Site icon Vistara News

Sindhuri Vs Roopa : ರೂಪಾ- ಸಿಂಧೂರಿ ಜಗಳಕ್ಕೆ ಸಿಎಂ ಬೊಮ್ಮಾಯಿ ಗರಂ, ಇಬ್ಬರಿಗೂ ಎಚ್ಚರಿಕೆ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ

Basavaraj Bommai

Basavaraj Bommai

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ಅವರ ನಡುವೆ ಕಳೆದ ೨೪ ಗಂಟೆಗಳಿಂದ ನಿರಂತರವಾಗಿ ನಡೆಯುತ್ತಿರುವ ಜಟಾಪಟಿ, ಸಾರ್ವಜನಿಕ ತೇಜೋವಧೆಗಳಿಗೆ ಸಂಬಂಧಿಸಿ ಕಡೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶ ಮಾಡಿದ್ದಾರೆ.

ಘಟನಾವಳಿಗಳು, ಇಬ್ಬರ ನಡುವಿನ ಜಗಳದಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಬಗ್ಗೆ ಮೂಡುತ್ತಿರುವ ಅಭಿಪ್ರಾಯಗಳಿಂದ ಎಚ್ಚೆತ್ತಿರುವ ಸಿಎಂ ಬೊಮ್ಮಾಯಿ ಅವರು ಈ ಇಬ್ಬರ ನಡುವಿನ ಜಗಳಕ್ಕೆ ಇತಿಶ್ರೀ ಹಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.

ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಕಾರ್ಯನಿರ್ವಹಣೆ ನೇರವಾಗಿ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಇದರ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಮೇಲ್ವಿಚಾರಣೆ ಹೊಂದಿರುವುದರಿಂದ ಸಿಎಸ್‌ ಆಗಿರುವ ವಂದಿತಾ ಶರ್ಮಾ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರ ಅಧಿಕಾರಿಗಳ ಅತಿರೇಕದ ನಡವಳಿಕೆ ಬಗ್ಗೆ ಸಿಎಂ ಗರಂ ಆಗಿದ್ದು, ʻʻಕೂಡಲೇ ಇಬ್ಬರ ಕರೆಸಿ ವಿಚಾರಣೆ ಮಾಡಿ. ಜತೆಯಾಗಿ ಇಲ್ಲವೇ ಪ್ರತ್ಯೇಕವಾಗಿ ಕರೆಸಿಕೊಂಡು ಕ್ಲಾರಿಪಿಕೇಷನ್ ತೆಗೆದುಕೊಂಡು ಇಬ್ಬರಿಗೂ ಎಚ್ಚರಿಕೆ ಕೊಡಿʼʼ ಎಂದು ಸಿಎಂ ಸೂಚನೆ ನೀಡಿದ್ದಾರೆನ್ನಲಾಗಿದೆ.

ರೋಹಿಣಿ ಸಿಂಧೂರಿ ಅವರು ಈಗಾಗಲೇ ಮುಖ್ಯ ಕಾರ್ಯದರ್ಶಿ ಮುಂದೆ ದೂರು ನೀಡಿದ್ದಾರೆ. ʻʻನನ್ನ ವೈಯುಕ್ತಿಕ ಫೋಟೋ ಹರಿಬಿಟ್ಟು ನನ್ನ ಖಾಸಗಿ ಜೀವನಕ್ಕೆ ತೊಂದರೆ ಮಾಡಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ಮನವಿ ಮಾಡಿದ್ದಾರೆ. ಸಿಂಧೂರಿ ಅವರು ಪೊಲೀಸ್‌ ಮಹಾನಿರ್ದೇಶಕರಿಗೂ ದೂರು ನೀಡಿದ್ದಾರೆ.

ಇದೇ ವೇಳೆ, ರೋಹಿಣಿ ಸಿಂಧೂರಿ ಅವರ ನಡವಳಿಕೆಗಳ ಬಗ್ಗೆ ತಾನು ಈಗಾಗಲೇ ಸರ್ಕಾರಕ್ಕೆ ದೂರು ನೀಡಿದ್ದಾರೆ ಡಿ. ರೂಪಾ ಅವರು ಕೂಡಾ ಹೇಳಿಕೊಂಡಿದ್ದಾರೆ. ಇದೀಗ ಪ್ರಕರಣದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಟ್ಟಕ್ಕೆ ತಲುಪಿದಂತಾಗಿದ್ದು, ಅಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

ರೋಹಿಣಿ ಸಿಂಧೂರಿ ಅವರ ವಿರುದ್ಧ ೧೯ ಪ್ರಶ್ನೆಗಳನ್ನು ಹರಿಬಿಟ್ಟಿರುವ ಡಿ. ರೂಪಾ ಅವರು, ಸಿಂಧೂರಿ ಅವರು ತಮ್ಮ ಖಾಸಗಿ ಫೋಟೊಗಳನ್ನು ಐಎಎಸ್‌ ಅಧಿಕಾರಿಗಳಿಗೆ ಕಳುಹಿಸುವುದೇಕೆ ಎಂಬ ಪ್ರಶ್ನೆಯನ್ನು ಪ್ರಧಾನವಾಗಿ ಕೇಳಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : Sindhuri Vs Roopa : ಸಿಂಧೂರಿ ಅವರಿಂದಾಗಿ ಜಿಲ್ಲಾಧಿಕಾರಿಯೊಬ್ಬರ ಕುಟುಂಬವೇ ಬೇರ್ಪಟ್ಟಿದೆ ಎಂದರು ರೂಪಾ, ಯಾರವರು?

Exit mobile version