ಬೆಂಗಳೂರು: ಕಳೆದ ಎರಡು ದಿನಗಳಿಂದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ಅವರ ನಡುವೆ ನಡೆಯುತ್ತಿದ್ದ ಬೀದಿ ಜಗಳಕ್ಕೆ ಸರಕಾರ ಬ್ರೇಕ್ ಹಾಕಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಬೀದಿ ರಂಪಾಟದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಕೇಳಿಬಂದ ಆಕ್ಷೇಪದ ಹಿನ್ನೆಲೆಯಲ್ಲಿ ಅವರಿಬ್ಬರ ಬಹಿರಂಗ ಸಮರಕ್ಕೆ ತೆರೆ ಎಳೆಯಲಾಗಿದೆ.
ಯಾವುದೇ ಕಾರಣಕ್ಕೂ ಇನ್ನು ಮುಂದೆ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಈ ವಿಚಾರದಲ್ಲಿ ಹೇಳಿಕೆ ನೀಡುವಂತಿಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ʻʻಇನ್ನೊಬ್ಬ ಸರ್ಕಾರ ಅಧಿಕಾರಿಯ ವಿರುದ್ಧ ಹೇಳಿಕೆ ನೀಡಲು ನೀವು ಮಾಧ್ಯಮಗಳನ್ನು ಬಳಸಿದ್ದೀರಿ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಆದರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಿ. ಈ ನಡೆ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಇದು ಭಾರತೀಯ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ನಿಮ್ಮ ಆರೋಪಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಮಾಡಬಹುದು. ಮಾಧ್ಯಮಗಳ ಮುಂದೆ ಆರೋಪ ಮಾಡಿರುವುದು ಸರಿಯಲ್ಲ. ಹೀಗಾಗಿ ನೀವು ಇನ್ನು ಮುಂದೆ ಮಾಧ್ಯಮಗಳ ಹೋಗಬಾರದುʼʼ ಎಂದು ಖಡಕ್ ಸೂಚನೆ ನೀಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮಾ ಅವರು ಸೋಮವಾರ ಇಬ್ಬರೂ ಮಹಿಳಾ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಬೀದಿ ಜಗಳ ಆಡದಂತೆ ಎಚ್ಚರಿಕೆ ನೀಡಿದ್ದರು. ಇಬ್ಬರೂ ಅಧಿಕಾರಿಗಳನ್ನು ರಾಜ್ಯದಿಂದ ಹೊರಗೆ ವರ್ಗಾವಣೆ ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : Sindhuri Vs Roopa : ಆ ಮಹಿಳೆ ಎಲ್ಲೋದ್ರೂ ವಿವಾದಾನೇ ಅಂದ ಎಚ್‌ಡಿಕೆ, ರೂಪಾ ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಪ್ರತಾಪಸಿಂಹ