಜ್ಞಾನಯೋಗಾಶ್ರಮವು ಭಕ್ತರಲ್ಲಿ ಮನವಿ ಮಾಡಿತ್ತು.
“ನಿಮ್ಮ ಭಕ್ತಿ, ಪ್ರೀತಿ ಅರ್ಥವಾಗುತ್ತದೆ. ಆದರೆ, ಇದು ದೇವರಿಗೆ ಇನ್ನಷ್ಟು ತ್ರಾಸವನ್ನುಂಟು ಮಾಡುತ್ತಿದೆ. ಭಕ್ತರು ಸೇರಿದ್ದಾರೆ ಎಂದಾದರೆ, ಅವರು ವಿಶ್ರಾಂತಿ ಪಡೆಯದೇ ದರ್ಶನ ನೀಡಲು ಹೋಗೋಣ ಎಂದು ಹಠ ಹಿಡಿಯುತ್ತಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ವಿಶ್ರಾಂತಿ ದೊರೆಯುವಂತೆ ಮಾಡೋಣ. ತಂತ್ರಜ್ಞಾನದ ಈ ಯುಗದಲ್ಲಿ ನಾವು ಅದನ್ನು ಬಳಸಿಕೊಳ್ಳೋಣ. ನಾಳೆಯಿಂದ ಅವರ ವರ್ಚುವಲ್ ದರ್ಶನ ಪಡೆಯೋಣʼʼ ಎಂದು ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಭಕ್ತರಲ್ಲಿ ಶನಿವಾರ (ಡಿ.೩೧) ಮನವಿ ಮಾಡಿದ್ದರು. ಆದರೆ, ಭಾನುವಾರ (ಜ.೧) ಮತ್ತೆ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ದರ್ಶನ ಭಾಗ್ಯವನ್ನು ಕರುಣಿಸಲಾಗಿಲ್ಲ. ಹೀಗಾಗಿ ಭಾನುವಾರ ಆನ್‌ಲೈನ್ ದರ್ಶನ ರದ್ದಾಗಿತ್ತು.
ಈ ಮಧ್ಯೆ ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ವದಂತಿಗಳು ಹೆಚ್ಚಾಗಿದ್ದರಿಂದ ಸಾವಿರಾರು ಮಂದಿ ಭಕ್ತರು ಆಶ್ರಮದ ಆವರಣದಲ್ಲಿ ದರ್ಶನಕ್ಕಾಗಿ ಮತ್ತೆ ಜಮಾಯಿಸಿದ್ದರು. ಆದರೆ, ಶ್ರೀಗಳು ದೇಹಾಂತ್ಯ ಮಾಡಿದ್ದರಿಂದ ಕೊನೆಗೂ ಸಹ ಭಾನುವಾರದಿಂದ ಭಕ್ತರಿಗೆ ನೇರ ಇಲ್ಲವೇ ವರ್ಚುವಲ್ ದರ್ಶನ ಸಿಗಲೇ ಇಲ್ಲ. ಇದು ಭಕ್ತರ ದುಃಖ ದುಪ್ಪಟ್ಟು ಆಗುವಂತೆ ಮಾಡಿದೆ.
ಇದನ್ನೂ ಓದಿ | Siddheshwar Swamiji | ಜ್ಞಾನಯೋಗ ಸಂಪುಟವೇ ಕೊನೇ ಪುಸ್ತಕವಾಯಿತು; ದೇಹಾಂತ್ಯದ ಒಂದು ದಿನ ಮೊದಲು ಶ್ರೀಗಳಿಂದಲೇ ಬಿಡುಗಡೆ!