Site icon Vistara News

Sindhuri Vs Roopa : ಆಯಮ್ಮ ಕ್ಯಾನ್ಸರ್‌ ಇದ್ದ ಹಾಗೆ, ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ: ರೂಪಾ ಮಾತಿನ ಆಡಿಯೊ ವೈರಲ್

Mounish Roopa and Gangaraju

#image_title

ಬೆಂಗಳೂರು: ‌ʻಓ ಆಯಮ್ಮ ಕ್ಯಾನ್ಸರ್‌ ಇದ್ದ ಹಾಗೆ. ಯಾರನ್ನೂ ಬಿಡಲ್ಲ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ. ಡಿ.ಕೆ. ರವಿಗೆ ಆಗಿದ್ದೂ ಹಾಗೇನೇʼʼ- ಹೀಗೆ ರೋಹಿಣಿ ಸಿಂಧೂರಿ ಅವರನ್ನು ಉದ್ದೇಶಿಸಿ ಡಿ. ರೂಪಾ ಅವರು ಆಡಿದ ಮಾತು ಈಗ ವೈರಲ್‌ ಆಗಿದೆ. ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಜಗಳವನ್ನು (Sindhuri Vs Roopa) ನಿಲ್ಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದರು. ಆದರೆ, ಮಾತುಗಳು ಬೇರೆ ಬೇರೆ ಮೂಲಗಳಿಂದ ಎದ್ದುಬರುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಮೈಸೂರಿನ ಆರ್‌ಟಿಐ ಕಾರ್ಯಕರ್ತ ಗಂಗರಾಜು ಎಂಬವರ ಜತೆ ಡಿ. ರೂಪಾ ಅವರು ಮಾತನಾಡುತ್ತಾ ತಮ್ಮ ಸಂಸಾರದ ತಾಪತ್ರಯಗಳನ್ನೆಲ್ಲ ಹೇಳಿಕೊಳ್ಳುತ್ತಾರೆ. ಸುಮಾರು ೨೫ ನಿಮಿಷಗಳ ಆಡಿಯೋದಲ್ಲಿ ಹಲವು ಸ್ಫೋಟಕ ವಿಚಾರಗಳಿವೆ.

ಗಂಗರಾಜು ಎಂಬವರು ಕೆಲವೊಂದು ಭೂದಾಖಲೆಗಳಿಗೆ ಸಂಬಂಧಿಸಿ ಸರ್ವೇ ಇಲಾಖೆಯ ಆಯುಕ್ತರಾಗಿದ್ದ ಮೌನೀಶ್‌ ಮೌದ್ಗಿಲ್‌ ಅವರ ಬಳಿ ಆಗಾಗ ಬರುತ್ತಿರುವುದನ್ನು ಗಮನಿಸಿ ಡಿ. ರೂಪಾ ಅವರು ತರಾಟೆಗೆ ತೆಗೆದುಕೊಳ್ಳುವುದರಿಂದ ಆರಂಭಗೊಂಡು ನಾನಾ ಸಂಗತಿಗಳು ಬಿಚ್ಚಿಕೊಳ್ಳುತ್ತವೆ. ಆರಂಭದಲ್ಲಿ ಗಂಗರಾಜು ಅವರನ್ನು ರೋಹಿಣಿ ಅವರ ಪರವಾಗಿ ಕೆಲಸ ಮಾಡುವ ದಲ್ಲಾಳಿ ಎಂದೇ ಮೂದಲಿಸುವ ಡಿ. ರೂಪಾ ಅವರು ಆಗಾಗ ಇಂಥ ಕಡತಗಳನ್ನು ಹಿಡಿದುಕೊಂಡು ಬಂದರೆ ಹುಷಾರು, ಈಗಲೇ ಎದ್ದು ಹೋಗಿ ಎಂದು ಎಚ್ಚರಿಸುತ್ತಾರೆ. ರೋಹಿಣಿ ಸಿಂಧೂರಿ ಅವರನ್ನು ಅವಾಚ್ಯ ಶಬ್ದಗಳಿಂದ ಬೈಯುವ ಮಾತುಗಳೂ ದಾಖಲಾಗಿವೆ.

ಆದರೆ, ಒಮ್ಮೆ ಗಂಗರಾಜು ಅವರ ಮೇಲೆ ವಿಶ್ವಾಸ ಬಂದ ಬಳಿಕ ಅವರೊಂದಿಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಡಿ. ರೂಪಾ.

ರೋಹಿಣಿ ಸಿಂಧೂರಿ ಅವರು ಸರ್ವೇ ಇಲಾಖೆಯ ಆಯುಕ್ತರಾಗಿರುವ ತಮ್ಮ ಪತಿ ಮೌನೀಷ್‌ ಮೌದ್ಗಿಲ್‌ ಅವರ ಜತೆ ಒಳ್ಳೆಯ ಸಂಪರ್ಕ ಇಟ್ಟುಕೊಂಡು ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ ಎನ್ನುವುದು ಆಕೆಯ ಆಕ್ರೋಶದ ಮೂಲ. ಕೆಲವೊಂದು ಜಮೀನು ಖರೀದಿಯ ವಿಚಾರವೂ ಚರ್ಚೆಗೆ ಬರುತ್ತದೆ. ಒಂದು ಹಂತದಲ್ಲಿ, ʻʻಈಗ ನಾನು ಅವರನ್ನು (ಮೌನೀಷ್‌ ಮೌದ್ಗಿಲ್‌) ಆ ಇಲಾಖೆಯಿಂದ ವರ್ಗಾವಣೆ ಮಾಡುವಂತೆ ಕೇಳಿಕೊಂಡಿದ್ದೀನಿ ಎಂದು ರೂಪಾ ಹೇಳುತ್ತಾರೆ. ಆಗ ಗಂಗರಾಜು ಅವರು ʻಬೇಡ ಮೇಡಂ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆʼ ಅನ್ನುತ್ತಾರೆ.

ಅದಕ್ಕೆ ಸಿಟ್ಟಿಗೇಳುವ ರೂಪಾ, ʻʻಇದರಿಂದ ಫ್ಯಾಮಿಲಿಗೆ ಏನೂ ಉಪಯೋಗ ಇಲ್ಲಾರಿ.. ಯಾವತ್ತೂ ಮನೆ ಕಡೆಗೆ ಗಮನ ಕೊಡಲ್ಲ. ಬರೀ ಇಂಥವರ ಕೆಲಸ ಮಾಡಿಕೊಡುತ್ತಾರೆ. ನಾನು ಏನಾದರೂ ದುಡ್ಡು ಮಾಡಿಕೊಂಡಿದ್ದೇವಾ? ಅವರಿಗೆ ಮನೆಯ ಕಡೆಗೆ ಗಮನವೇ ಇಲ್ಲ- ಎನ್ನುತ್ತಾರೆ.

ನಮ್ಮ ಕುಟುಂಬ ಚೆನ್ನಾಗಿ ಇಲ್ವಲ್ಲ ಈವಾಗ.. ಅಂತಾರೆ ರೂಪಾ

ಗಂಗರಾಜು ಅವರು ʻನಮ್ಮ ಸಾಹೇಬ್ರು ಚೆನ್ನಾಗಿದ್ದಾರೆ. ನಿಮ್ಮ ಕುಟುಂಬ ಚೆನ್ನಾಗಿರಬೇಕುʼ ಅಂತಾರೆ. ಆಗ ರೂಪಾ ಅವರು, ಚೆನ್ನಾಗಿಲ್ವಲ್ಲ ಈಗ.. ಆಯಮ್ಮನ ದೆಸೆಯಿಂದ ಚೆನ್ನಾಗಿ ಇಲ್ವಲ್ಲ ಈವಾಗ ಅಂತ ಹೇಳುತ್ತಾರೆ (ರೂಪಾ ನಗುತ್ತಾರೆ).

ಹಾಗೆಲ್ಲ ಅಂದುಕೊಳ್ಳಬಾರದು ಅಂತ ಗಂಗರಾಜು ಸಮಾಧಾನ ಹೇಳಿದರೂ, ಯಾಕೆ ಅಂದುಕೊಳ್ಳಬಾರದು, ಕಣ್ಣಿಗೆ ಕಾಣುತ್ತಲ್ವಾ ಈವಾಗ ಎಂದು ಕೇಳುತ್ತಾರೆ ರೂಪಾ.

ʻಪದೇಪದೆ ಅವರ ಕಚೇರಿಗೆ ಹೋಗ್ಬೇಡಿ. ನಾನು ಅವರನ್ನು ಹೆಚ್ಚು ಸಮಯ ಅಲ್ಲೇ ಇರಲಿಕ್ಕೆ ಬಿಡಲ್ಲʼʼ ಎಂದು ಹೇಳುತ್ತಾರೆ ರೂಪಾ.

ಆಗ ಗಂಗರಾಜು ಅವರು, ಹಾಗೆಲ್ಲ ಮಾಡ್ಬೇಡಿ, ಒಳ್ಳೆಯ ಆಫೀಸರ್‌ ಮೇಡಂ ಇರಲಿ ಅಂತಾರೆ. ಆಗ ರೂಪಾ ಅವರು, ಇಂಥವರು ಅವರ ಬೆನ್ನು ಬೀಳ್ತಾರಲ್ಲಾ ಅಂತ ಕೇಳುತ್ತಾರೆ. ಜತೆಗೆ ʻಓ ಆಯಮ್ಮ ಕ್ಯಾನ್ಸರ್‌ ಇದ್ದ ಹಾಗೆ. ಯಾರನ್ನೂ ಬಿಡಲ್ಲ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ. ಡಿ.ಕೆ. ರವಿಗೆ ಆಗಿದ್ದೂ ಹಾಗೇನೇʼʼ ಎನ್ನುತ್ತಾರೆ.

ಆಗ ಗಂಗರಾಜು ಅವರು, ಕ್ಯಾನ್ಸರ್‌ಗೂ ಟ್ರೀಟ್‌ಮೆಂಟ್‌ ಇದ್ಯಲ್ವಾ ಮೇಡಂ. ನಾನೂ ಸಾಹೇಬ್ರಿಗೆ ಹೇಳ್ತೀನಿ.. ಇದೆಲ್ಲ ಬಿಟ್ಬಿಡಿ ಅಂತ ನಾನೂ ಹೇಳ್ತೀನಿ, ಸಾಹೇಬ್ರು ನನ್ನ ಜತೆ ಕ್ಲೋಸಾಗಿ ಮಾತನಾಡುತ್ತಾರೆ ಅಂತಾರೆ. ಆಗ ರೂಪಾ ಮೆಲ್ಲಗೆ, ʻಬಿಡಿ ಅವೆಲ್ಲ ಆಗಲ್ಲʼ ಅಂತಾರೆ.

ʻʻಆಯಮ್ಮ ಅವರ ಹಿಂದೆನೇ ಬಿದ್ದಿದ್ದಾಳೆ. ಎಲ್ಲ ಬರೆಸ್ಕೋತಾಳೆ. ಲೋಕಾಯುಕ್ತ ಕೇಸಿನ ರಿಪ್ಲೈ ಬರೆಯೋದನ್ನೂ ಇವರತ್ರ ಮಾಡಿಸಿಕೊಳ್ತಾಳೆʼʼ ಎಂದು ರೂಪಾ ಹೇಳುತ್ತಾರೆ.

ರೋಹಿಣಿ ಅವರ ಮೇಲಿನ ಆಕ್ರೋಶ ಅವರ ಮಾತುಗಳಲ್ಲಿ ಎದ್ದು ಕಾಣುತ್ತದೆ. ಈ ನಡುವೆ, ಮೌನೀಷ್‌ ಮೌದ್ಗಿಲ್‌ ಅವರನ್ನು ಬೇರೆ ಇಲಾಖೆಗೆ ವರ್ಗ ಮಾಡಿ ಎಂದು ಡಿ. ರೂಪಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮನವಿ ಮಾಡಿ ವಾಟ್ಸ್‌ ಆಪ್‌ನಲ್ಲಿ ಮೆಸೇಜ್‌ ಕಳುಹಿಸಿದ್ದರ ಕುರಿತ ಚರ್ಚೆಗೂ ಗಂಗರಾಜು ಮತ್ತು ಡಿ. ರೂಪಾ ನಡುವಿನ ಮಾತುಕತೆಗೂ ತಾಳೆಯಾಗುತ್ತದೆ.

ಇದನ್ನೂ ಓದಿ : Sindhuri Vs Roopa : ಡಿ. ರೂಪಾ ರಿಲೀಸ್‌ ಮಾಡಿದ ವಾಟ್ಸ್‌ಆಪ್‌ ಚಾಟ್‌ ನಕಲಿ; ಸಿಂಧೂರಿ ಪತಿ ವಾದವೇನು?

Exit mobile version