Site icon Vistara News

Sindhuri Vs Roopa : ರೂಪಾಗೆ ಸಿಂಧೂರಿ ಮೇಲೆ ಮತ್ಸರ, 10 ವರ್ಷ ಜ್ಯೂನಿಯರ್‌ ನಂಗಿಂತ ಜಾಸ್ತಿ ಮಿಂಚ್ತಾ ಇದಾಳೆ ಅಂತ ಸಿಟ್ಟು: ರೋಹಿಣಿ ಪತಿ

sudheer reddy Roopa

#image_title

ಬೆಂಗಳೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರ ಜಟಾಪಟಿಯಲ್ಲಿ (Sindhuri Vs Roopa) ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಮಧ್ಯ ಪ್ರವೇಶ ಮಾಡಿದ್ದಾರೆ. ಡಿ. ರೂಪಾ ಅವರಿಗೆ ರೋಹಿಣಿ ಸಿಂಧೂರಿ ಅವರ ಮೇಲೆ ಮತ್ಸರವಿದೆ. ಹೀಗಾಗಿ ಈ ರೀತಿ ಆಕ್ಷೇಪಾರ್ಹ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ರೋಹಿಣಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಹೇಳಿದ್ದಾರೆ.

ರೋಹಿಣಿ ಅವರ ವಿಚಾರದಲ್ಲಿ ಹಲವು ಬಾರಿ ವಿವಾದಗಳು ಎದುರಾದರೂ ಎಂದೂ ಪ್ರತಿಕ್ರಿಯಿಸದ ಸುಧೀರ್‌ ರೆಡ್ಡಿ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಡಿ. ರೂಪಾ ಅವರ ಪರ್ಸನಲ್‌ ಅಜೆಂಡಾ ಏನಿದೆ ಅಂತ ಗೊತ್ತಾಗಬೇಕು. ಸಿಂಧೂರಿ ಬಗ್ಗೆ ಅವರು ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗಬೇಕು. ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು ಎಂದು ಸುಧೀರ್‌ ಹೇಳಿದರು.

೨೦೧೩-೧೪ರಲ್ಲಿ ತೆಗೆದ ಪೋಟೊಗಳನ್ನು ತೆಗೆದು ಈಗ ವೈರಲ್‌ ಮಾಡಿದ್ದಾರೆ. ಮೂರು ಜನ ಐಎಎಸ್ ಅಧಿಕಾರಿಗಳಿಗೆ ಫೋಟೊ ಕಳುಹಿಸಲಾಗಿದೆ ಅಂತ ಹೇಳಿದ್ದಾರೆ. ಆ ಮೂವರು ಐಎಎಸ್‌ ಅಧಿಕಾರಿಗಳು ಯಾರು ಎನ್ನುವುದನ್ನು ಅರು ಹೇಳಲಿ ಎಂದು ಸವಾಲು ಹಾಕಿದ್ದಾರೆ.

ʻʻಔಟ್ ಆಫ್ ಕಂಟೆಸ್ಟ್‌ ಫೋಟೊ ಯಾಕೆ ತೆಗೆದು ವೈರಲ್ ಮಾಡಿದ್ದಾರೆ. ನಾವು ಈ ಫೋಟೊಗಳನ್ನು ಯಾರಿಗೂ ಶೇರ್‌ ಮಾಡಿಲ್ಲ. ಹಾಗಿದ್ದರೂ ಇವರಿಗೆ ಹೇಗೆ ಸಿಕ್ಕಿದೆ. ಪೊಲೀಸ್‌ ಅಧಿಕಾರಿಯಾಗಿರುವ ಇವರು ಈ ರೀತಿ ಕಳ್ಳ ಮಾರ್ಗದಿಂದ ಫೋಟೊಗಳನ್ನು ಪಡೆದಿರಲೂಬಹುದು. ರೋಹಿಣಿ ಅವರು ತಮ್ಮ ಸಿಸ್ಟರ್ ಬಳಿ ಹೇರ್ ಕಟ್ ಮಾಡಿಸಿರುವ ಫೋಟೊವನ್ನು ಕೂಡಾ ವೈರಲ್‌ ಮಾಡಿದ್ದಾರೆʼʼ ಎಂದಿದ್ದಾರೆ ಸುಧೀರ್‌ ರೆಡ್ಡಿ.

ʻʻನಾನು ಯಾವತ್ತೂ ಮಾಧ್ಯಮದ ಮುಂದೆ ಬಂದಿಲ್ಲ. ನಮ್ಮ ಕುಟುಂಬದ ಬಗ್ಗೆ ತೀರಾ ಪರ್ಸನಲ್ ಇರೋದರಿಂದ ಮಾಧ್ಯಮದ ಮುಂದೆ ಬಂದಿದ್ದೇನೆ. ರೂಪಾ ಅವರಿಗೆ ರೋಹಿಣಿ ಸಿಂಧೂರಿ ಮೇಲೆ ಜಲಸಿ ಇದೆ. ನನಗಿಂತ ೧೦ ವರ್ಷ ಜ್ಯೂನಿಯರ್‌ ಆಗಿರೋಳು ಇಷ್ಟು ಹೆಸರು ಮಾಡಿದ್ದಾರೆ ಅನ್ನೋ ಸಿಟ್ಟು ಇದೆ. ಹೀಗಾಗಿ ಅವರು ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಡಿ.ಕೆ. ರವಿ ಅವರ ಆತ್ಮಹತ್ಯೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ರವಿ ಅವರು ನಿಧನರಾಗಿದ್ದಾರೆ. ಅದು ಆತ್ಮಹತ್ಯೆ ಎನ್ನುವುದು ಪ್ರೂವ್‌ ಆಗಿದೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆ ಸಂದರ್ಭದಲ್ಲಿ ನಾವೆಷ್ಟು ಕಷ್ಟಪಟ್ಟಿದ್ದೇವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಡಿ.ಕೆ. ರವಿ ಅವರ ಬಗ್ಗೆ ಮಾತನಾಡುವುದು ಬೇಡ ಎಂದಿದ್ದಾರೆ.

ನಮ್ಮದು ದೊಡ್ಡ ಕುಟುಂಬ, ದೊಡ್ಡ ವ್ಯವಹಾರ

ಇನ್ನು ತಮ್ಮ ಕುಟುಂಬದ ಬಗ್ಗೆ ಮಾತನಾಡಿರುವ ಸುಧೀರ್‌ ರೆಡ್ಡಿ ಅವರು, ನಾನು ಸಾಫ್ಟ್‌ ವೇರ್‌ ಎಂಜಿನಿಯರ್‌, ಅಮೆರಿಕದಲ್ಲಿದ್ದು ಬಂದವನು. ದೊಡ್ಡ ವೇತನ ಪಡೆಯುತ್ತಿದ್ದೆ. ನಾನು ಹುಟ್ಟಿ ಬೆಳೆದದ್ದೆಲ್ಲ ಕರ್ನಾಟಕವೇ. ನಾನು ಹುಟ್ಟೊಕೆ ಮೊದಲೇ ನಮ್ಮ ತಂದೆಯವರು ನೂರಾರು ಎಕರೆ ಲೇಔಟ್‌ ಹೊಂದಿದ್ದರು. ಆರು ತಿಂಗಳ ಹಿಂದೆ ಅವರು ತೀರಿಕೊಂಡ ನಂತರ ನಮ್ಮ ಅಣ್ಣ ಈ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಫ್ಯಾಮಿಲಿಯವರು ಐಬಿಎಂ ಮೊದಲಾದ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಲಕ್ಕಿ ಆಲಿ ಅವರೊಂದಿಗಿನ ಭೂ ವಿವಾದವೂ ತನಿಖೆಯಲ್ಲಿದೆ. ಇದರಲ್ಲಿ ತಮ್ಮ ತಪ್ಪು ಏನೂ ಇಲ್ಲ ಎಂದು ಹೇಳಿದ್ದಾರೆ ಸುಧೀರ್‌ ರೆಡ್ಡಿ.

ಇದನ್ನೂ ಓದಿ : Sindhuri Vs Roopa : ಡಿ. ರೂಪಾ ರೊಚ್ಚಿಗೇಳಲು ಕಾರಣವಾದ ನಿಜ ಅಂಶ ಯಾವುದು? ಅವರ ಮನೆಗೇ ಬಂತಾ ಅಸಭ್ಯ ಫೋಟೊಗಳು?

Exit mobile version