Site icon Vistara News

ಪಂಚಭೂತಗಳಲ್ಲಿ ಲೀನರಾದ ಶಿವಮೊಗ್ಗ ಸುಬ್ಬಣ್ಣ, ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ

ಶಿವಮೊಗ್ಗ ಸುಬ್ಬಣ್ಣ

ಬೆಂಗಳೂರು: ಹೃದಯಾಘಾತದಿಂದ ನಿಧನರಾಗಿದ್ದ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಅಂತಿಮ ದರ್ಶನಕ್ಕೆ ಶುಕ್ರವಾರ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಪಾರ ಜನಸಾಗರದ ನಡುವೆ ಹಿಂದು ಧರ್ಮದ ಋಗ್ವೇದ ಸಂಪ್ರದಾಯ‌ದ ಪ್ರಕಾರ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

ಇದಕ್ಕೂ ಮೊದಲು ಬೆಂಗಳೂರು ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ವಿವಿಧ ಸಚಿವರು ಸೇರಿ ಚಿತ್ರರಂಗದ ಹಲವು ಗಣ್ಯರು ಅಂತಿಮ ದರ್ಶನ ಪಡೆದು, ಸುಬ್ಬಣ್ಣ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸುಗಮ ಸಂಗೀತಕ್ಕೆ ಸುಬ್ಬಣ್ಣ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸದಾಕಾಲ ಲವಲವಿಕೆಯಿಂದ ಇದ್ದ ಅವರ ಜತೆ ನನಗೆ ಆತ್ಮೀಯ ಸಂಬಂಧ ಇತ್ತು. ಅವರ ಅಗಲಿಕೆ ಇಡೀ ಕರ್ನಾಟಕದ ಕಲಾ ವೃಂದಕ್ಕೆ ತುಂಬಲಾರದ ನಷ್ಟ, ಕಷ್ಟದ ಸಂಗೀತವನ್ನು ಕೂಡ ಸುಲಭವಾಗಿ ಹಾಡುವ ಕಲೆ ಅವರಲ್ಲಿತ್ತು. ಸುಬ್ಬಣ್ಣ ಎಂದಿಗೂ ಅವರ ಹಾಡಿನ ಮೂಲಕ ಜೀವಂತವಾಗಿ ಇರುತ್ತಾರೆ, ನಮ್ಮ ಕರ್ನಾಟಕದ ಯುವ ಶಕ್ತಿಗೆ ದೊಡ್ಡ ಪ್ರೇರಣೆಯಾಗಿದ್ದಾರೆ. ಅವರ ಸ್ಮಾರಕ, ಪ್ರತಿಷ್ಠಾನ, ಪ್ರಶಸ್ತಿ ಸ್ಥಾಪಿಸುವ ಬಗ್ಗೆ ಕುಟುಂಬಸ್ಥರ ಅಭಿಪ್ರಾಯ ಪಡೆಯುತ್ತೇವೆ, ಇದಕ್ಕಾಗಿ ಸರ್ಕಾರ ಅಗತ್ಯ ಸಹಕಾರ ನೀಡುತ್ತದೆ ಎಂದು ತಿಳಿಸಿದ ಬಳಿಕ, ಸುಬ್ಬಣ್ಣ ಸೊಸೆ ಅರ್ಚನಾ ಉಡುಪ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ | ಶಿವಮೊಗ್ಗ ಸುಬ್ಬಣ್ಣ | ಕಳಚಿಬಿತ್ತು ಸುಗಮ ಸಂಗೀತದ ಕೊನೆಯ ಪಿಲ್ಲರ್:‌ ಅರ್ಚನಾ ಉಡುಪ ಬೇಸರ

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಸುಬ್ಬಣ್ಣ ನಿಧನ ಸುಗಮ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಜನರ ನೆನಪಿನಲ್ಲಿ ಸದಾ ಉಳಿಯುತ್ತಾರೆ. ನೇರ ನುಡಿ, ವ್ಯಕ್ತಿತ್ವದ ಸುಬ್ಬಣ್ಣ, ಸಿ.ಅಶ್ವತ್ಥ್ ಅವರಂತಹ ಮೇರು ಕಲಾವಿದರನ್ನು ನಾಡಿನ ಜನ ಎಂದೂ ಮರೆಯಲಾರರು ಎಂದರು.

ಗೃಹ ಸಚಿವ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅವರು ನಮ್ಮೂರಿನ ಹಿರಿಯ ಕಲಾವಿದರಾಗಿದ್ದು, ಮಲೆನಾಡಿನ ಪ್ರತಿಭೆ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ಅವರು ಹೊಸನಗರದ ಹೆಮ್ಮೆ. ಸಂಗೀತ ಲೋಕದಲ್ಲಿ ಕನ್ನಡಿಗರಿಗೆ ಇಂತಹ ಪ್ರಶಸ್ತಿ ಸಿಕ್ಕಿರುವುದು ಕಡಿಮೆ. ಇವರ ಅಗಲಿಕೆ ಸಾಂಸ್ಕೃತಿಕ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದರು.

ಶಿವಮೊಗ್ಗ ನಗರಕ್ಕೆ ಖ್ಯಾತಿ ತಂದುಕೊಟ್ಟವರಲ್ಲಿ ಕಲಾವಿದ ಸುಬ್ಬಣ್ಣ ಸಹ ಒಬ್ಬರು. ಎಲ್ಲ ಸ್ನೇಹಿತರ ಜತೆಗೆ ಹಾಡುತ್ತಿದ್ದರು, ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಸಿನಿಮಾ ರಂಗಕ್ಕೆ ಬಂದು ಹಿನ್ನೆಲೆ ಗಾಯಕರಾಗಿ ಯುವ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಸುಬ್ಬಣ್ಣ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ನೋವು ಇದೆ. ಅವರ ಪ್ರತಿಭೆ ಎಲ್ಲ ಯುವಕರಿಗೆ ಸ್ಫೂರ್ತಿ ಎಂದು ಸಚಿವ ಕೆ ಎಸ್‌ ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗ ಸುಬ್ಬಣ್ಣ ಅವರ ಹಾಡುಗಳನ್ನು ಕಲಿತು ಗಾಯನ ಸ್ಪರ್ಧೆಗಳಲ್ಲಿ ಹಾಡಿದ್ದೇನೆ. “ನಿನ್ನೆಡೆಗೆ ಬರುವಾಗʼ ಹಾಡನ್ನು ಅನೇಕ ಸ್ಪರ್ಧೆಗಳಲ್ಲಿ ಹಾಡಿದ್ದೇನೆ. ಅವರ ಜತೆ ಹಲವು ವೇದಿಕೆಗಳನ್ನು ಹಂಚಿಕೊಂಡಿದ್ದೆ. ಅವರ ಹಾಡುಗಳು ಸದಾ ನಮ್ಮ ನೆನಪಿನಲ್ಲಿ ಇರುತ್ತದೆ ಎಂದು ಗಾಯಕಿ ಶಮಿತಾ ಮಲ್ನಾಡ್ ನುಡಿದರು.

ಸಚಿವರಾದ ನಾರಾಯಣ ಗೌಡ ಹಾಗೂ ಸುನೀಲ್ ಕುಮಾರ್, ಸಂಚಾರ ಪೊಲೀಸ್‌ ವಿಭಾಗದ ಜಂಟಿ ಆಯುಕ್ತ ಡಾ. ರವೀಕಾಂತೇ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್, ಉಪಾಧ್ಯಕ್ಷ ಜೈ ಜಗದೀಶ್, ನಾಗತಿಹಳ್ಳಿ ಚಂದ್ರಶೇಖರ್ ಮತ್ತಿತರ ಗಣ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಇದನ್ನೂ ಓದಿ | ಶಿವಮೊಗ್ಗ ಸುಬ್ಬಣ್ಣ | ಸಾಹಿತ್ಯವನ್ನು ತಲುಪಿಸಲು ಹಾಡುತ್ತಿದ್ದ ಗಾಯಕ: ರಂಜನಿ ಕೀರ್ತಿ

Exit mobile version