ವಿಜಯಪುರ: ನಡೆದಾಡುವ ದೇವರು, ಸರಳ ಸ್ವಾಮೀಜಿ ಎಂದೇ ಖ್ಯಾತರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Siddheshwar Swamiji) ಆರೋಗ್ಯ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಅಲ್ಲದೆ, ಜ್ಞಾನಯೋಗಾಶ್ರಮದ ಆವರಣದಲ್ಲಿ ಶ್ರೀಗಳ ದರ್ಶನಕ್ಕಾಗಿ ಕಾಯುತ್ತಿರುವ ಸಾವಿರಾರು ಭಕ್ತರು ವಾಪಸ್ ಮನೆಗೆ ತೆರಳುವಂತೆ ಮನವಿ ಮಾಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಡಾ. ಮಲ್ಲಣ್ಣ ಮೂಲಿಮನಿ, ಸಿದ್ದೇಶ್ವರ ಸ್ವಾಮೀಜಿ ಅವರ ನಾಡಿಬಡಿತ, ಬಿಪಿ, ಉಸಿರಾಟ ಸಹಜವಾಗಿಯೇ ಇದ್ದು, ಔಷಧಿಗಳನ್ನು ನೀಡಲಾಗುತ್ತಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಶ್ರೀಗಳು ಗಂಜಿ ಕುಡಿದಿದ್ದಾರೆ. ಶನಿವಾರ ಆಕ್ಸಿಜನ್ ಕಡಿಮೆಯಾಗಿತ್ತು. ಈಗ ನಾರ್ಮಲ್ ಆಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಸರಿಯಾಗಿ ಊಟ ಮಾಡಿಲ್ಲ. ಕಾರಣ ಹೊರಗೆ ಬರಲಾಗುತ್ತಿಲ್ಲ. ಆಶ್ರಮದ ಯೂಟ್ಯೂಬ್ ಲೈವ್‌ನಲ್ಲಿ ಎಲ್ಲರೂ ಸ್ವಾಮೀಜಿಗಳ ದರ್ಶನ ಪಡೆಯಬಹುದು ಎಂದು ಹೇಳಿದ್ದಾರೆ.
ಎಲ್ಇಡಿ ವಾಲ್‌ನಲ್ಲಿ ಸ್ವಾಮೀಜಿಗಳ ದರ್ಶನ
ಎಲ್ಇಡಿ ವಾಲ್ ಮೂಲಕ ಸ್ವಾಮೀಜಿಗಳ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಶ್ರೀಗಳ ದರ್ಶನಕ್ಕಾಗಿ ಸಾವಿರಾರು ಭಕ್ತರು ಕಾದು ಕುಳಿತಿದ್ದು, ಈಗ ಎಲ್ಇಡಿ ಪರದೆಯಲ್ಲಿ ಸ್ವಾಮೀಜಿಗಳ ದರ್ಶನ ಪಡೆದು ತೆರಳುತ್ತಿದ್ದಾರೆ.
ನುಗ್ಗಲು ಯತ್ನ
ಸಿದ್ದೇಶ್ವರ ಸ್ವಾಮೀಜಿ ದರ್ಶನ ಮಾಡಲು ಭಕ್ತರ ನುಗ್ಗಲು ಯತ್ನಿಸಿದ್ದು, ಆಶ್ರಮದ ಕಟ್ಟಡದ ಮೊದಲ ಮಹಡಿಗೆ ತೆರಳಲು ಪ್ರಯತ್ನಿಸಿದ್ದಾರೆ. ಯುವಕರನ್ನು ಹಾಗೂ ಇತರರನ್ನು ತಡೆದ ಪೊಲೀಸರು, ಸುಖಾ ಸುಮ್ಮನೇ ಹೋಗುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ. ಸ್ಥಳದಲ್ಲಿದ್ದವರನ್ನು ಪೊಲೀಸರು ಚದುರಿಸಿದ್ದಾರೆ.
ನಿರ್ಮಲಾನಂದನಾಥ ಶ್ರೀ ಭೇಟಿ
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.
ಗಾಬರಿ ಬೇಡ, ಆರೋಗ್ಯ ಸ್ಥಿರ- ಸುತ್ತೂರು ಶ್ರೀ
ಸಿದ್ದೇಶ್ವರ ಸ್ಚಾಮೀಜಿಗಳ ಆರೋಗ್ಯ ಸ್ಥಿರವಾಗಿದೆ. ನಾಡಿಬಡಿತ, ಬಿಪಿ ಸಹಜ ಸ್ಥಿತಿಯಲ್ಲಿದೆ. ಆದರೆ, ಹೆಚ್ಚಿಗೆ ಆಹಾರವನ್ನು ತೆಗೆದುಕೊಳ್ಳುತ್ತಿಲ್ಲ. ಆರೋಗ್ಯದಲ್ಲಿ ಸುಧಾರಣೆಯಾಗಲು ನಿಧಾನವಾಗುತ್ತಿದೆ. ಆರೋಗ್ಯ ಸ್ಥಿರವಾಗಿದ್ದು, ಊಹಾಪೋಹಕ್ಕೆ ಯಾರೂ ಕಿವಿಗೊಡಬೇಡಿ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಓಡಾಟದ ಬಗ್ಗೆ ಗಾಬರಿ ಬೇಡ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಓಡಾಡುತ್ತಿದ್ದಾರೆ. ಶ್ರೀಗಳು ಹೆಚ್ಚಿನ ಚಿಕಿತ್ಸೆಗೆ ಒಪ್ಪುತ್ತಿಲ್ಲ. ಆಹಾರವನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಅವರಿಗೆ ಪೌಷ್ಟಿಕ ಆಹಾರದ ಪೂರೈಕೆ ಆಗುತ್ತಿಲ್ಲ. ಇದರಿಂದ ಅಶಕ್ತರಾಗಿದ್ದಾರೆ ಎಂದು ಮೈಸೂರಿನ ಸುತ್ತೂರು ಮಹಾಸಂಸ್ಥಾನದ ಜಗದ್ಗರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಹೇಳಿದರು.
ಇದನ್ನೂ ಓದಿ | New year 2023 | ಏರ್ ಫೈರ್ ರೂಪದಲ್ಲಿ ಮನೆಯಲ್ಲಿ ಕಾದುಕುಳಿದ್ದ ಜವರಾಯ; ಗುಂಡು ತಗುಲಿ ಆಸ್ಪತ್ರೆಯಲ್ಲಿದ್ದ ಯುವಕನೂ ಸಾವು
ತಪ್ಪು ಸಂದೇಶ ಬೇಡ– ಡಿಸಿ
ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಬಂದಿದ್ದೇವೆ. ಶನಿವಾರ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದರ್ಶನ ಪಡೆದಿದ್ದಾರೆ. ಅವರ ಸೂಚನೆ ಮೇರೆಗೆ ನಾವು ನಿತ್ಯ ಭೇಟಿ ಮಾಡುತ್ತಿದ್ದೇವೆ. ಶ್ರೀಗಳ ಆರೋಗ್ಯದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕೆಂಬ ಸೂಚನೆ ಇದೆ. ಕೆಲ ಮಾಧ್ಯಮದಲ್ಲಿ ತಪ್ಪು ಸಂದೇಶ ಬಂದಿದೆ. ತಪ್ಪು ಸಂದೇಶ ಬೇಡ. ವೈದ್ಯರು ಹೆಲ್ತ್ ಬುಲೆಟಿನ್ ನೀಡುತ್ತಾರೆ. ಶ್ರೀಗಳು ಊಟ ಮಾಡದ ಕಾರಣ ನಿಶ್ಯಕ್ತಿ ಇದೆ ಎಂದು ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ ಹೇಳಿದ್ದಾರೆ.
ಭಕ್ತರು ಸಹಕಾರ ನೀಡಬೇಕು- ಎಸ್‌ಪಿ
ಶ್ರೀಗಳ ಆರೋಗ್ಯ ವಿಚಾರವಾಗಿ ಜನರಲ್ಲಿ ತಪ್ಪು ಸಂದೇಶ ಹೋಗಿದೆ. ಭಕ್ತರ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ತಪ್ಪು ಸಂದೇಶದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಕಾರಣಕ್ಕಾಗಿ ನಾವು ಇಲ್ಲಿ ಬಂದಿದ್ದೇವೆ. ಅದನ್ನು ಬಿಟ್ಟು ಬೇರೆ ವಿಚಾರ ಇಲ್ಲ. ಶ್ರೀಗಳು ಆರೋಗ್ಯವಾಗಿದ್ದಾರೆ. ಏನೇ ಇದ್ದರೂ ಎಲ್ಲರ ಗಮನಕ್ಕೆ ತರುತ್ತೇವೆ. ಭಕ್ತರು ಗಾಬರಿಯಾಗಬೇಕಿಲ್ಲ. ಟ್ರಾಫಿಕ್, ಜನಸಂದಣಿ, ಗದ್ದಲ ನಿವಾರಣೆಗೆ ಪೊಲೀಸ್ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ ಕುಮಾರ್ ಹೇಳಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಬೇಡ ಆತಂಕ- ಶಾಸಕ ಯತ್ನಾಳ
ಸ್ಚಾಮೀಜಿಗಳು ಆರಾಮವಾಗಿದ್ದು, ವೈದ್ಯರಿಂದ ಚಿಕಿತ್ಸೆ ದೊರೆಯುತ್ತಿದೆ. ಸ್ವಾಮೀಜಿ ಕೈಸನ್ನೆ ಮಾಡಿ ಆಶೀರ್ವಾದ ಮಾಡಿದ್ದಾರೆ. ಭಕ್ತರು ಆತಂಕ ಪಡೋದು ಬೇಡ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ. ಅವನ್ನು ನಂಬಬೇಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಸ್ವಾಮೀಜಿ ಬೆಳಗ್ಗೆಯಿಂದಲೂ ಹುಷಾರಾಗಿದ್ದಾರೆ. ಭಕ್ತರು ಇಲ್ಲಿರದೇ ಮನೆಗೆ ತೆರಳಿ, ಇಲ್ಲಿದ್ದರೆ ತೊಂದರೆ ಆಗುತ್ತದೆ. ತಮ್ಮ ದರ್ಶನಕ್ಕೆ ಬಂದವರನ್ನು ಶ್ರೀಗಳು ಗುರುತು ಹಿಡಿಯುತ್ತಿದ್ದಾರೆ. ಭಕ್ತರು ಗಲಾಟೆ ಮಾಡಬಾರದು. ಸೋಷಿಯಲ್ ಮೀಡಿಯಾ ಸುದ್ದಿಗಳನ್ನು ನಂಬಬೇಡಿ. ಶ್ರೀಗಳು ಆರೋಗ್ಯಯುತರಾಗಿ ಮತ್ತೆ ಪ್ರವಚನ ನೀಡುತ್ತಾರೆ. ಹೆಚ್ಚು ಭಕ್ತರು ಸೇರುವ ಕಾರಣ ಸಮಸ್ಯೆ ಆಗಲಿದೆ ಎಂದು ಯತ್ನಾಳ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Allahabad High Court | ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವುದು ಅನೈತಿಕವಲ್ಲ: ಅಲಹಾಬಾದ್ ಹೈಕೋರ್ಟ್