ಬೆಂಗಳೂರು: ಮುಜರಾಯಿ ಇಲಾಖೆಯ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಸ್ತುಶಃ ಚಾರ್ಜ್‌ಶೀಟನ್ನೇ ಸಲ್ಲಿಸಿದ ಐಪಿಎಸ್ ಅಧಿಕಾರಿ ರೂಪಾ ಡಿ. (Sindhuri Vs Roopa) ಅವರು ಇದೀಗ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಮುಂದೆ ಹಾಜರಾಗಿ ಏಳು ಆರೋಪಗಳ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಮೈಸೂರಿನ ಪಾರಂಪರಿಕ ಕಟ್ಟಡದ ಬದಲಾವಣೆ, ಸ್ವಿಮ್ಮಿಂಗ್ ಪೂಲ್ ನಿರ್ಮಾಣವೂ ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖ ಮಾಡಿರುವ ಡಿ. ರೂಪಾ ಅವರು, ತನಿಖಾ ಸಂಸ್ಥೆಗಳು ಆಕೆಯ ವಿರುದ್ಧ ವರದಿಯನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಆಕೆಯ ಮೇಲೆ ಯಾವುದೇ ಕ್ರಮ ಆಗದಂತೆ ರಕ್ಷಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸಿಎಸ್ ವಂದಿತಾ ಶರ್ಮ ಅವರನ್ನು ಭೇಟಿ ಮಾಡಿ ಮರಳಿ ಬರುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಗಳನ್ನು ಬಿಟ್ಟು ಉಳಿದಂತೆ ಆಕೆ ಮಾಡಿರುವ ಭ್ರಷ್ಟಾಚಾರಗಳ ಬಗ್ಗೆ ದೂರು ನೀಡಿರುವುದಾಗಿ ತಿಳಿಸಿದರು.
ರೂಪಾ ಅವರು ನೀಡಿದ ದೂರಿನಲ್ಲೇನಿದೆ?
೧. ಕೋವಿಡ್ ಸಮಯದಲ್ಲಿ ಮೈಸೂರಿನ ಡಿ.ಸಿ. ಕಚೇರಿಯ ವಿನ್ಯಾಸ ಬದಲಿಸಿ, ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ ಬಗ್ಗೆ ತನಿಖೆ ನಡೆಸಬೇಕು. ಇದರ ಪ್ರಾಥಮಿಕ ತನಿಖೆಯಲ್ಲಿ ಸಿಂಧೂರಿ ಅವರ ವಿರುದ್ಧ ವರದಿ ನೀಡಲಾಗಿದೆ.
೨. ಜಾಲಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗೆ ಶುಲ್ಕರಹಿತವಾಗಿ ವಸ್ತುಗಳನ್ನು ಖರೀದಿಸಲಾಗಿದೆ. ಅದರ ಬಗ್ಗೆ ತನಿಖೆ ನಡೆಸಬೇಕು.
೩. ರೋಹಿಣಿ ಅವರ ವಿರುದ್ಧ ಲೋಕಾಯುಕ್ತ ಕಚೇರಿಗೆ ರವಿಚಂದ್ರೇಗೌಡ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ಕೋರಿಕೆ.
೪. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವತಿಯಿಂದ ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ 10 ಕೋಟಿ ಟೆಂಡರ್ ಬಗ್ಗೆ ನೀಡಿದ ದೂರಿನ ತನಿಖೆಯಾಗಬೇಕು.
೫. ಮೈಸೂರಿನ ಅಡ್ಮಿನಿಸ್ಟ್ರೇಶನ್ ಟ್ರೈನಿಂಗ್ ಸಂಸ್ಥೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ಮನವಿ.
೬. ಮೈಸೂರಿನ ಮನೆಯನ್ನು ಬಿಟ್ಟುಹೋಗುವ ವೇಳೆ ಕೆಲವು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋದ ಆರೋಪ
೭. ಹರ್ಷ ಗುಪ್ತಾ ಅವರು ರೋಹಿಣಿ ವಿರುದ್ಧ ಎರಡು ವರದಿಗಳನ್ನು ಸಲ್ಲಿಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು
೮. ಮಾಜಿ ಸಚಿವ ಸಾರಾ ಮಹೇಶ್ ಸದನದಲ್ಲಿ ರೋಹಿಣಿ ವಿರುದ್ಧ ಮಾತನಾಡಿದ್ದರ ಬಗ್ಗೆ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಕೋರಿಕೆ.
ಇದನ್ನೂ ಓದಿ : Sindhuri Vs Roopa : ರೋಹಿಣಿ ಸಿಂಧೂರಿಗೆ ರೂಪವೇ ಶತ್ರು; ಅವರು ಮೂರು ಕಾಲೇಜು ಬದಲಾಯಿಸಿದ್ದೇಕೆ?