ಬೆಂಗಳೂರು: ಐಎಸ್ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ (Sindhuri Vs Roopa) ಅವರ ನಡುವಿನ ಬಹಿರಂಗ ಸಮರಕ್ಕೆ ಕಾರಣವಾದ ನಿಜವಾದ ಅಂಶ ಯಾವುದು ಎನ್ನುವುದರ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.
ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ೧೯ ಅಂಶಗಳ ಚಾರ್ಜ್‌ಶೀಟ್ ಸಲ್ಲಿಸಿ ಅದರಲ್ಲಿ ಪ್ರಮುಖವಾಗಿ ಉಲ್ಲೇಖ ಮಾಡಿದ್ದು, ಸಾ.ರಾ ಮಹೇಶ್ ಅವರ ಜತೆಗಿನ ಸಂಧಾನವನ್ನೇ ಆದರೂ ನಿಜವಾದ ಪ್ರಶ್ನೆ ಅದಾಗಿರಲಿಲ್ಲ ಎನ್ನುವುದು ಈಗ ಬಯಲಾಗಿದೆ. ಡಿ. ರೂಪಾ ಅವರು ಅಧಿಕಾರಿಯಾಗಿ ಸಿಂಧೂರಿ ಈ ರೀತಿ ನಡೆದುಕೊಳ್ಳಬಹುದೇ ಎಂದು ಕೇಳಿದ್ದಾರೆ. ಹಲವಾರು ಅಪಸವ್ಯಗಳನ್ನು, ತಪ್ಪುಗಳನ್ನು ಮಾಡಿದ್ದರೂ ಅವರು ಪದೇಪದೆ ಯಾವುದೇ ಕ್ರಮವಿಲ್ಲದೆ ಬಚಾವಾಗುತ್ತಿರುವುದು ಯಾಕೆ ಎನ್ನುವುದನ್ನು ಪ್ರಶ್ನಿಸಿದ್ದಾರೆ.
ಇದೆಲ್ಲದರ ನಡುವೆ ಅತಿ ಹೆಚ್ಚು ಬಾರಿ ಉಲ್ಲೇಖವಾಗಿರುವುದು, ಭಾನುವಾರ ದಿನವಿಡೀ ಅವರಿಬ್ಬರ ನಡುವೆ ಚರ್ಚೆ ನಡೆದಿರುವುದು, ಸಾರ್ವಜನಿಕ ವಲಯದಲ್ಲಿ ಮಾತಿಗೆ ಕಾರಣವಾಗಿರುವುದು ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ವಿಚಾರಗಳು ಮತ್ತು ಅವರು ಮೂವರು ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎನ್ನಲಾದ ಖಾಸಗಿ ಫೋಟೊಗಳು. ಈ ಖಾಸಗಿ ಫೋಟೊಗಳೇ ಡಿ. ರೂಪಾ ಅವರು ರೊಚ್ಚಿಗೇಳಲು ಪ್ರಮುಖ ಕಾರಣ ಎನ್ನುವುದು ಬಹುತೇಕ ಸ್ಪಷ್ಟಗೊಂಡಿದೆ.
ಇದು ಇಂದು ನಿನ್ನೆಯ ಕಥೆಯಲ್ಲ!
ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಿನ ಫೈಟ್ ಇವತ್ತು ನಿನ್ನೆಯ ಸಂಗತಿಯಲ್ಲ. ಕಳೆದ ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ ಎಂಬ ಮಾತಿದೆ. ನಾಲ್ಕು ವರ್ಷದ ಹಿಂದೆಯೇ ರೋಹಿಣಿ ಅವರು ಡಿ. ರೂಪಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದ್ದಾರಂತೆ. ಇದಕ್ಕೆ ಬಲವಾದ ಕಾರಣವಿದೆ ಎಂದು ಹೇಳಲಾಗುತ್ತಿದೆ. ಹಾಗಂತ ಡಿ. ರೂಪಾ ಅವರ ಪತಿ, ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಜತೆಗೆ ಸ್ನೇಹದಿಂದಲೇ ಇದ್ದಾರೆ ರೋಹಿಣಿ. ಸ್ವತಃ ಡಿ. ರೂಪಾ ಅವರೇ ಹೇಳಿಕೊಂಡಿರುವಂತೆ, ರೋಹಿಣಿ ಅವರನ್ನು ಹುದ್ದೆಯನ್ನು ಸ್ವೀಕರಿಸಿ ಒಂದೇ ತಿಂಗಳಲ್ಲಿ ವರ್ಗಾವಣೆ ಮಾಡಿದಾಗ ಅವರಿಗೆ ಬೆನ್ನೆಲುಬಾಗಿ ನಿಂತದ್ದು, ಅಪಲೇಟ್ ಟ್ರಿಬ್ಯೂನಲ್‌ಗಳಿಗೆ ದೂರು ನೀಡಲು ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಬರೆದುಕೊಟ್ಟಿದ್ದೆಲ್ಲ ಮೌನೀಶ್ ಮೌದ್ಗಿಲ್ ಅವರೇ.
ಆದರೆ, ಅದೇ ಸಂದರ್ಭದಲ್ಲಿ ಡಿ. ರೂಪಾ ಮತ್ತು ರೋಹಿಣಿ ಅವರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು ಎಂದು ಹೇಳಲಾಗುತ್ತಿದೆ. ಮೌನೀಶ್ ಅವರು ರೋಹಿಣಿಗೆ ಸಹಾಯ ಮಾಡುತ್ತಿರುವುದು ಒಂದು ಹಂತದಲ್ಲಿ ಡಿ. ರೂಪಾ ಅವರನ್ನು ಅಸಹನೆಗೆ ತಳ್ಳಿದೆ ಎನ್ನಲಾಗುತ್ತಿದೆ.
ಅದಕ್ಕಿಂತಲೂ ಮುಖ್ಯವಾಗಿ ಡಿ. ರೂಪಾ ಅವರನ್ನು ಕೆರಳಿಸಿದ್ದು ರೋಹಿಣಿ ಅವರು ಕಳುಹಿಸುತ್ತಿದ್ದ ಖಾಸಗಿ ಫೋಟೊಗಳು. ಮೂವರು ಅಧಿಕಾರಿಗಳಿಗೆ ಅವುಗಳನ್ನು ಕಳುಹಿಸಿದ್ದಾರೆ ಎಂದು ಡಿ. ರೂಪಾ ಹೇಳಿದ್ದಾರೆ. ಈ ಫೋಟೊಗಳು ಅವರಿಗೆ ಎಲ್ಲಿ ಸಿಕ್ಕಿತು? ಮೌನೀಶ್ ಮೌದ್ಗಿಲ್ ಅವರಿಗೂ ಈ ಚಿತ್ರಗಳು ಬಂದಿದ್ದವೇ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಈ ಫೋಟೊಗಳು ಸಂಸಾರದಲ್ಲಿ ಹುಳಿ ಹಿಂಡುವ ಪ್ರಯತ್ನವನ್ನು ಹೊಂದಿವೆ ಎಂದು ಪದೇಪದೆ ಉಲ್ಲೇಖಿಸುತ್ತಾರೆ ಡಿ. ರೂಪಾ.
ರೋಹಿಣಿ ಅವರು ಈ ರೀತಿ ಪುರುಷ ಅಧಿಕಾರಿಗಳ ಜತೆ ಸಲುಗೆ ಹೊಂದಿರುವುದರಿಂದ ಕೌಟುಂಬಿಕವಾಗಿ ಸಮಸ್ಯೆಯಾಗಿದೆ, ಸಂಸಾರಗಳು ಒಡೆದಿವೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಡಿ.ಕೆ. ರವಿ, ಹರೀಶ್ ಮತ್ತು ಜಿಲ್ಲಾಧಿಕಾರಿ ದಂಪತಿಯನ್ನು ಉಲ್ಲೇಖ ಮಾಡುತ್ತಾರೆ. ಒಬ್ಬ ಪುರುಷ ಅಧಿಕಾರಿಗೆ ಇಂಥ ಸಭ್ಯವಲ್ಲದ ಫೋಟೊಗಳನ್ನು ಕಳುಹಿಸುವುದರ ಹಿಂದಿನ ಉದ್ದೇಶವೇನು ಎಂದು ಕೇಳುತ್ತಾರೆ. ಮನೆಯಲ್ಲಿ ದಿಂಬು ಇಟ್ಟುಕೊಂಡು ಮಲಗಿರುವ ಚಿತ್ರ ಕೆಲವರಿಗೆ ಏನೂ ಅನಿಸದೆ ಇರಬಹುದು, ಆದರೆ, ಇದರಲ್ಲಿ ಬೇರೆಯದೇ ಆದ ಅರ್ಥಗಳಿವೆ ಎಂದು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ಅವರ ನಡವಳಿಕೆಗಳಿಂದ ಹಲವು ಅಧಿಕಾರಿಗಳ ಕುಟುಂಬಗಳಿಗೆ ತೊಂದರೆಯಾಗಿದೆ ಎನ್ನುವುದನ್ನು ಡಿ. ರೂಪಾ ಉಲ್ಲೇಖಿಸುತ್ತಾರೆ. ಡಿ.ಕೆ. ರವಿ ಪತ್ನಿ ಕುಸುಮಾ ಕೂಡಾ ಈ ಅಂಶವನ್ನು ಸಮರ್ಥಿಸಿದ್ದಾರೆ. ಕುಸುಮಾ ಅವರನ್ನು ಉಲ್ಲೇಖಿಸಿ ಮಾತನಾಡುವಾಗ ಡಿ. ರೂಪಾ ಕೂಡಾ ಇದೇ ಮಾತುಗಳನ್ನು ಉಲ್ಲೇಖಿಸುತ್ತಾರೆ.
ರೋಹಿಣಿ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ವೈಯಕ್ತಿಕ ಬದುಕನ್ನು ಪ್ರವೇಶಿಸುತ್ತಿದ್ದಾರೆ ಎನ್ನುವುದೇ ಡಿ. ರೂಪಾ ಅವರ ಸಿಟ್ಟಿನ ಪ್ರಧಾನ ಅಂಶವಾಗಿ ಕಾಣುತ್ತಿದೆ. ಅದರ ಜತೆಗೆ ಐಎಎಸ್- ಐಪಿಎಸ್ ಲೋಕದಲ್ಲಿ ರೋಹಿಣಿ ಸಿಂಧೂರಿ ಅವರು ಹೊಂದಿರುವ ಆಕರ್ಷಣೆ ಮತ್ತು ಹಿಡಿತಗಳೂ ಅವರನ್ನು ಕೆರಳಿಸಿವೆ. ಅದನ್ನೂ ಅವರು ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ತಪ್ಪುಗಳನ್ನು ಮಾಡಿದರೂ ತನಿಖೆಯಲ್ಲಿ ಎಲ್ಲವೂ ಸ್ಪಷ್ಟವಾದರೂ ಶಿಕ್ಷೆಯೇ ಆಗದಿರುವಂತೆ ಆಕೆ ಯಾವ ಪ್ರಭಾವ ಬಳಸಿ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Sindhuri Vs Roopa : ಪಿಕ್ಚರ್ಸ್ ಅಭೀ ಬಾಕಿ ಹೈ; ಈ ಚಿತ್ರಗಳು ಕೇವಲ ಸ್ಯಾಂಪಲ್ಸ್ ಅಷ್ಟೇ ಎಂದ ಡಿ. ರೂಪಾ