Site icon Vistara News

Siddheshwar Swamiji | ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ʼಅಂತಿಮ ಅಭಿವಂದನ ಪತ್ರʼ, ಏನಿದೆ ಸಂದೇಶ?

Siddheshwar Swamiji

ವಿಜಯಪುರ: ಸರಳ ಜೀವನ ನಡೆಸುತ್ತಾ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು, ದೇಹ ತ್ಯಾಗ ಮಾಡುವ ಮೊದಲು, ʼಅಂತಿಮ ಅಭಿವಂದನ ಪತ್ರದʼ ಮೂಲಕ ಭಕ್ತರಿಗೆ ಕೆಲವೊಂದು ಸಂದೇಶಗಳನ್ನು ನೀಡಿದ್ದಾರೆ. ಸ್ವಾಮೀಜಿ ಅವರ ಅಭಿವಂದನ ಪತ್ರದಲ್ಲಿನ (Siddheshwar Swamiji) ಸಂದೇಶಗಳ ಮಾಹಿತಿ ಇಲ್ಲಿದೆ.

(ಅ)

೧. ಬದುಕು ಅನುಭವಗಳ ಪ್ರವಾಹ.

೨. ಅದರ ಸಿರಿವಂತಿಕೆಯು ವಿಶ್ವ-ಚಿಂತನೆ ಹಾಗೂ ಸತ್ಯಶೋಧನೆಗಳಿಂದ, ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ.

೩. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ‘ಸಾಧನೆ’

೪. ಅಂಥ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ‘ಧರ್ಮ’ ಅದು ಸ್ವ-ಪರ ನೆಮ್ಮದಿಗೆ ಕಾರಣ.

(ಬ)

೫. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು.

೬. ಅದನ್ನು ರೂಪಿಸಿದವರು ‘ಗುರುದೇವರು, ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು.

೭. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ.

(ಕ)

೮. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ‘ಉಪಕೃತ’.

೯. ಬದುಕು ಮುಗಿಯುತ್ತದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ.

೧೦. ಉಳಿಯುವುದು ಬರಿ ಬಯಲು. ಮಹಾಮೌನ. ಶೂನ್ಯಸತ್ಯ!

೧೧. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ ‘ಅಂತಿಮ ಅಭಿವಂದನ ಪತ್ರʼ !

(ಡ)

೧೨. ದೇಹದ ವಿಷಯದಲ್ಲಿ ಒಂದೆರಡು ಆಶಯಗಳು

ಎ. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು,

ಬಿ. ಶ್ರಾದ್ಧಿಕ ವಿಧಿ-ವಿಧಾನ ಕರ್ಮಗಳು ಅನಗತ್ಯ

ಸಿ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು,

ಡಿ. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.

೧೩. ಅಂತಿಮ ನೆನಹು;

ಎ.’ಸತ್ಯವೂ ಇಲ್ಲ. ಅಸತ್ಯವೂ ಇಲ್ಲ.
ಸಹಜವೂ ಇಲ್ಲ, ಅಸಹಜವೂ ಇಲ್ಲ.
ನಾನೂ ಇಲ್ಲ, ನೀನು ಇಲ್ಲ.
ಇಲ್ಲ, ಇಲ್ಲ, ಎಂಬುದು ಏನಿಲ್ಲ
ಗುಹೇಶ್ವರನೆಂಬುದು ತಾ ಬಯಲು”

ಬಿ. ಅಂತ್ಯಃ ಪ್ರಣಮಾಂಜಲಿಃ |

(ಸ್ವಾಮಿ ಸಿದ್ದೇಶ್ವರ)

(ಗುರುಪೂರ್ಣಿಮೆ ೨೦೧೪)

ಇದನ್ನೂ ಓದಿ |

Exit mobile version