ವಿಜಯಪುರ: ಸಿದ್ದೇಶ್ವರ ಶ್ರೀಗಳ ಮೂರನೇ ಹೆಲ್ತ್ ಬುಲೆಟಿನ್ ಅನ್ನು ವೈದ್ಯರು ಭಾನುವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ. ಶ್ರೀಗಳು ಆರೋಗ್ಯವಾಗಿದ್ದಾರೆ, ಪಲ್ಸ್, ರಕ್ತದೊತ್ತಡ ಸರಿಯಾಗಿದೆ. ಯಾವುದೇ ರೀತಿಯ ಆತಂಕವಿಲ್ಲ (Siddheshwar Swamiji) ಎಂದು ಡಾ. ಮಲ್ಲಣ್ಣ ಮೂಲಿಮನಿ ತಿಳಿಸಿದ್ದಾರೆ.
ಶ್ರೀಗಳು ಸದ್ಯ ಆರೋಗ್ಯವಾಗಿ ಇದ್ದಾರೆ. ಕೈ ಸನ್ನೆ ಮೂಲಕ ಮಾಜಿ ಸಚಿವ ಎಂ.ಬಿ.ಪಾಟೀಲರ ಜತೆ ಮಾತನಾಡಿದ್ದಾರೆ. ಸೋಮವಾರ ಬೆಳಗ್ಗೆ 7 ಗಂಟೆಗೆ ಸಿದ್ದೇಶ್ವರ ಶ್ರೀಗಳ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ವೆಂಟಿಲೇಟರ್ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಹಲವು ಗಣ್ಯರು ಸ್ವಾಮೀಜಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಅದೇ ರೀತಿ ಭಕ್ತರು ಕೂಡ ಆತಂಕಗೊಂಡಿದ್ದು, ನೂರಾರು ಮಂದಿ ಆಶ್ರಮ ಬಳಿ ಆಗಮಿಸಿ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಹೀಗಾಗಿ ಒಮ್ಮೆಗೆ 8ರಿಂದ ೧೦ ಮಂದಿಗೆ ಶ್ರೀಗಳ ದರ್ಶನಕ್ಕೆ ಅನುಮತಿ ನೀಡಲಾಗಿದೆ.
ಮಾಜಿ ಸಚಿವ ಎಂ.ಬಿ. ಪಾಟೀಲ್ ಭೇಟಿ
ವಿಜಯಪುರ ಜ್ಞಾನ ಯೋಗಾಶ್ರಮಕ್ಕೆ ಎಂ.ಬಿ. ಪಾಟೀಲ್ ಭೇಟಿ ನೀಡಿ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿರುವ ಅವರು, ಶ್ರೀಗಳು ಆರೋಗ್ಯವಾಗಿದ್ದಾರೆ. ನಮ್ಮೆಲ್ಲರ ಜತೆಗೆ ಕೆಲವು ಶಬ್ದಗಳನ್ನು ನಿಧಾನವಾಗಿ ಮಾತನಾಡಿದ್ದಾರೆ. ಶ್ರೀಗಳ ಆಕ್ಷಿಜನ್ ಲೆವೆಲ್ ಬೆಳಗ್ಗೆ ಕಡಿಮೆ ಆಗಿತ್ತು. ಈಗ ೯೦ ಪ್ಲಸ್ ಇದೆ. ಹೀಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಮನವಿ ಮಾಡಿದರು.
ಇಲ್ಲಿಯೇ ಇರಬೇಕು ಇಲ್ಲಿಯೇ ಟ್ರೀಟ್ಮೆಂಟ್ ಪಡೆಯಬೇಕು ಎಂದು ಶ್ರೀಗಳು ಸನ್ನೆ ಮಾಡಿದ್ದಾರೆ. ಶ್ರೀಗಳು ಏನು ಹೇಳುತ್ತಾರೋ ಅದನ್ನು ನಾವು ಕೇಳಬೇಕು. ಅವರು ಎಲ್ಲರನ್ನೂ ಗುರುತು ಹಿಡಿಯುತ್ತಿದ್ದಾರೆ. ಅವರು ಗುಣಮುಖರಾಗಲು ದೇವರಲ್ಲಿ ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ಹೇಳಿದರು.
ಆರೋಗ್ಯ ವಿಚಾರಿಸಿದ ವಚನಾನಂದ ಶ್ರೀ.
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳನ್ನು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿರುವ ಅವರು, ಸಿದ್ದೇಶ್ವರ ಶ್ರೀಗಳೊಂದಿಗೆ ನಾಲ್ಕೈದು ಗಂಟೆ ಇದ್ದೆವು. ಅವರು ಆರಾಮವಾಗಿದ್ದಾರೆ, ಯಾವುದೇ ತೊಂದರೆ ಇಲ್ಲ. ಸುಮ್ಮನೆ ಊಹಾಪೂಹ ಬೇಡ, ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಸ್ವಾಮೀಜಿಗಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಉಸಿರಾಟಕ್ಕಾಗಿ ಆಮ್ಲಜನಕದ ಕೊರತೆ ಇದೆ, ಹಾಗಾಗಿ ಆಗಾಗ ಕೃತಕವಾಗಿ ಆಕ್ಸಿಜನ್ ನೀಡಲಾಗುತ್ತಿದೆ. ವೈದ್ಯರಿಂದ ಸೂಕ್ತ ಚಿಕಿತ್ಸೆ ನಡೆಯುತ್ತಿದ್ದಾರೆ. ಆದರೆ ಶ್ರೀಗಳು ಹೆಚ್ಚಿನ ಚಿಕಿತ್ಸೆ ಪಡೆಯಲು ಇಚ್ಛೆ ಪಡುತ್ತಿಲ್ಲಾ. ಸ್ವಾಮೀಜಿಗಳು ಬೇಗ ಗುಣಮುಖರಾಗಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಶ್ರೀಗಳು ನಡೆದಾಡುವ ದೇವರು, ಅವರ ಜತೆಗೆ ಇರುವ ನಾವು ಧನ್ಯರು. ಅವರು ಬೇಗ ಚೇತರಿಸಿಕೊಳ್ಳುವ ಆಶಾಭಾವವಿದೆ ಎಂದು ಮಹೇಶ್ ಕುಮಟಳ್ಳಿ ಹೇಳಿದರು.
ಇದನ್ನೂ ಓದಿ | Siddheshwar Swamiji | ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರ, ಗಾಬರಿ ಬೇಡವೆಂದ ವೈದ್ಯರು; ಎಲ್‌ಇಡಿ ಪರದೆಯಲ್ಲಿ ದರ್ಶನ