Site icon Vistara News

Sindhuri Vs Roopa : ರಾಜ್ಯದ ಮಾನ ಕಳೆದ ಬೀದಿ ಜಗಳ ; ರಾಜ್ಯದಿಂದಲೇ ಹೊರಕಳುಹಿಸಲು ಸರ್ಕಾರ ಚಿಂತನೆ

Sindhuri Bommai D Roopa

#image_title

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಮುಜರಾಯಿ ಇಲಾಖೆಯ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ (Sindhuri Vs Roopa) ಅವರ ನಡುವಿನ ಬೀದಿ ಜಗಳದಿಂದ ರಾಜ್ಯಕ್ಕೇ ಅಪಮಾನವಾಗುತ್ತಿದೆ ಎಂಬ ಮಾತುಗಳಿಂದ ಕೊನೆಗೂ ಎಚ್ಚೆತ್ತಿರುವ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಭಾನುವಾರ ಮುಂಜಾನೆ ೧೯ ಆರೋಪಗಳ ಚಾರ್ಜ್‌ಶೀಟನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಬಳಿಕ ರೋಹಿಣಿ ಅವರ ಕೆಲವೊಂದು ಖಾಸಗಿ ಚಿತ್ರಗಳನ್ನು ಬಹಿರಂಗಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರೋಹಿಣಿ ಅವರು ಡಿ. ರೂಪಾ ಅವರಿಗೆ ಮಾನಸಿಕ ಸ್ವಾಸ್ಥ್ಯ ಸರಿಯಿಲ್ಲ ಎಂದು ಹೇಳಿದ್ದರು. ಅವರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆಯೇ ಸಿಎಂ ಮಧ್ಯ ಪ್ರವೇಶ ಮಾಡಿ, ಇಬ್ಬರನ್ನೂ ಕರೆಸಿ ಎಚ್ಚರಿಕೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮಾ ಅವರಿಗೆ ಸೂಚನೆ ನೀಡಿದ್ದರು. ವಂದಿತಾ ಶರ್ಮ ಅವರ ಎಚ್ಚರಿಕೆಯಿಂದ ಈ ಇಬ್ಬರು ಸುಮ್ಮನಾಗುತ್ತಾರೆ ಎಂಬ ನಿರೀಕ್ಷೆ ಇತ್ತಾದರೂ, ವಂದಿತಾ ಶರ್ಮ ಅವರ ಮುಂದೆಯೇ ಇನ್ನೊಂದು ಸುತ್ತಿನ ಚಾರ್ಜ್‌ಶೀಟ್‌ ಸಲ್ಲಿಸಿದ ಬಳಿಕ ಇಬ್ಬರೂ ಸಾರ್ವಜನಿಕವಾಗಿ ತಮ್ಮ ಜಗಳ ಮುಂದುವರಿಸಿದ್ದರು.

ಈ ಘಟನಾವಳಿಗಳು ರಾಜ್ಯದ ಮಾನ ಕಳೆಯುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಮಾತ್ರವಲ್ಲ, ಸಚಿವರ ಮಟ್ಟದಲ್ಲೂ ಕೇಳಿಬಂದಿತ್ತು. ವಿಧಾನಸಭಾ ಅಧಿವೇಶನದಲ್ಲಿ ಕೂಡಾ ವಿಷಯ ಚರ್ಚೆಗೆ ಬಂದು ವಿರೋಧ ಪಕ್ಷಗಳು ಸರ್ಕಾರದ ವೈಫಲ್ಯವನ್ನು ಬೊಟ್ಟು ಮಾಡಿದವು.

ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಹಲವು ಸಚಿವರು ಈ ವಿಚಾರವನ್ನು ಪ್ರಸ್ತಾಪಿಸಿ, ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದೆ. ಹೀಗೇ ಬಿಟ್ಟರೆ ಚುನಾವಣೆ ಸಮಯದಲ್ಲಿ ವಿಪಕ್ಷಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು. ಪ್ರಧಾನವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಮನವಿ ಮಾಡಿದರು. ಇದರಿಂದ ಎಚ್ಚೆತ್ತ ಸರ್ಕಾರ ಇದೀಗ ಅವರಿಬ್ಬರ ವಿರುದ್ಧ ಕ್ರಮಕ್ಕೆ ಮುಂದಾಗಿವೆ.

ಬೇರೆ ರಾಜ್ಯಕ್ಕೆ ವರ್ಗಾವಣೆ ಸಾಧ್ಯತೆ

ರಾಜ್ಯ ಸರ್ಕಾರ ಇದೀಗ ಈ ಇಬ್ಬರೂ ಮಹಿಳಾ ಅಧಿಕಾರಿಗಳನ್ನು ಒಂದೋ ಇಲ್ಲೇ ಯಾವುದೇ ಜಾಗ ತೋರಿಸದೆ ವರ್ಗಾವಣೆ ಮಾಡುವುದು, ಇಲ್ಲವೇ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವ ಕ್ರಮಕ್ಕೆ ಮುಂದಾಗುವ ಬಗ್ಗೆ ಚರ್ಚೆ ನಡೆಸುತ್ತಿದೆ. ಬಹುತೇಕ ಹೊರ ರಾಜ್ಯಕ್ಕೆ ವರ್ಗಾಯಿಸುವ ವಿಚಾರದಲ್ಲಿ ಕೇಂದ್ರದೊಂದಿಗೆ ಮಾತುಕತೆ ನಡೆಸುವುದು ಖಚಿತವಾಗಿದೆ.

ಈ ನಡುವೆ, ಇಬ್ಬರು ಮಹಿಳೆಯರ ಜಗಳವನ್ನು ನಿಯಂತ್ರಿಸಲಾಗದ ಸಿಎಸ್‌ ವಂದಿತಾ ಶರ್ಮ ವಿರುದ್ಧವೂ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ. ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಅವರಿಬ್ಬರಿಗೂ ನೋಟಿಸ್‌ ನೀಡುವಂತೆ ಸಿಎಂ ಬೊಮ್ಮಾಯಿ ವಂದಿತಾ ಶರ್ಮ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Sindhuri Vs Roopa: ನಾನು ಇನ್ನೂ ಬದುಕಿದ್ದೀನಿ, ನನ್ನ ಮಗನ ವಿಷ್ಯಕ್ಕೆ ಬರಬೇಡಿ; ಇದೇ ಫಸ್ಟ್‌, ಲಾಸ್ಟ್‌ ಎಂದ ಡಿಕೆ ರವಿ ತಾಯಿ ಗೌರಮ್ಮ

Exit mobile version