Site icon Vistara News

Sindhuri Vs Roopa : ಕೋರ್ಟ್‌ ಆದೇಶಕ್ಕೆ ಕ್ಯಾರೇ ಎನ್ನದ ರೂಪಾ ಮೌದ್ಗಿಲ್‌; ರೋಹಿಣಿ ಸಿಂಧೂರಿ ದೂರು

Roopa Moudgil and Rohini Sindhuri

#image_title

ಬೆಂಗಳೂರು: ಐಪಿಎಸ್‌ ಅಧಿಕಾರಿಯಾಗಿರುವ ಡಿ. ರೂಪಾ ಮೌದ್ಗಿಲ್‌ ಅವರು ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಇನ್ನೂ ಮಾನಹಾನಿಕರ ವಿಚಾರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಡುತ್ತಿದ್ದಾರೆ ಎಂದು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೋರ್ಟ್‌ ಗಮನ ಸೆಳೆದಿದ್ದಾರೆ.

ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಗರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆಗ ಕೋರ್ಟ್‌ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮದಲ್ಲಿ ಮಾನಹಾನಿಕರ ಹೇಳಿಕೆ ನೀಡಬಾರದು ಎಂದು ರೂಪಾ ಅವರಿಗೆ ಸೂಚನೆ ನೀಡಿತ್ತು. ಈ ಆದೇಶವನ್ನು ರೂಪಾ ಅವರು ಪಾಲಿಸುತ್ತಿಲ್ಲ ಎಂದು ರೋಹಿಣಿ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದರು.

ರೂಪಾ ಮೌದ್ಗಿಲ್ ಅವರು ಫೇಸ್‌ಬುಕ್, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಹಾಗಾಗಿ, ಅವರಿಂದ ಒಂದು ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಕೊಡಿಸಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರೋಹಿಣಿ ಸಿಂಧೂರಿ ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ರೂಪಾ ಅವರು ಇದೇ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ದೂರಿನಲ್ಲಿ ರೋಹಿಣಿ ವಿವರಿಸಿದ್ದಾರೆ.

ಅಲ್ಲದೆ, ಭಾರತೀಯ ನಾಗರಿಕ ಸೇವಾ ನಿಯಮಗಳಿಗೆ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ನನ್ನನ್ನು ಟೀಕೆ ಮಾಡುವ ಮೂಲಕ ನನಗೆ ಮಾತ್ರವಲ್ಲದೆ ಸರ್ಕಾರಕ್ಕೂ ಮುಜುಗರ ಉಂಟು ಮಾಡಿದ್ದಾರೆ. ಆದ್ದರಿಂದ, ನನಗಾಗಿರುವ ಮಾನಸಿಕ ಯಾತನೆ ಮತ್ತು ಮಾನನಷ್ಟಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡಿಸಿಕೊಡಬೇಕು. ರೂಪಾ ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರೆ ರೋಹಿಣಿ ಸಿಂಧೂರಿ ಕೋರಿದ್ದರು.

ಪ್ರಕರಣದ ಮುಂದಿನ ವಿಚಾರಣೆ ಸಿಸಿಹೆಚ್ 74ನೇ ಕೋರ್ಟ್ ನ ನ್ಯಾ.ಗಂಗಣ್ಣವರ್ ನ್ಯಾಯಪೀಠದ ಮುಂದೆ ಮಾ. 2ರಂದು ನಡೆಯಲಿದೆ.

ಇದನ್ನೂ ಓದಿ : Sindhuri VS Roopa: ರೋಹಿಣಿ, ರೂಪಾ ಸಂಘರ್ಷದ ಬೆನ್ನಲ್ಲೇ ಇವರ ಹೆಸರಿನಲ್ಲಿ 2 ಸಿನಿಮಾ ನೋಂದಣಿ, ಹೇಗಿವೆ ಟೈಟಲ್?

Exit mobile version