ರಾಮನಗರ: ʻʻರೂಪಾ ನೀನು ನನ್ನ ಮಗನ ಬಗ್ಗೆ ಮಾತಾಡಿದ್ದು ತಪ್ಪು. ನಿಮ್ಮಿಬ್ಬರ ಜಗಳದಲ್ಲಿ ರವಿ ವಿಷಯ ಯಾಕೆ?ʼʼ ಎಂದು ದಿ. ಡಿ.ಕೆ ರವಿ ಅವರ ತಾಯಿ ಗೌರಮ್ಮ ಪ್ರಶ್ನೆ ಮಾಡಿದ್ದಾರೆ. ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ (Sindhuri Vs Roopa) ಟಾಕ್ ವಾರ್‌ನಲ್ಲಿ ಮೃತ ಐಎಎಸ್ ಅಧಿಕಾರಿ ಡಿ.ಕೆ ರವಿ ವಿಚಾರ ಪ್ರಸ್ತಾಪವಾಗಿದ್ದಕ್ಕೆ ಗೌರಮ್ಮ ಪ್ರತಿಕ್ರಿಯಿಸಿದ್ದಾರೆ.
ʻʻರವಿ ನಮ್ಮನ್ನು ಅಗಲಿ ಎಂಟು ವರ್ಷಗಳಾಗಿವೆ. ನನ್ನ ಮಗ ನನಗಾಗಿ ಏನೂ ಮಾಡಲಿಲ್ಲ, ಈಗ ಮಾತನಾಡುವವರು ಏನೂ ಮಾಡಿಲ್ಲ. ನನ್ನ ಮಗನ ಅಗಲಿಕೆಯನ್ನು ನಾವು ಮರೆಯುತ್ತಿದ್ದರೆ ಇವರೆಲ್ಲ ಕೆದಕಿ ಮತ್ತೆ ನೆನಪು ಮಾಡಿ ನೋವು ಕೊಡುತ್ತಿದ್ದಾರೆ. ನಾನು ಇನ್ನೂ ಬದುಕಿದ್ದೀನಿ, ನನ್ನ ಮಗನ ವಿಷಯಕ್ಕೆ ಬರಬೇಡಿʼʼ ಎಂದು ಇಬ್ಬರು ಮಹಿಳಾ ಅಧಿಕಾರಿಗಳಿಗೆ ಮನವಿ ರವಿ ತಾಯಿ ಗೌರಮ್ಮ ಮನವಿ ಮಾಡಿದರು.
ʻʻರೂಪವ್ವ ನನ್ನ ಮಗನ ಬಗ್ಗೆ ಸಿಂಧೂರಿಗೆ ಹೋಲಿಕೆ ಮಾಡಿ ಮಾತಾಡಬೇಡ್ವಾ. ನನ್ನ ಮಗ ಹಾಗೂ ರೋಹಿಣಿ ಸಿಂಧೂರಿ ಇಬ್ಬರು ಸ್ನೇಹಿತರಾಗಿದ್ದವರು, ಒಟ್ಟಿಗೆ ಓದಿದವರು. ಸಿಂಧೂರಿ ನಮ್ಮ ಮನೆಗೂ ಎರಡು ಬಾರಿ ಬಂದಿದ್ದಾರೆ. ಅವಳ ಬಗ್ಗೆ ನೀನು ಏನು ಮಾತಾಡಬೇಡʼ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ರವಿ ಹೋದ್ಮೇಲೆ ನನ್ನ ಕಷ್ಟ ಸುಖ ಕೇಳಿಲ್ಲ ನೀನು ಸಿಂಧೂರವ್ವಾ
ʻʻಸಿಂಧೂರವ್ವ ನೀನೂ ಅಷ್ಟೇ ರವಿ ಹೋದ ಮೇಲೆ ಅವರ ಅಮ್ಮನ ಕಷ್ಟ ಸುಖ ವಿಚಾರಿಸಬೇಕು ಅಂತ ಒಂದು ದಿನವೂ ನೀನು ಇಲ್ಲಿಗೆ ಬಂದಿಲ್ಲ. ನನ್ನ ಮಗನಿಗೆ ಯಾರೆಲ್ಲ ಅನ್ಯಾಯ ಮಾಡಿದ್ದರೋ ಅವರೆಲ್ಲರೂ ಸಂತೋಷದಿಂದಲೇ ಇರಲಿ. ನೀವುಗಳು ಏನೇ ಅಂದರೂ ನನ್ನ ಮಗ ಕೆಟ್ಟವನು ಆಗಲ್ಲ. ನಿಮ್ಮಗಳ ಜಗಳಕ್ಕೆ ಎಳೆದು ತಂದು ಸಂಕಟ ಕೊಡಬೇಡಿʼʼ ಎಂದು ಗೌರಮ್ಮ ಕಣ್ಣೀರು ಹಾಕಿದರು.
ಮಠದಲ್ಲೇ ನನ್ನ ಜೀವನ
ʻʻಮಗನನ್ನು ಕಳೆದುಕೊಂಡ ನಾನು ಮಠದಲ್ಲಿ ಜೀವನ ಮಾಡುತ್ತಿದ್ದೀನಿ. ನಿಮ್ಮ ನಿಮ್ಮ ವ್ಯವಹಾರ ನೀವೂ ಮಾಡಿ, ನನ್ನ ಮಗನ ಹೆಸರು ಹಾಳು ಮಾಡಬೇಡಿ, ಇದೇ ಲಾಸ್ಟ್ ಫಸ್ಟ್ ನನ್ನ ಮಗನ ಬಗ್ಗೆ ಮಾತಾಡಿ ಬೀದಿಗೆ ತರಬೇಡಿʼʼ ಎಂದು ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಇದನ್ನೂ ಓದಿ: D Roopa IPS : ಹಿರಿಯ ಅಧಿಕಾರಿಗಳನ್ನೂ ಬಿಡದೆ ಬೆನ್ನಟ್ಟುವ ಡಿ. ರೂಪಾ; ಯಾರಿವರು, ಇವರ ಹಿನ್ನೆಲೆ ಏನು?
ಸೊಸೆ ಕುಸುಮಗೂ ನಮಗೂ ಸಂಬಂಧನೇ ಇಲ್ಲ
ʻʻನನ್ನ ಮಗ ಇದ್ದಾಗಲೂ ಇಲ್ಲದೇ ಇದ್ದಾಲೂ ಕುಸುಮ ನನ್ನ ಸೊಸೆನೇ, ಅವಳು ಬದುಕುವ ದಾರಿ ನೋಡಿಕೊಂಡಿದ್ದಾಳೆ. ಸದ್ಯಕ್ಕೆ ನಮಗೂ ಅವರಿಗೂ ಯಾವುದೇ ಸಂಪರ್ಕ ಇಲ್ಲ. ಕುಸುಮ ಅವರ ಅಪ್ಪನ ಮನೆಯಲ್ಲಿ, ನಾನು ಮಠದಲ್ಲಿ ಜೀವನ ಸಾಗಿಸುತ್ತಿದ್ದೀನಿ. ಅವಳ ಬಗ್ಗೆ ಈಗ ಮಾತು ಬೇಡ. ನನ್ನ ಮಗನನ್ನು ಬೀದಿಗೆಳೆದಿದ್ದು ಡಿ. ರೂಪ ಹಾಗೂ ರೋಹಿಣಿ ಸಿಂಧೂರಿ, ಇವರಿಬ್ಬರ ಜಗಳ ಏನೇ ಇದ್ದರೂ ಮುಂದುವರಿಸಿಕೊಳ್ಳಿ ನನ್ನ ಮಗನ ತಂಟೆಗೆ ಬರುವುದು ಬೇಡʼʼ ಎಂದರು.
ಬೆಂಗಳೂರಿನ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ