ಬೆಂಗಳೂರು: 2024 ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರ ಸೇರಿ ನಗರದ ಪ್ರಮುಖ ರಸ್ತೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ಪಬ್ ಮತ್ತು ಹೋಟೆಲ್‌ಗಳತ್ತ ಜನರು ಲಗ್ಗೆ ಇಡುತ್ತಿದ್ದಾರೆ. ಇನ್ನು ಹೊಸ ವರ್ಷಾಚರಣೆ (New Year 2024) ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲಡೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಭಾನುವಾರ ಹಿನ್ನೆಲೆ ಸದ್ಯ MG ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂದಿನಂತೆ ಜನಸಾಮಾನ್ಯರ ಓಡಾಟ ಕಂಡುಬರುತ್ತಿದೆ. ಸಂಜೆ 6 ಗಂಟೆ ಬಳಿಕ ಜನಸ್ತೋಮ ಹೆಚ್ಚಾಗಲಿದೆ. ಈಗಾಗಲೇ ಜನಸಂದಣಿ ನಿಯಂತ್ರಣಕ್ಕೆ ಪೊಲೀಸರು ವ್ಯವಸ್ಥೆ ಮಾಡಿಕೊಂಡಿದ್ದು, ಬ್ರಿಗೇಡ್ ರಸ್ತೆಯಲ್ಲಿ ಜನರ ಓಡಾಟಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ಇನ್ನು ಕಲರ್ ಫುಲ್ ಆಗಿ ಬ್ರಿಗೇಡ್ ರೋಡ್ ಪಬ್‌ಗಳು ರೆಡಿಯಾಗುತ್ತಿದ್ದು, ಪಡ್ಡೆಹೈಕಳನ್ನು ಸೆಳೆಯಲು ವಿಶೇಷ ಆಫರ್ಸ್ ನೀಡಲಾಗಿದೆ. ಜತೆಗೆ ಅಂತಾರಾಷ್ಟ್ರಿಯ ಡಿಜೆಗಳನ್ನು ಆಹ್ವಾನಿಸಲಾಗಿದ್ದು, ಇದರಿಂದ ಈ ಬಾರಿ ಸಂಭ್ರಮಾಚರಣೆ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ. ಈಗಾಗಲೇ ಪಬ್‌ಗಳತ್ತ ಯುವಕ, ಯುವತಿಯರು ಹೆಜ್ಜೆ ಹಾಕುತ್ತಿದ್ದಾರೆ.
ಪೊಲೀಸ್ ಬಿಗಿ ಭದ್ರತೆ
ಬ್ರಿಗೇಡ್-ಎಂ.ಜಿ.ರಸ್ತೆಗಳ ವ್ಯಾಪ್ತಿಯಲ್ಲಿ 4 ಡಿಸಿಪಿಗಳು, 10 ಎಸಿಪಿಗಳು, 30 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 3 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 250 ಸಿಸಿಟಿವಿ ಕ್ಯಾಮೆರಾಗಳು ಹಾಗೂ 16 ವೀಕ್ಷಣಾ ಗೋಪುರಗಳ ಮೂಲಕ ಹದ್ದಿನ ಕಣ್ಣು, 18 ಮಹಿಳಾ ಸುರಕ್ಷತಾ ತಾಣ ಸ್ಥಾಪನೆ ಮಾಡಲಾಗಿದೆ.
ಮಹಿಳೆಯರ ಸುರಕ್ಷತೆಗಾಗಿ ಅಲ್ಲಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಾಣ, ರಸ್ತೆ ಜಂಕ್ಷನ್‌ಗಳಲ್ಲಿ ತಾತ್ಕಾಲಿಕ ಸಿಸಿಟಿವಿ ಅಳವಡಿಕೆ, ಮೊಬೈಲ್ ಕಮಾಂಡ್ ಸೆಂಟರ್ ಜೊತೆಗೆ ತಾತ್ಕಾಲಿಕ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಲಾಗಿದ್ದು, ಬ್ಯಾರಿಕೇಡ್ ಹಾಕಿ ವ್ಹೀಲಿಂಗ್, ರ‍್ಯಾಷ್ ಡ್ರೈವ್ ಮಾಡುವವರ ಮೇಲೂ ಪೊಲೀಸ್ ಕಣ್ಗಾವಲು ಇಡಲಾಗಿದೆ.
ಪೊಲೀಸರಿಂದಲೂ ಭದ್ರತೆಗೆ ಸಂಬಂಧಿಸಿದಂತೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಪಬ್‌ಗಳಿರುವ ರೋಡ್ಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ರಾತ್ರಿ 8 ಗಂಟೆ ಬಳಿಕ ಎಂಜಿ ರಸ್ತೆ ಮಾರ್ಗವಾಗಿ ಸಂಚಾರ ಬಂದ್ ಆಗಲಿದ್ದು, ತುರ್ತು ವಾಹನ ಬಿಟ್ಟರೆ ಯಾವುದೇ ವಾಹನಕ್ಕೆ ಪ್ರವೇಶ ಇರುವುದಿಲ್ಲ.
ಇದನ್ನೂ ಓದಿ | New Year Celebration : ಪ್ರವಾಸಿ ತಾಣಗಳಲ್ಲಿ ನೈಟ್ ಪಾರ್ಟಿಗೆ ನಿರ್ಬಂಧ; ಗಿರಿಧಾಮಗಳು ಬಂದ್
ಹೊಸ ವರ್ಷಾಚರಣೆ; ಬೆಂಗಳೂರಲ್ಲಿ ಸಂಚಾರ ಬದಲಾವಣೆ, ರಸ್ತೆಗಿಳಿಯುವ ಮುನ್ನ ಎಚ್ಚರ!
ಬೆಂಗಳೂರು: ಡಿಸೆಂಬರ್ 31ರ ರಾತ್ರಿ 2024ನೇ ಇಸವಿಯನ್ನು ಎದುರುಗೊಳ್ಳಲು ಬೆಂಗಳೂರು ಸಜ್ಜಾಗಿದೆ. ಬೆಂಗಳೂರಿನ ಎಲ್ಲ ಕಡೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ (New Year Celebration) ಮುಗಿಲು ಮುಟ್ಟಲಿದೆ. ಆದರೆ, ಅದು ತುರೀಯ ಸ್ಥಿತಿ ತಲುಪುವುದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ. ಬೆಂಗಳೂರಿನ ನಾನಾ ಭಾಗಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ಮಾರ್ಪಾಡು (Vehicle traffic) ಮಾಡಿದೆ. ಕೆಲವು ಕಡೆ ವಾಹನಗಳ ಪ್ರವೇಶವನ್ನೇ ನಿಷೇಧ (Vehicles not allowed) ಮಾಡಿದ್ದರೆ, ಇನ್ನು ಕೆಲವು ಕಡೆ ಸಂಚಾರ ಡೈವರ್ಷನ್‌ಗೆ ಸೂಚಿಸಲಾಗಿದೆ.
ಎಲ್ಲೆಲ್ಲಿ ವಾಹನಗಳ ಪ್ರವೇಶ ನಿಷೇಧ?
ಈ ಕೆಳಗಿನ ಭಾಗಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶ ನಿಷೇಧ ಮಾಡಲಾಗಿದೆ.
- ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
- ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್‌ವರೆಗೆ
- ಚರ್ಚ್ ಸ್ಟ್ರೀಟ್ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ
- ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ
- ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್ ನಿಂದ ಎಂ.ಜಿ ರಸ್ತೆ ಜಂಕ್ಷನ್ ವರೆಗೆ (ಶಂಕರ್ ನಾಗ್ ಚಿತ್ರಮಂದಿರ)
- ರೆಸಿಡೆನ್ಸಿ ರಸ್ತೆಯ ಆಶಿರ್ವಾದಂ ಜಂಕ್ಷನ್‌ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ
ಇದನ್ನೂ ಓದಿ: New Year Celebration: ಹೊಸ ವರ್ಷಾಚರಣೆ: ಬಾರ್, ಪಬ್‌ಗಳಿಗೆ ಬಿಗಿ ರೂಲ್; ಹೀಗೆಲ್ಲಾ ಆದರೆ ಲೈಸೆನ್ಸ್ ಕ್ಯಾನ್ಸಲ್!
ಡಿ. 31ರಂದು ರಾತ್ರಿ 8 ಗಂಟೆ ಬಳಿಕ ಇಲ್ಲಿ ಸಂಚಾರ ಮಾರ್ಗ ಬದಲು
1. ಎಂ.ಜಿ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗು ಇನ್ನು ಮುಂದಕ್ಕೆ ಹೋಗುವಂತಹ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು, ಸೆಂಟ್ರಲ್ ಸ್ಟ್ರೀಟ್-ಬಿ.ಆರ್.ವಿ ಜಂಕ್ಷನ್-ಬಲ ತಿರುವು ಕಬ್ಬನ್‌ರಸ್ತೆ ಮೂಲಕ ಸಂಚರಿಸಿ ವೆಬ್‌ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.
2. ಹಲಸೂರು ಕಡೆಯಿಂದ ಕಂಟೊನ್ವೆಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ-ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆಗೆ ಸಾಗುವುದು
3. ಹಲಸೂರು ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವಂತಯ ವಾಹನಗಳು ಮೆಯೋಹಾಲ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕಮೀಷನರೇಟ್ ರಸ್ತೆಯ ಮೂಲಕ ಗರುಡ ಮಾಲ್ ಜಂಕ್ಷನ್, ಡಿಸೋಜಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ರಿಚ್ಮಂಡ್ ರಸ್ತೆಯ ಮೂಲಕ ಸಾಗಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ