ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಜಟಾಪಟಿಗೆ (Sindhuri Vs Roopa) ಈಗ ರೋಹಿಣಿ ಸಿಂಧೂರಿ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದಾರೆ. ರೋಹಿಣಿ ಸಿಂಧೂರಿ ಅವರನ್ನು ಸಾರ್ವಜನಿಕವಾಗಿ ಮಾನ ಕಳೆಯುವ ಪ್ರಯತ್ನವನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಭಿಮಾನಿಗಳು #ಉತ್ತರ ಕೊಡಿ ರೂಪಾ ಅವರೇ ಎಂಬ ಹ್ಯಾಷ್ ಟ್ಯಾಗ್ನಲ್ಲಿ ೯ ಪ್ರಶ್ನೆಗಳನ್ನು ಕೇಳಿದ್ದು, ಉತ್ತರ ಬಯಸಿದ್ದಾರೆ.
ರೋಹಿಣಿ ಅಭಿಮಾನಿಗಳ ಪ್ರಶ್ನೆಗಳು ಇಲ್ಲಿವೆ
೧. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ರೋಹಿಣಿ ಸಿಂಧೂರಿ ಅವರದ್ದು ಏನೂ ತಪ್ಪಿಲ್ಲ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದ್ದು, ಮತ್ತೆ ಮತ್ತೆ ನೀವು ಅವರ ಮೇಲೆ ಆರೋಪ ಹೊರಿಸುತ್ತಿರುವುದು ಏಕೆ ಡಿ. ರೂಪಾ ಅವರೇ?
೨. ಹಿರಿಯ ಐಪಿಎಸ್ ಅಧಿಕಾರಿಯಾದ ತಮ್ಮ ಗಮನಕ್ಕೆ ಈ ಆದೇಶ ಬಂದಿಲ್ಲವೇ @D_Roopa_IPS ರವರೇ..?
೩. ತಮ್ಮ ಟ್ವೀಟ್’ನಲ್ಲಿ ಶಿಲ್ಪಾನಾಗ್ ಅವರನ್ನು ‘ಕನ್ನಡತಿ’ ಎಂದು ಹೈಲೈಟ್ ಮಾಡಿರುವ ತಾವು, ಸಿಂಧೂರಿಯವರು ಎಂದಾದರೂ ಕನ್ನಡಿಗರನ್ನು ದ್ವೇಷಿಸಿದ್ದನ್ನು ನೋಡಿದ್ದೀರಾ? ಅವರು ಯಾವುದೇ ವೇದಿಕೆ ಮೇಲೆ ತೆಲುಗುನಲ್ಲಿ ಭಾಷಣ ಮಾಡಿದ್ದನ್ನು ನೋಡಿದ್ದೀರಾ?
೪. ತಾವು ನಿನ್ನೆ ಮಾತನಾಡುವಾಗ ‘ರೋಹಿಣಿಗೂ ನನಗೂ ಹೋಲಿಸಬೇಡಿ’ ಎಂದಿದ್ರಿ, ಇಷ್ಟೆಲ್ಲಾ ನಡೆದರೂ ‘ಎಂದಿನಂತೆ ಶ್ರದ್ಧೆಯಿಂದ ಕೆಲಸ ಮಾಡ್ತೀನಿ’ ಎನ್ನುವ ಅವರೆಲ್ಲಿ.? ಮಾಧ್ಯಮಗಳ ಗಮನ ತಮ್ಮೆಡೆಗೆ ಪ್ರಯತ್ನಿಸುತ್ತಿರುವ ನೀವೆಲ್ಲಿ?
೫. ಮೈಸೂರಿನ ಡಿಸಿ ನಿವಾಸದ ಈಜುಕೊಳ ನಿರ್ಮಾಣದ ಯೋಜನೆ ಮತ್ತು ಯೋಚನೆ ಎರಡು ನನ್ನದಲ್ಲ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ಮೇಡಂ?
೬. ‘ಗಾಯಕ ಲಕ್ಕಿ ಅಲಿ ಜಮೀನಿಗೂ ಮತ್ತು ನನಗೂ ಯಾವುದು ಸಂಬಂಧ ಇಲ್ಲ’ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದಾರೆ, ಅವರ ಕುಟುಂಬದ ಯಾರ ಮೇಲೆ ಆರೋಪ ಬಂದರೂ, ಸಿಂಧೂರಿಯವರ ಮೇಲೆ ನೇರ ಆರೋಪ ಹೊರಿಸುವುದು ಏಕೆ??
೭. ಎಲ್ಲಾ ಕನ್ನಡಿಗರಿಗೆ ತಮ್ಮ ಮೇಲೆ ಅಪಾರ ಗೌರವವಿದೆ, ಕನ್ನಡದ ಎಲ್ಲಾ ಹೆಣ್ಣು ಮಕ್ಕಳಿಗೆ ತಾವೇ ದೊಡ್ಡ ಸ್ಪೂರ್ತಿ, ಇದರ ನಡುವೆ ಕರ್ನಾಟಕ ಸರ್ಕಾರದ ಹಿರಿಯ, ಮಹಿಳಾ ಅಧಿಕಾರಿಯನ್ನು ಬೇರೆ ರಾಜ್ಯದವರು ಎಂದು ಹೇಳಿ ನೋವುಂಟು ಮಾಡುವುದು ಸರಿಯೇ? ಬೇರೆ ರಾಜ್ಯಗಳಲ್ಲಿ ಕನ್ನಡಿಗರು ಯಾರು ಸೇವೆ ಸಲ್ಲಿಸುತ್ತಿಲ್ಲವೇ?
೮. ಸಿಂಧೂರಿಯವರು ಕರ್ನಾಟಕಕ್ಕೆ ಬಂದ ಆರೇ ತಿಂಗಳಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತಿದ್ದಾರೆ, ಅವರು ತಮ್ಮ ಕಚೇರಿ ವೇಳೆಯಲ್ಲಿ ಎಂದಾದರೂ ಕನ್ನಡಿಗರನ್ನು ಕಡೆಗಣಿಸಿರುವುದು ತಮ್ಮ ಗಮನಕ್ಕೆ ಬಂದಿದೆಯೇ?
೯. ರೋಹಿಣಿ ಅವರ ಮೇಲೆ ಯಾವುದೇ ಆರೋಪ ಇದ್ದರೂ, ಅದನ್ನು ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಡಿಜಿಪಿ ಅವರ ಗಮನಕ್ಕೆ ತರದೆ, WhastApp Screenshot ಗಳಲ್ಲಿ ತೆಗೆದ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಸರಿಯೇ?
ಇದೀಗ ರೋಹಿಣಿ ಸಿಂಧೂರಿ ಅವರು ಕೇಳಿರುವ ಪ್ರಶ್ನೆಗಳಿಗೆ ಡಿ. ರೂಪಾ ಮತ್ತು ಅವರ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Sindhuri Vs Roopa : ರೂಪಾ- ಸಿಂಧೂರಿ ಜಗಳಕ್ಕೆ ಸಿಎಂ ಬೊಮ್ಮಾಯಿ ಗರಂ, ಇಬ್ಬರಿಗೂ ಎಚ್ಚರಿಕೆ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ