Site icon Vistara News

Sindhuri Vs Roopa : IAS ಅಧಿಕಾರಿಗಳಿಗೆ ಅಸಭ್ಯ ಫೋಟೊ ಕಳುಹಿಸುತ್ತಿದ್ದ ರೋಹಿಣಿ ಸಿಂಧೂರಿ; ಫೋಟೊ ಬಿಡುಗಡೆ ಮಾಡಿದ ರೂಪಾ IPS

Rohini sindhuri

#image_title

ಬೆಂಗಳೂರು: ಈಗ ಮುಜರಾಯಿ ಇಲಾಖೆಯ ಕಮಿಷನರ್‌ ಆಗಿರುವ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ. ರೂಪಾ ನಡುವಿನ ಜಗಳ ವಿಪರೀತದ ಹಂತಕ್ಕೇರಿದೆ. ಮೈಸೂರಿನ ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ಅವರ ಜತೆ ರೋಹಿಣಿ ಅವರು ಸಂಧಾನ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಇಟ್ಟುಕೊಂಡು ಐಎಎಸ್‌ ಅಧಿಕಾರಿಯ ನಡೆಗಳನ್ನು ತೀವ್ರ ವಿಮರ್ಶೆಗೆ ಒಳಪಡಿಸಿರುವ ಡಿ.ರೂಪಾ ಅವರು ಹಲವಾರು ಖಾಸಗಿ ವಿಚಾರಗಳನ್ನು ಕೂಡಾ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಒಂದು ರೋಹಿಣಿ ಸಿಂಧೂರಿ ಅವರು ತಮ್ಮ ಖಾಸಗಿಯಾಗಿರುವ, ಅಷ್ಟೇನೂ ಸಭ್ಯವಲ್ಲದ ಫೋಟೊಗಳನ್ನು ಐಎಎಸ್‌ ಅಧಿಕಾರಿಗಳಿಗೆ ಕಳುಹಿಸುತ್ತಿದ್ದರು ಎಂದು ರೂಪಾ ಆರೋಪಿಸಿದ್ದಾರೆ. ಮಾತ್ರವಲ್ಲ ಅದಕ್ಕೆ ಪೂರಕವಾಗಿ ಫೋಟೊ ದಾಖಲೆಗಳನ್ನು ನೀಡಿದ್ದಾರೆ.

ರೋಹಿಣಿ ಸಿಂಧೂರಿ ಅವರು ಕೆಲವು ಐಎಎಸ್ ಅಧಿಕಾರಿಗಳಿಗೆ ಅಷ್ಟೇನೂ ಸಭ್ಯವಲ್ಲ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ಡಿ. ರೂಪಾ.

ʻʻಒಂದಲ್ಲ, ಎರಡಲ್ಲ ಅನೇಕ ಐಎಎಸ್‌ ಅಧಿಕಾರಿಗಳಿಗೆ ತನ್ನ ಅಷ್ಟೇನೂ ಸಭ್ಯವಲ್ಲದ ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿರುವ ಆಪಾದನೆ ಆಕೆಯ ಮೇಲೆ ಇದೆ. ಆ ಚಿತ್ರಗಳು ನನಗೆ ಸಿಕ್ಕಿವೆ. ಇದು ಖಾಸಗಿ ವಿಷಯ ಆಗುವುದಿಲ್ಲ. All India service conduct rules ಪ್ರಕಾರ ಹಿರಿಯ ಅಧಿಕಾರಿಗಳು ಈ ರೀತಿಯ ಚಿತ್ರಗಳನ್ನು ಕಳುಹಿಸುವುದು, ಸಂಭಾಷಣೆ ಮಾಡುವುದು ಅಪರಾಧ. ಈ ಆಪಾದನೆಗಳನ್ನು ಸರ್ಕಾರ ತನಿಖೆ ಮಾಡುವುದೇ, ನೋಡಬೇಕಿದೆ. ಏಕೆಂದರೆ ಸತ್ಯಾಸತ್ಯತೆ ಹೊರ ಬರಬೇಕಿದೆʼʼ ಎಂದು ಹೇಳಿದ್ದಾರೆ ಡಿ. ರೂಪಾ.

ಯಾವ ರೀತಿಯ ಚಿತ್ರಗಳಿವೆ?

ರೂಪಾ ಅವರು ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ರೋಹಿಣಿ ಅವರು ತಲೆಗೆ ಎಣ್ಣೆ ಹಾಕಿಕೊಳ್ಳುವುದು, ಒಂದಿಷ್ಟು ಮಾದಕವಾಗಿ ಕಾಣಿಸಿಕೊಂಡಿರುವುದು, ಮಲಗಿಕೊಂಡಿರುವುದು ಸೇರಿದಂತೆ ಹಲವು ಚಿತ್ರಗಳಿವೆ. ಇವುಗಳೆಲ್ಲ ಪ್ರಚೋದನಾತ್ಮಕವಾಗಿವೆ ಎನ್ನುವುದು ಡಿ. ರೂಪಾ ಆರೋಪ.

ರೂಪಾ ಅವರು ಫೇಸ್‌ ಬುಕ್‌ನಲ್ಲಿ ಹಾಕಿರುವ ರೋಹಿಣಿ ಸಿಂಧೂರಿ ಫೋಟೊಗಳು

ಇವುಗಳ ಬಗ್ಗೆ ರೂಪಾ ಅವರು ಹೇಳುವುದೇನು?

ಈ ರೀತಿಯ ಪಿಕ್ಚರ್ಸ್ normal ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್ ಗಳ one to one ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ private matter ಆಗುವುದಿಲ್ಲ ಐಎಎಸ್ SERVICE CONDUCT RULES ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ investigate ಮಾಡಬಹುದು. ಸಲೂನ್ haircut chitra, ತಲೆದಿಂಬು ಇತ್ತು ಮಲಗಿ ತೆಗೆದಿರುವ ಚಿತ್ರ. Normal ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise ಎಂದು ಹೇಳಿದ್ದಾರೆ ರೂಪಾ.

ಡಿ.ಕೆ. ರವಿ ನಿಗೂಢ ಸಾವಿನ ವಿಚಾರವೂ ಉಲ್ಲೇಖ

ಡಿ. ರೂಪಾ ಅವರ ಆರೋಪಪಟ್ಟಿಯಲ್ಲಿ ಡಿ.ಕೆ. ರವಿ ಅವರ ಸಾವಿನ ಉಲ್ಲೇಖವೂ ಇದೆ.

ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ನಿಗೂಢ ಆತ್ಮಹತ್ಯೆ ಪ್ರಕರಣದ ಉಲ್ಲೇಖವನ್ನೂ ಡಿ.ರೂಪಾ ಅವರು ಮಾಡಿದ್ದಾರೆ. ಇದರಲ್ಲಿ ರೋಹಿಣಿ ಸಿಂಧೂರಿ ಅವರ ಪಾತ್ರವನ್ನೂ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಅದರ ಜತೆಗೆ ಇನ್ನೊಬ್ಬ ಅಧಿಕಾರಿ ಕೂಡಾ ರೋಹಿಣಿ ಸಿಂಧೂರಿ ಅವರ ಮದುವೆಗಾಗಿ ಕಾದು ಕಾದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಜತೆಗೆ ರೋಹಿಣಿ ಸಿಂಧೂರಿ ಅವರು ಐಎಎಸ್‌ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ಕಳುಹಿಸುತ್ತಿದ್ದರು ಎಂದೂ ಹೇಳಿದ್ದಾರೆ.

ರೋಹಿಣಿ ಖಾಸಗಿ ಫೋಟೊಗಳ ಕುರಿತು ಡಿ ರೂಪಾ ಪ್ರತಿಕ್ರಿಯಿಸಿದ್ದು ಹೀಗೆ

ಡಿ.ಕೆ. ರವಿ ಜತೆಗಿನ ಚಾಟ್ಸ್‌ನಲ್ಲಿ ಎಲ್ಲವೂ ಇದೆ

ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ. ರವಿ ಸಂಭಾವಿತ ವ್ಯಕ್ತಿ. ಸಿಬಿಐ ವರದಿಯಲ್ಲಿ ಅವರಿಬ್ಬರ ಚಾಟ್ಸ್ (ಮಾತುಕತೆ) ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಲಿಮಿಟ್‌ ಕ್ರಾಸ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ.‌

ಡಿ.ಕೆ. ರವಿ ಮಾತ್ರವಲ್ಲ ಹರೀಶ್‌ ಆತ್ಮಹತ್ಯೆಗೂ ಲಿಂಕ್‌!

ಡಿ.ಕೆ ರವಿ ತೀರಿಕೊಂಡ ಕೆಲವು ತಿಂಗಳು ಮುಂಚೆ ಕನ್ನಡದ ಹುಡುಗ, ಐಎಎಸ್‌ ಅಧಿಕಾರಿ ಎನ್‌. ಹರೀಶ್ ಇವರ ಬ್ಯಾಚ್‌ಮೇಟ್‌. ಮದುವೆ ಆಗಿರಲಿಲ್ಲ ಆತ. ಈಕೆಗಾಗಿ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡದ್ದು ಎಂದು ಹಲವರು ಹೇಳಿದರೂ ನಾನು ಅದನ್ನು ನಂಬಲಿಲ್ಲ, ಈಗಲೂ ನಂಬಿಲ್ಲ.

ಇವರಿಂದಾಗಿ ಜಿಲ್ಲಾಧಿಕಾರಿ ಸಂಸಾರವೇ ಬೇರ್ಪಟ್ಟಿದೆ!

ಈಕೆ ಪ್ರೊಬೇಷನರಿ ಅಂತ ಇದ್ದಾಗ, ಅಲ್ಲಿಯ ಡಿಸಿ ಹಾಗೂ ಅವರ ಪತ್ನಿ ನೆರೆಯ ಜಿಲ್ಲೆಯ ಜಿಲ್ಲಾಧಿಕಾರಿ ಇವರಿಬ್ಬರ ಸಂಸಾರದಲ್ಲಿ ಹುಳಿ ಬಿದ್ದು ಅವರು ಬೇರ್ಪಟ್ಟಿದ್ದಾರೆ ಹಾಗೂ ಇದು ಈಕೆಯ ದೆಸೆಯಿಂದ ಎಂಬ ಮಾತು ಅನೇಕರ ಬಾಯಲ್ಲಿ ಕೇಳಿದ್ದೇನೆ.

ಡಿ. ರೂಪಾ ಅವರು ಮಾಡಿರುವ ಗಂಭೀರ ಆರೋಪಗಳಿಗೆ ರೋಹಿಣಿ ಸಿಂಧೂರಿ ಅವರು ಏನು ಉತ್ತರ ಕೊಡುತ್ತಾರೆ ಎನ್ನುವ ಕುತೂಹಲ ಎಲ್ಲೆಡೆ ಇದೆ.

ರೋಹಿಣಿ ಸಿಂಧೂರಿ ಅವರ ಮೇಲೆ ಡಿ. ರೂಪಾ ಮಾಡಿದ ಇತರ ಆರೋಪಗಳು ಇಂತಿವೆ

1. ರೋಹಿಣಿ ಸಂಧಾನಕ್ಕೆ ಹೋಗಿದ್ದಾರೆ ಅಂದರೆ ಏನರ್ಥ?

ರೋಹಿಣಿ ಸಿಂಧೂರಿ ಅವರು ಶಾಸಕ ಸಾರಾ ಮಹೇಶ್ ಅವರ ಬಳಿ ಸಂಧಾನಕ್ಕೆ ಹೋಗಿದ್ದರು ಎಂಬ ಸುದ್ದಿ ವೈರಲ್‌ ಆಗಿದೆ. ಸಂಧಾನಕ್ಕೆ ಹೋಗುವುದು ಅಂದರೆ ಅರ್ಥ ಏನು? ಯಾವ ಐಎಎಸ್ ಅಧಿಕಾರಿ ಕೂಡ ಎಂಎಲ್ಎ ಅಥವಾ ರಾಜಕೀಯ ವ್ಯಕ್ತಿಗಳ ಜೊತೆ, ತಾವು ನಿರ್ವಹಿಸಿದ ಕರ್ತವ್ಯ ನಿಮಿತ್ತ ಸಂಧಾನಕ್ಕೆ ಹೋಗಿದ್ದು ನಾನು ಇದೇ ಮೊದಲು ಕೇಳಿದ್ದು. ಹಾಗಾದರೆ, ರೋಹಿಣಿ ಸಿಂಧೂರಿ ಐಎಎಸ್ ಸಂಧಾನಕ್ಕೆ ಹೋಗಿದ್ದು ಯಾಕೆ? ಆಕೆ ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ? ತಮ್ಮ ಕರ್ತವ್ಯ ಲೋಪದ ಬಗ್ಗೆಯೋ, ತಮ್ಮ ಭ್ರಷ್ಟಾಚಾರ ಬಗ್ಗೆಯೋ ಏನು?

2. ಮಂಡ್ಯ ಸಿಇಒ ಆಗಿದ್ದಾಗ ಟಾಯ್ಲೆಟ್ಸ್‌ ಬಗ್ಗೆ ನಕಲಿ ಲೆಕ್ಕ ಕೊಟ್ಟರು!

ರೋಹಿಣಿ ಸಿಂಧೂರಿ ಅವರು ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದಾಗ ಅವರು ಕಟ್ಟಿಸಿದ ಟಾಯ್ಲೆಟ್‌ಗಿಂತ ಹೆಚ್ಚು ತೋರಿಸಿ figures fudge ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ತೆಗೆದುಕೊಂಡರು ಎಂಬ ಆರೋಪ ಕೇಳಿ ಬಂತು. ಅದರ ತನಿಖೆಯೇ ಆಗಲಿಲ್ಲ.

3. ಆಕ್ಸಿಜನ್‌ ಇಲ್ಲದೆ 24 ಮಂದಿ ಸತ್ತ ಆಪಾದನೆಯಿಂದ ಹೇಗೋ ಪಾರು

ಚಾಮರಾಜನಗರ 24 ಜನರು ಆಮ್ಲಜನಕ ಇಲ್ಲದೇ ಸತ್ತಾಗ, ಆಪಾದನೆಗಳು ಇವರ ಮೇಲೇ ನೇರವಾಗಿ ಬಂತು. ಅದರಿಂದ ಹೇಗೋ ಪಾರಾದರು.

4. ಶಿಲ್ಪಾ ನಾಗ್‌ ಅವರ ಜತೆ ಜಗಳ ಯಾಕೆ?

ಮೈಸೂರಿನಲ್ಲಿ ಅಧಿಕಾರಿಯಾಗಿದ್ದ ಕನ್ನಡದ ಹುಡುಗಿ ಶಿಲ್ಪಾ ನಾಗ್ ಅವರ ಜೊತೆ ಜಗಳ, ರಂಪ ಯಾತಕ್ಕಾಗಿ? ಅಲ್ಲಿ ಯಾವುದೇ ಮೌಲ್ಯಾಧಾರಿತ ವಸ್ತು ವಿಷಯ ಇರಲಿಲ್ಲ. ಬರೀ ಕೋಳಿ ಜಗಳ. ಶಿಲ್ಪಾ ಅವರು ಹೆಚ್ಚು ಕೆಲಸ ಮಾಡಿದ್ದರು. ಅವರ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಪಾಸಿಟೀವ್‌ ಸುದ್ದಿಗಳು ಬಂದಿದ್ದರಿಂದ ಅದನ್ನು ಸಹಿಸಿಕೊಳ್ಳಲಾಗದೆ ಶಿಲ್ಪಾಗೆ ಹೆರೇಸ್‌ಮೆಂಟ್‌ ಮಾಡಿದರು ಎಂದು ಕೆಲವರು ಹೇಳಿದರು. ಕಡೆಗೆ ಮೈಸೂರಲ್ಲಿ ಗೌಡ ಸಮುದಾಯದ ಪತ್ರಕರ್ತರು ಅವರಿಗೆ ಜಾತಿ ಬೆಂಬಲ ನೀಡುತ್ತಿದ್ದಾರೆ ಎಂಬ ಮಟ್ಟಿಗೆ ಸ್ವತಃ ಇಲ್ಲದ ಜಾತೀಯತೆ ಮೈಸೂರಿನ ಜರ್ನಲಿಸ್ಟ್‌ಗಳಲ್ಲಿ ಬಿತ್ತಿದರು ಈಕೆ ಎಂದು ಅನೇಕರು ಹೇಳುತ್ತಾರೆ.

5. ಹರ್ಷ ಗುಪ್ತ ಅವರ ಜತೆಗೂ ಜಗಳ ಅಂದರೆ..

ಹರ್ಷ ಗುಪ್ತ ಅವರು ಅತ್ಯಂತ ಪ್ರಾಮಾಣಿಕ ಅಧಿಕಾರಿ. ಅವರ ಜೊತೆ ಜಗಳ ಮಾಡಿದ್ದಾರೆ. ಎಲ್ಲಾ ಐಎಎಸ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದೆ.

6. ಮಣಿವಣ್ಣನ್‌ ಅಜಾತಶತ್ರು, ಅವರ ಜತೆಗೂ ಜಗಳ ಅಂದ್ರೆ..

ಮಣಿವಣ್ಣನ್ ಐಎಎಸ್ ಜೊತೆ ಲೇಬರ್/ ಕಾರ್ಮಿಕ ಇಲಾಖೆಯಲ್ಲಿ ಇದ್ದಾಗ ಜಗಳ ಮಾಡಿದ್ದು ಜಗಜನಿತ. ಮಣಿವಣ್ಣನ್ ಒಂದು ರೀತಿ ಅಜಾತಶತ್ರು. ಅಂಥದರಲ್ಲಿ…ಅವರ ಜೊತೆಗೂ ಜಗಳ ಮಾಡಿಕೊಂಡಿದ್ದಾರೆ.

7. ಮಹೇಶ್‌ ವಿರುದ್ಧದ ಒಂದು ಆರೋಪಕ್ಕೂ ಪ್ರೂಫ್‌ ನೀಡಿಲ್ಲ

ಕೆ.ಆರ್‌. ನಗರ ಶಾಸಕ ಸಾ.ರಾ ಮಹೇಶ್‌ ಅವರ ಮೇಲೆ ಅನೇಕ ಆಪಾದನೆಗಳನ್ನು ಮಾಡಿದ ಈಕೆ ಒಂದನ್ನೂ ಪ್ರೂವ್ ಮಾಡಲಿಲ್ಲ. ಅದಕ್ಕೇ ಸಂಧಾನಕ್ಕೆ ಹೋದರಾ?

8. ಪ್ರತಾಪ್‌ ಸಿಂಹ ಅವರ ಮೇಲೂ ನಿರಾಧಾರ ಆರೋಪ

ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲೆ ಕೂಡ ಅನೇಕರ ಬಳಿ ಈಕೆ ಪ್ರೂವ್‌ ಮಾಡಲಾರದ ಆಪಾದನೆಗಳನ್ನು ಮಾಡಿದರು. ಅಂದರೆ, ಪ್ರತಾಪ್ ಸಿಂಹ ಅವರು ಖಾಸಗಿ ಕ್ಲಿನಿಕ್‌ಗಳಿಗೆ ಆಮ್ಲಜನಕ ಕೇಳುತ್ತಾ ತಮ್ಮ ಸ್ವಂತ ಲಾಭಕ್ಕೆ ನಿಂತಿದ್ದಾರೆ ಎಂಬ ನಿರಾಧಾರ ಆರೋಪ ಮಾಡಿದರು. ನಿಜ ಇದ್ದಿದ್ದೇ ಆದರೆ ಅದನ್ನು ಪ್ರೂವ್‌ ಯಾಕೆ ಮಾಡಲಿಲ್ಲ?

9. ಹಾಸನದಿಂದ ಎತ್ತಂಗಡಿ ಮಾಡಿದಾಗ ಅರ್ಜಿ ಬರೆದುಕೊಟ್ಟಿದ್ದು ನನ್ನ ಗಂಡ

ಹಾಸನದಲ್ಲಿ ತನ್ನನ್ನು ಒಂದು ವರ್ಷದ ಒಳಗೆ ಎತ್ತಂಗಡಿ ಮಾಡಿದ ಸರ್ಕಾರದ ವಿರುದ್ಧ CATಯಲ್ಲಿ (Central administrative tribunal) ದಾವೆ ಹೂಡಿದರು. ಆ ದಾವೆಗೆ ಅರ್ಜಿ ಬರೆದುಕೊಟ್ಟಿದ್ದೇ ನನ್ನ ಪತಿ ಮೌನೀಶ್‌ ಮುದ್ಗಿಲ್‌ ಅವರು. ನನ್ನೆದುರಿಗೆ ಬರೆದು ಬರೆದು ಆಕೆಗೆ, ಆಕೆಯ ತಂದೆಗೆ, ಲಾಯರ್‌ಗೆ ಕಳಿಸಿದ್ದರು. ಆದರೆ ಈಕೆ, ಮೈಸೂರು ಡಿಸಿ ಆಗಿ ಹೋದದ್ದು ಹೇಗೆ? ತನಗಿಂತ ಕೇವಲ 29 ದಿನ ಮುಂಚೆ ಮೈಸೂರಿಗೆ ಡಿಸಿ ಎಂದು ವರ್ಗಾವಣೆ ಆಗಿದ್ದ ಕನ್ನಡ ಹುಡುಗ ಶರತ್ ಅವರನ್ನು ಒಕ್ಕಲೆಬ್ಬಿಸಿದ್ದು ನ್ಯಾಯವೇ? ತನ್ನಂತೆ ಪರರು ಎಂಬ ಭಾವನೆ ಇಲ್ಲವೇಕೆ? 29 ದಿನದಲ್ಲಿ ಯಾವುದೇ ಕಳಂಕ, ಆರೋಪ ಇಲ್ಲದ ಶರತ್ ಅವರನ್ನು ರಿಪ್ಲೇಸ್‌ ಮಾಡಿದ್ದು ಈಕೆ ಯಾವ ಉನ್ನತ ಮಟ್ಟದ ಪ್ರಭಾವದಿಂದ?

10. ಕೊರೊನಾ ಟೈಮಲ್ಲಿ ಪಾರಂಪರಿಕ ಕಟ್ಟಡಕ್ಕೆ ಟೈಲ್ಸ್‌ ಹಾಕಿದ್ದು ಸರಿನಾ?

ಐಎಎಸ್‌ ಅಧಿಕಾರಿ ಡಾ. ರವಿಶಂಕರ್‌ ಈಕೆಯ ಮೇಲೆ ಪ್ರಾಥಮಿಕ ತನಿಖೆಯಲ್ಲಿ ತಪ್ಪು ಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಪಾರಂಪರಿಕ ಕಟ್ಟಡ ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು ಸರಿಯಾ? ಮನುಷ್ಯತ್ವ ಇರೋರು ಕೋವಿಡ್‌ ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ? John was fiddling when Rome was burning ಅಂದ ಹಾಗೆ. Marie Antoinette ಎಂಬ ರಾಣಿ ಜನರು ಬ್ರೆಡ್‌ (ಆಹಾರ) ಇಲ್ಲದೆ ಸಾಯ್ತ್ತಿದ್ದಾರೆ ಅಂತ ಕೇಳಿಸಿಕೊಂಡಾಗ, ಬ್ರೆಡ್‌ ಇಲ್ಲದೆ ಇದ್ದರೆ ಏನು, ಜನರು ಕೇಕ್‌ ತಿನ್ನಲಿ ಅಂದಳಂತೆ. ಆ ರಾಣಿಯ ನೆನಪಾಯಿತು.

11. ಆಗದವರ ಮೇಲೆ ಸೋಷಿಯಲ್ ಮೀಡಿಯಾ ಟ್ರೋಲ್

ಹಿಂದೆ ನನಗೆ ಒಬ್ಬರು ಮೆಸೇಜ್ ಮಾಡಿ ತಾವು ರೋಹಿಣಿ ಸಿಂಧೂರಿ ಪರವಾಗಿ ಸೋಷಿಯಲ್‌ ಮೀಡಿಯಾ ಹ್ಯಾಂಡ್ಲ್‌ ಮಾಡುವ ಏಜೆನ್ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದುದನ್ನು ತಿಳಿಸಿದರು. ಅಲ್ಲಿ ಹೇಗೆ ಈಕೆಯ ಪರವಾಗಿ ಸುದ್ದಿ, ಫೋಟೊ, ವಿಡಿಯೊ ಕ್ರಿಯೇಟ್‌ ಮಾಡುತ್ತಾರೆ, ಹೇಗೆ ಈಕೆಯ ವಿರುದ್ಧ ಇರುವವರನ್ನು ಟ್ರೋಲ್ ಮಾಡುವ ಕಂಟೆಂಟ್‌ ಹಾಗೂ ಹ್ಯಾಂಡಲ್ ಗಳು ತಯಾರಾಗುತ್ತವೆ ಎಂಬುದು ಹೇಳಿದ್ದರು. ನಾನು ಅದನ್ನು ಫೇಸ್ಬುಕ್ ನಲ್ಲಿಯೂ ಹಾಕಿದ್ದೆ.

‌12. ಅಗ್ಗದ ಬ್ಯಾಗ್‌ ಹೆಚ್ಚು ಬೆಲೆಗೆ ಮಾರಾಟ: ತನಿಖೆಗೆ ಅನುಮತಿ ನಿರಾಕರಿಸಿದ್ದೇಕೆ ಸರಕಾರ?

ಈಕೆಯ ಮೇಲೆ ಅಗ್ಗದ ಬ್ಯಾಗ್‌ಗಳನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ದೂರು ಲೋಕಾಯುಕ್ತದಲ್ಲಿ ನೋಂದಣಿ ಆಗಿದ್ದು, ಅದರ ತನಿಖೆ ಕೈಗೆತ್ತಿಕೊಳ್ಳಲು ಲೋಕಾಯುಕ್ತ ಈಗಾಗಲೇ ಸರ್ಕಾರಕ್ಕೆ ಬರೆದಿದೆ. ಆದರೆ ಸರ್ಕಾರ ಮಟ್ಟದಲ್ಲಿ ಕಾರಣ ಕೊಡದೆ ಆಕೆಯನ್ನು ತನಿಖೆಗೆ ಒಳಪಡಿಸಲು ಅನುಮತಿ ನಿರಾಕರಣೆ ಮಾಡಲಾಗಿದೆ. ಅದರ ಪ್ರತಿ ನನ್ನ ಬಳಿ ಇದೆ. ಸಾಮಾನ್ಯವಾಗಿ ಅಧಿಕಾರಿಗಳಿಗೆ ಈ ರೀತಿಯ ಬೆಂಬಲ ಇರುತ್ತದೆಯೇ?

13. ಲಕ್ಕಿ ಅಲಿ ಕಾರ್ಯಕ್ರಮಕ್ಕೆ ರೌಡಿಗಳನ್ನು ಕಳುಹಿಸಿದರು

ಮೊನ್ನೆ ಇವರ ಭಾವ ಮಧುಸೂಧನ್ ರೆಡ್ಡಿ ಅವರು, ಲಕ್ಕಿ ಆಲಿ ಎಂಬ ಗಾಯನ ಆಯೋಜನೆ ಆಗಿದ್ದ ಜಾಗಕ್ಕೆ 20 – 30 ಜನ ಕರೆದುಕೊಂಡು ಹೋಗಿ ರೌಡಿಸಂ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಂತು. ಈಕೆಯು ತನ್ನ ಐಎಎಸ್ ಪ್ರಭಾವ ಬಳಸಿ ದುರುಪಯೋಗ ಮಾಡಿಕೊಂಡು ಇರುವುದಾಗಿ ಲಕ್ಕಿ ಆರೋಪ ಮಾಡಿದರು. ವ್ಯಾಜ್ಯದ ಜಮೀನಿಗೆ 20-30 ಜನ ಕರೆದುಕೊಂಡು ಹೋಗಿ ಕಾನೂನು ಕೈಗೆ ತೆಗೆದುಕೊಳ್ಳಬಹುದು? ಈ ರೀತಿಯ ಭಂಡ ಧೈರ್ಯ ಎಲ್ಲಿಂದ ಬರುತ್ತದೆ? ಐಎಎಸ್ ಅಧಿಕಾರದಿಂದ?

14. ಗಂಡ, ಮಾವನಿಗೆ ಭೂ ಸಂಬಂಧಿ ದಾಖಲೆ ಕೊಡುತ್ತಾರೆ..

ಇವರ ಗಂಡ ಹಾಗೂ ಇವರ ಮಾವನವರು (ಈಗ ತೀರಿ ಹೋಗಿದ್ದಾರಂತೆ) ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್ ನಡೆಸುತ್ತಾರೆ. ಅನೇಕ ಬಾರಿ ಸರ್ವೇ ಹಾಗೂ ಭೂ ದಾಖಲೆ ಕಚೇರಿಯ ಮೂಲಕ ತನ್ನ ಕೌಟುಂಬಿಕ ವ್ಯವಹಾರಕ್ಕೆ ಅಗತ್ಯ ಇರುವ ಅನೇಕ ಭೂಸಂಬಂಧಿ ಮಾಹಿತಿ ಅಂದರೆ, ಒಂದು ಭೂಮಿಯ ಫೋಡಿ, ಇನ್ನೊಂದರ ಬಗ್ಗೆ ಅದು ವ್ಯಾಜ್ಯ ಇರುವ ಭೂಮಿಯೇ ಅಥವಾ ಖರೀದಿಸಲು ಯೋಗ್ಯವೇ ಎಂಬಂತಹ ಮಾಹಿತಿಗಳನ್ನು ತಮ್ಮ ಐಎಎಸ್ ಸ್ಥಾನ ಅಧಿಕಾರದಿಂದ ಪಡೆದು ಕೊಂಡಿರುವ ಮಾಹಿತಿ ದಾಖಲೆ ಸಮೇತ ಇದ್ದು, ಇದರ ಮೇಲೆ ಕ್ರಮ ಆಗುತ್ತದೆಯೇ? ನೋಡಬೇಕು.

15. ನನ್ನ ವರ್ಗಾವಣೆ ಆದಾಗ ಯಾರೂ ನೆರವಿಗೆ ಬರಲಿಲ್ಲ ಯಾಕೆ?

ಅನೇಕ ಬಾರಿ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದಾಗ ಆ ಜಾಗದಲ್ಲಿ ಇದ್ದವರು ಕ್ಯಾಟ್/ಕೋರ್ಟ್ ಗೆ ಹೋಗುವುದು ಸಹಜ. ನಾನು 3 ವರ್ಷ ದೂರದ ಯಾದಗಿರಿಯಲ್ಲಿ ಕೆಲಸ ಮಾಡಿ,( senior most sp in the state, 2013ರಲ್ಲಿ ನಾನು) ಬೆಂಗಳೂರಿಗೆ ನನಗೆ ವರ್ಗವಾದಾಗ, ಆ ಜಾಗದಲ್ಲಿ ಇದ್ದ ಅಧಿಕಾರಿ ಪವಾರ್ ಅವರು ನನ್ನ ವರ್ಗಾವಣೆ ಪ್ರಶ್ನಿಸಿ ಕ್ಯಾಟ್ ಗೆ ಹೋದರು. ಆದರೆ, ರೋಹಿಣಿ ಸಿಂಧೂರಿ ಗೆ ಸಾಕ್ಷಾತ್ ಅಡ್ವೊಕೇಟ್ ಜನರಲ್ ಅವರೇ ಬಂದು ವಾದ ಮಾಡಿದರಲ್ಲ, ಮೈಸೂರು ಡಿಸಿ ವರ್ಗಾವಣೆ ವಿಷಯದಲ್ಲಿ, ಆ ಸೌಲಭ್ಯ ನನಗೇಕೆ ಸಿಗಲಿಲ್ಲ? ನನ್ನಂತಹ ಕನ್ನಡಿಗ ಅಧಿಕಾರಿಗಳು, ಹೇಗೆ ನಡೆಸಿ ಕೊಂಡರೂ ಸುಮ್ಮನೆ ಇರ್ತಾರೆ ಅಂತಲೇ? ಸ್ವತಃ ಅಡ್ವೊಕೇಟ್ ಜನರಲ್ ಹಾಜರಾಗಿ ವಾದ ಮಾಡಿದ್ದು ಈಕೆಗಲ್ಲದೆ ಮತ್ಯಾವ ಅಧಿಕಾರಿಗೂ ಈ ಸೌಲಭ್ಯ ಸಿಕ್ಕಿಲ್ಲ. ಯಾಕೆ ಈ ತಾರತಮ್ಯ ಧೋರಣೆ?

16. ಜಾಲಹಳ್ಳಿ ಮನೆಯ ದಾಖಲೆ ಕೊಟ್ಟೇ ಇಲ್ಲ!

ಜಾಲಹಳ್ಳಿಯಲ್ಲಿ ಈಕೆ (ಪತಿಯದ್ದು ಇದ್ದರೂ ಈಕೆಯದೂ ಆಗುತ್ತದೆ) ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returnsನಲ್ಲಿ ಈ ಮನೆಯ ಉಲ್ಲೇಖ ಇಲ್ಲ. ಬದಲಾಗಿ ಬೇರೆಲ್ಲಾ ಲಂಗು ಲೊಟ್ಟು ಆಸ್ತಿ ಬಗ್ಗೆ ವರದಿ ಕೊಟ್ಟಿದ್ದಾರೆ. ಆ ಮನೆಗೆ ಕೋಟಿಗಟ್ಟಲೆ ಇಟಲಿ ಫರ್ನಿಚರ್‌, 26 ಲಕ್ಷದ ಜರ್ಮನ್ ಗೃಹೋಪಯೋಗಿ ವಸ್ತುಗಳು (ಅದನ್ನು duty free ಮಾಡಿಸಿಕೊಳ್ಳುವ ಬಗ್ಗೆ ಚರ್ಚೆ ಇದೆ) ತರಿಸಿಕೊಂಡಿದ್ದಾರೆ. ಆರು ಲಕ್ಷ ಕೇವಲ ಬಾಗಿಲಿನ ಹಿಡಿಕೆಗಳಿಗೆ ಖರ್ಚು ಮಾಡಿರುವ ಬಗ್ಗೆ ಈಕೆ ಮಾಡಿರುವ ಚಾಟ್‌ಗಳ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ಮೇಲೆ ಕೂಲಂಕಷ ತನಿಖೆ ಆಗುವುದೇ ನೋಡಬೇಕಿದೆ.

ಇದನ್ನೂ ಓದಿ : Sindhuri Vs Roopa : ಶಾಸಕರ ಜತೆ ಸಂಧಾನ ಅಂದ್ರೆ ಏನರ್ಥ?‌ ಸಿಂಧೂರಿ ವಿರುದ್ಧ IPS ರೂಪಾ ಗರಂ, 19 ಆರೋಪಗಳ ಚಾರ್ಜ್‌ಶೀಟ್

Exit mobile version