Site icon Vistara News

Sindhuri Vs Roopa : ರೋಹಿಣಿ ಸಿಂಧೂರಿಗೆ ರೂಪವೇ ಶತ್ರು; ಅವರು ಮೂರು ಕಾಲೇಜು ಬದಲಾಯಿಸಿದ್ದೇಕೆ?

know everything about ias officer rohini sindhuri

ರೋಹಿಣಿ ಸಿಂಧೂರಿ

ಬೆಂಗಳೂರು: ರೋಹಿಣಿ ಸಿಂಧೂರಿ (Sindhuri Vs Roopa), ರಾಜ್ಯದ ಅತ್ಯಂತ ಜನಪ್ರಿಯ ಮತ್ತು ವಿವಾದಿತ ಐಎಎಸ್‌ ಅಧಿಕಾರಿಗಳಲ್ಲಿ ಒಬ್ಬರು. ಸದ್ಯ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾಗಿ ಕಾರ್ಯನಿವರ್ಹಹಿಸುತ್ತಿರುವ ಇವರು ಮೂಲತಃ ಆಂಧ್ರ ಪ್ರದೇಶದವರು. ಓದಿದ್ದೆಲ್ಲಾ ಆಂಧ್ರದಲ್ಲಿಯೇ ಆದರೂ, ತೆಲುಗು ಜತೆಯಲ್ಲಿ ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲರು. ಆಂಧ್ರ ಮೂಲದ ಟೆಕ್ಕಿ ಸುಧೀರ್‌ ರೆಡ್ಡಿಯವರನ್ನು ಮದುವೆಯಾಗಿರುವ 38 ವರ್ಷದ ರೋಹಿಣಿ ಸಿಂಧೂರಿ ಅವರಿಗೆ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು.

ರೋಹಿಣಿ ಸಿಂಧೂರಿಯವರ ತಂದೆ ದಾಸರಿ ಜಯಪಾಲ್‌ ರೆಡ್ಡಿ, ತಾಯಿ ಶ್ರೀಲಕ್ಷ್ಮಿ ರೆಡ್ಡಿ. ಮಗಳನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಕಳಿಸಬೇಕೆಂದು ಉದ್ದೇಶಿಸಿದ್ದಾರಾದರೂ ರೋಹಿಣಿ ಸಿಂಧೂರಿ ಇದಕ್ಕೊಪ್ಪಲಿಲ್ಲ. ಕೊನೆಗೆ ಸಮಾಜ ಸೇವಕಿಯಾಗಿದ್ದ ತಾಯಿ ಶ್ರೀಲಕ್ಷ್ಮೀ ರೆಡ್ಡಿ ಆಕೆಯನ್ನು ಐಎಎಸ್‌ ಅಧಿಕಾರಿಯಾಗಿಸುವ ಕನಸು ಕಂಡರು. ಮಗಳಿಗೆ ಎಲ್ಲ ರೀತಿಯ ಸಹಕಾರ ನೀಡಿ, ತಮ್ಮ ಕನಸನ್ನು ಈಡೇರಿಸಿಕೊಂಡರು. ತಾಯಿ ಜನರಿಗೆ ಮಾಡುತ್ತಿದ್ದ ಸೇವೆಯನ್ನು ಬಾಲ್ಯದಿಂದಲೂ ಕಂಡಿದ್ದ ರೋಹಿಣಿ ಸಿಂಧೂರಿ ತಾನೂ ಈ ರೀತಿ ಬಡವರಿಗೆ ಒಳಿತು ಮಾಡಬೇಕೆಂದು ಐಎಎಸ್‌ ಅಧಿಕಾರಿಯಾದರು.

ಮೂರು ಕಾಲೇಜು ಬದಲಾಯಿಸಿದ್ದರು!

ಸುಂದರಿಯಾಗಿದ್ದ ರೋಹಿಣಿ ಸಿಂಧೂರಿಗೆ ಅವರ ಸೌಂದರ್ಯವೇ ಶತ್ರುವಾಗಿದ್ದು ಉಂಟು! ಕಾಲೇಜು ದಿನಗಳಲ್ಲಿಯೇ ಅವರ ಸೌಂದರ್ಯಕ್ಕೆ ಮರುಳಾಗಿ ಹುಡುಗರು ಅವರ ಹಿಂದೆ ಬಿದ್ದಾಗ ಮೂರು ಕಾಲೇಜನ್ನು ಬದಲಾಯಿಸಿ ಓದಬೇಕಾಯಿತು. ಹುಡುಗರು ಚುಡಾಯಿಸಿದಾಗ ʻʻಅಮ್ಮಾ ನಾನು ಕಾಲೇಜಿಗೆ ಹೋಗುವುದಿಲ್ಲʼʼ ಎಂದು ಅಳುತ್ತಾ ಕೂರುತ್ತಿದ್ದ ಅವರನ್ನು ತಾಯಿ ಶ್ರೀಲಕ್ಷ್ಮಿ ರೆಡ್ಡಿ ಸಮಧಾನ ಪಡಿಸಿ ಧೈರ್ಯ ತುಂಬಿ ಮತ್ತೆ ಕಾಲೇಜಿಗೆ ಕಳಿಸುತ್ತಿದ್ದರಂತೆ!ಆದರೂ ಕೆಲವೊಮ್ಮೆ ಕಾಲೇಜು ಬದಲಾಯಿಸುವುದು ಅನಿವಾರ್ಯವಾಗುತ್ತಿತ್ತು ಎಂದು ಶ್ರೀಲಕ್ಷ್ಮಿ ರೆಡ್ಡಿ ಹೇಳಿದ್ದಾರೆ.

ಐಎಎಸ್‌ ಮುಖ್ಯ ಪರೀಕ್ಷೆ ಬರೆಯಲು ದೆಹಲಿಗೆ ಹೋಗಿದ್ದ ರೋಹಿಣಿ ಸಿಂಧೂರಿ ಬೆಳಗ್ಗೆ ಹಾಲು ತರಲೆಂದು ಹೊರಗೆ ಹೋಗಿದ್ದಾಗ ಕಾರೊಂದು ಗುದ್ದಿ ಪರಾರಿಯಾಗಿತ್ತು. ಕಾಲಿಗೆ ಪೆಟ್ಟಾದರೂ ಛಲ ಬಿಡದೇ ಐಎಎಸ್‌ ಮುಖ್ಯ ಪರೀಕ್ಷೆ ಬರೆದಿದ್ದರು. ʻʻವೀಲ್‌ ಚೇರ್‌ನಲ್ಲಿಯೇ ಕುಳಿತು ಪರೀಕ್ಷೆಗೆ ಅಭ್ಯಾಸ ನಡೆಸುತ್ತಿದ್ದೆ. ಹಾಸಿಗೆಯಲ್ಲಿ, ಗೋಡೆಗಳ ಮೇಲೆ, ಬಾತ್‌ರೂಮ್‌ ಗೋಡೆಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರಮುಖ ವಿಷಯಗಳನ್ನು ಬರೆದಿಟ್ಟುಕೊಂಡು ಅಭ್ಯಾಸ ನಡೆಸಿದ್ದೆʼʼ ಎಂದು ರೋಹಿಣಿ ಸಿಂಧೂರಿ ತಾವು ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಿದ್ದೆ ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಯಿ ಶ್ರೀ ಲಕ್ಷ್ಮೀಯೊಂದಿಗೆ ರೋಹಿಣಿ ಸಿಂಧೂರಿ.

ದಿಟ್ಟ ಆಡಳಿತಕ್ಕೆ ಹೆಸರು!

ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಮಾಡಿರುವ ರೋಹಿಣಿ ಸಿಂಧೂರಿ ಐಎಎಸ್‌ ಅಧಿಕಾರಿಯಾಗಿ ನೇಮಕಗೊಂಡಿದ್ದು 2009ರಲ್ಲಿ. ಕರ್ನಾಟಕ ಕೇಡರ್‌ನಲ್ಲಿ ಆಯ್ಕೆ ಯಾಗಿದ್ದ ಇವರು ಯುಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ 43ನೇ ರ‍್ಯಾಂಕ್‌ ಪಡೆದಿದ್ದರು. ರಾಜ್ಯದ ವಿವಿಧ ಹುದ್ದೆಗಳಲ್ಲಿ ಅವರು ಮಾಡಿದ ಕೆಲಸ ಅವರಿಗೆ ವಿಶೇಷವಾಗಿ ಜನಪ್ರಿಯತೆಯನ್ನು ತಂದುಕೊಟ್ಟಿದೆ. ದಿಟ್ಟ ಆಡಳಿತ, ಸ್ಪಷ್ಟ ಮಾತುಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ.

ತುಮಕೂರಿನಲ್ಲಿ ಗ್ರಾಮೀಣ ಅಭವೃದ್ಧಿ ಇಲಾಖೆಯ ಸಹಾಯ ಆಯುಕ್ತರಾಗಿ ರೋಹಿಣಿ ಸಿಂಧೂರಿ ವೃತ್ತಿ ಜೀವನ ಆರಂಭಿಸಿದ್ದರು. ತುಮಕೂರಿನ ನಗರಾಭಿವೃದ್ಧಿ ವಿಭಾಗದ ಉಸ್ತುವಾರಿ ಆಯುಕ್ತರಾಗಿದ್ದ ಅವರು, ತೆರಿಗೆ ಸಂಗ್ರಹದ ಗಣಕೀಕರಣ, ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ರಸ್ತೆ ಅಗಲೀಕರಣ ಇತ್ಯಾದಿ ಜನಪರ ಕಾರ್ಯಗಳಿಂದ ಗಮನ ಸೆಳೆದಿದ್ದರು.

ನಂತರ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಯಂ ಉದ್ಯೋಗ ಯೋಜನೆಯ (ಎಸ್‌ಇಪಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಮುಂದೆ ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಿ, ಸ್ವಚ್ಛ ಭಾರತ ಅಭಿಯಾನದಲ್ಲಿ ಮಂಡ್ಯ ದೇಶದಲ್ಲಿಯೇ ಮೂರನೇ ಸ್ಥಾನ ಪಡೆಯುವಂತೆ ಮಾಡಿದ್ದರು. ಭೂ ದಾಖಲೆಗಳನ್ನು ಮೊಬೈಲ್‌ ಆಪ್‌ ಮೂಲಕ ಒದಗಿಸಿ, ಜನಪ್ರಿಯತೆ ಪಡೆದಿದ್ದರು. ಶೌಚಾಲಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ಅವರು ಆರಂಭಿಸಿದ ʻಮುಂಜಾನೆ ಯೋಜನೆʼಗೆ ಕೇಂದ್ರ ಸರ್ಕಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿತ್ತು.

ನಂತರ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಅವರು ಶ್ರವಣ ಬೆಳಗೊಳ ಮಹಾಮಸ್ತಾಭಿಷೇಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ, ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು. ಆಡಳಿತದ ಕಾರಣದಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬವನ್ನು ಅದರಲ್ಲಿಯೂ ಎಚ್‌.ಡಿ ರೇವಣ್ಣರನ್ನು ಎದುರು ಹಾಕಿಕೊಂಡಿದ್ದ ರೋಹಿಣಿ ಸಿಂಧೂರಿಯನ್ನು ವರ್ಗಾವಣೆಗೊಂಡಿದ್ದರು.

ರೋಹಿಣಿ ಹೆಸರಲ್ಲಿ ವಿಶೇಷ ಪೂಜೆ

ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಸನದ ಪುರಾತನ ವಿರುಪಾಕ್ಷೇಶ್ವರ ದೇಗುಲದ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದರು. ಹಾಸನಾಂಬ ದೇಗುಲದಲ್ಲಿಸಂಗ್ರಹವಾಗಿದ್ದ 30 ಲಕ್ಷ ರೂ.ಗಳನ್ನು ಈ ದೇಗುಲಕ್ಕೆ ನೀಡಿದ್ದರು. ಹೀಗಾಗಿ ಈ ದೇಗುಲದಲ್ಲಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ. ಅಷ್ಟೇ ಅಲ್ಲಸಿಂಧೂರ ವರ್ಣದ ಹಣ್ಣು ಬಿಡುವ ಕಾಡು ಬಾದಾಮಿ ವೃಕ್ಷ ನೆಟ್ಟು, ಅದಕ್ಕೂ ಅವರ ಹೆಸರಿಟ್ಟು, ಪೋಷಿಸಲಾಗುತ್ತಿದೆ.

2020ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಗೊಂಡಿದ್ದರು. ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ತಮ್ಮ ಕಾರಿನ ಟೈರ್ ತಾವೇ ಬದಲಾಯಿಸಿಕೊಳ್ಳುವ ವಿಡಿಯೋ ವೈರಲ್‌ ಆಗಿತ್ತು.

ಹೋದಲ್ಲೆಲ್ಲಾ ವಿವಾದಗಳೇ ಜಾಸ್ತಿ

ದಿಟ್ಟ ಅಧಿಕಾರಿಯಾಗಿ ಹೆಸರು ಮಾಡಿದ್ದ ರೋಹಿಣಿ ಸಿಂಧೂರಿ ಹೋದಲೆಲ್ಲಾ ವಿವಾದಗಳೇ ಅವರ ಬೆನ್ನು ಹತ್ತಿವೆ. ತುಮಕೂರಿನಲ್ಲಿ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ನಂತರ ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಹಲವು ವಿವಾಧಗಳಿಗೆ ಕಾರಣರಾಗಿದ್ದರು. ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರೊಂದಿಗೆ ಮೊದ ಮೊದಲು ಹೇಳಿಕೆ- ಪ್ರತಿ ಹೇಳಿಕೆ ನೀಡುತ್ತಿದ್ದರು. ನಂತ ಜಿಲ್ಲಾಧಿಕಾರಿ ಕಚೇರಿಯಲ್ಲೇ ರೇವಣ್ಣ ಹಾಗೂ ರೋಹಿಣಿ ನಡುವೆ ಮಾತಿನ ಚಕಮಕಿ ನಡೆದಿತ್ತು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರೊಂದಿಗಿನ ಜಗಳದಿಂದಾಗಿ ವರ್ಗಾವಣೆಗೊಂಡಿದ್ದರು. ಈ ವರ್ಗಾವಣೆ ವಿರುದ್ಧ ಕೆಎಟಿಗೆ ಹೋಗಿ ಮತ್ತೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಮರಳಿದ್ದ ಅವರು, ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಸಚಿವರಾಗಿದ್ದ ರೇವಣ್ಣ ಅವರ ಕೋಪಕ್ಕೆ ತುತ್ತಾಗಿ ಮತ್ತೆ ವರ್ಗಾವಣೆಗೊಂಡಿದ್ದರು.

ಮುಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಕಲ್ಯಾಣ ಮಂಟಪದ ಸಮೀಪದ ಸ್ಥಳ ಒತ್ತುವರಿಯಾಗಿದೆ ಎಂದು ಕೆ.ಆರ್‌.ನಗರ ಶಾಸಕ ಸಾ.ರಾ. ಮಹೇಶ್‌ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ತಾರಕಕ್ಕೇರಿತ್ತು. ಈ ನಡುವೆ ಇಬ್ಬರ ನಡುವೆ ಸಂಧಾನ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಸಂಸದ ಪ್ರತಾಪ್‌ ಸಿಂಹ ಜೊತೆ 37 ಕೋಟಿ ರೂಪಾಯಿ ಕೋವಿಡ್‌ ಪರಹಾರ ನಿಧಿ ವಿಚಾರವಾಗಿ ಸಂಘರ್ಷಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ವಿರುದ್ಧ ತನಿಖೆ ನಡೆಸುವಂತೆ ಪ್ರತಾಪ್‌ ಸಿಂಹ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಿಂದ 12 ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದು, ಅವುಗಳನ್ನು ವಾಪಾಸ್‌ ಮಾಡುವಂತೆ ಆಡಳಿತ ತರಬೇತಿ ಕೇಂದ್ರದ ಅಧಿಕಾರಿಗಳು ಪತ್ರ ಬರೆದಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಂತೆಯೇ ಅವರು ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ಚಾಮರಾಜನಗರ ಆಕ್ಸಿಜನ್‌ ದುರಂತದ ಸಮಯದಲ್ಲೂ ರೋಹಿಣಿ ಸಿಂಧೂರಿ ಹೆಸರು ಕೇಳಿಬಂದಿತ್ತು. ಅವರ ಸೂಚನೆಯಂತೆಯೇ ಚಾಮರಾಜನಗರಕ್ಕೆ ಆಕ್ಸಿಜನ್‌ ಕಳಿಸಲಾಗಿರಲಿಲ್ಲ ಎನ್ನಲಾಗಿದೆ. ಇದಲ್ಲದೆ ರೋಹಿಣಿ ಸಿಂಧೂರಿ ಅವರ ಕುಟುಂಬದ ಭೂ ವ್ಯವಹಾರಗಳು ಕೂಡ ವಿವಾದ ಸೃಷ್ಟಿಸಿವೆ.

ರೋಹಿಣಿ ಸಿಂಧೂರಿ ಎಲ್ಲದರಲ್ಲೂ ಮೂಗು ತೂರಿಸುತ್ತಿದ್ದಾರೆ ಅಂತ ಆರೋಪಿಸಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆಗೆ ಮುಂದಾಗಿದ್ದರು. ಕೊನೆಗೆ ಮಧ್ಯಪ್ರವೇಶಿಸಿದ ಸರ್ಕಾರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರನ್ನು ವರ್ಗಾವಣೆ ಮಾಡಿತ್ತು.

ರೋಹಿಣಿ ಅವರ ಪತಿ ಸತೀಶ್‌ ರೆಡ್ಡಿ ವಿರುದ್ಧ ಹಿಂದಿಯ ಪ್ರಖ್ಯಾತ ಹಾಸ್ಯನಟ ಮೊಹಮದ್‌ ಅಲಿ ಅವರ ಪುತ್ರ ಪ್ರಖ್ಯಾತ ಗಾಯಕ ಲಕ್ಕಿ ಅಲಿ, ಯಲಹಂಕ ಬಳಿ ಇರುವ ಕೆಂಚೇನಹಳ್ಳಿಯಲ್ಲಿ ಭೂ ಕಬಳಿಕೆ ಆರೋಪ ಮಾಡಿದ್ದರು.

ಆಂಧ್ರ ಶೈಲಿ ಅಡುಗೆ ಬರಲ್ಲ!

ನೂಡಲ್, ಚಿಲ್ಲಿ ಚಿಕನ್, ಚಿಲ್ಲಿ ಮಂಚೂರಿ ಸೇರಿದಂತೆ ಚೈನೀಸ್ ಫುಡ್, ಸೂಪ್, ಪಾಸ್ತಾ ಮಾಡುವುದರಲ್ಲಿ ಎಕ್ಸ್‌ಪರ್ಟ್‌ ಆಗಿರುವ ರೋಹಿಣಿ ಸಿಂಧೂರಿಗೆ ಆಂಧ್ರ ಶೈಲಿಗೆ ಅಡುಗೆ ಮಾಡಲು ಇನ್ನೂ ಬರುವುದಿಲ್ಲವಂತೆ. ಬರುವ ಅಡುಗೆಯನ್ನೇ ಎಂಜಾಯ್ ಮಾಡಿಕೊಂಡು ಸಿದ್ಧಪಡಿಸುತ್ತೇನೆ ಎನ್ನುತ್ತಾರೆ ಅವರು. ವಾರದ ಬಿಡುವಿನ ವೇಳೆಯಲ್ಲಿ ಷಟಲ್ ಬ್ಯಾಡ್ಮಿಂಟನ್ ಆಡುತ್ತೇನೆ. ಕೆಲವೊಮ್ಮೆ ಯೋಗಾಭ್ಯಾಸ ಮಾಡುತ್ತೇನೆ ಎಂದು ಅವರು ತಮ್ಮ ಫಿಟ್‌ನೆಸ್‌ನ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: Sindhuri Vs Roopa : ಡಿ. ರೂಪಾ ವಿರುದ್ಧ ಸಿಎಸ್‌ಗೆ ಲಿಖಿತ ದೂರು ನೀಡಿದ ಸಿಂಧೂರಿ, ರೋಹಿಣಿಗೆ ಬಿಗಿ ಭದ್ರತೆ

Exit mobile version