Site icon Vistara News

Sirsi News | ವಿಧಾನಸಭಾಧ್ಯಕ್ಷ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಸಕಲ ಸಿದ್ಧತೆ; 20 ಸಾವಿರ ಜನ ಸೇರುವ ನಿರೀಕ್ಷೆ

namma hemme namma kageri Program sirsi

ಶಿರಸಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಮಾರಿಕಾಂಬಾ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ (ಜ.೧೫) ನಡೆಯುವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು ೨೦ ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.

ಸ್ಪೀಕರ್ ಕಾಗೇರಿ ಅಭಿನಂದನಾ ಸಮಿತಿಯ ನೇತೃತ್ವದಲ್ಲಿ ಪಕ್ಷಾತೀತವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಮಾರಿಕಾಂಬಾ ಪ್ರೌಢಶಾಲೆ ಆವರಣದಲ್ಲಿ ವಿಶಾಲ ಶಾಮಿಯಾನ ಹಾಕಲಾಗಿದ್ದು, ಸುಮಾರು 6 ಸಾವಿರ ಆಸನದ ಭವ್ಯ ವೇದಿಕೆ ಸಿದ್ಧವಾಗುತ್ತಿದೆ. ನಗರದ ತುಂಬೆಲ್ಲ ಕಾಗೇರಿ ಅಭಿಮಾನದ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ‌

ವೇದಿಕೆಯ ಮುಂಭಾಗ ವಿಐಪಿ ಕೌಂಟರ್‌ ಮಾಡಲಾಗಿದೆ. ಆವರಣದ ಮುಂಭಾಗದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದ್ದು 20 ಕೌಂಟರ್‌ ತೆರೆಯಲಾಗಿದೆ. ಮಾರಿಕಾಂಬಾ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಕೂಡ ವಿಶಾಲ ಶಾಮಿಯಾನ, ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೌಂಟರ್‌ಗೆ 25 ಕಾರ್ಯಕರ್ತರನ್ನು ನಿಯೋಜಿಸಲಾಗುತ್ತಿದೆ. ಊಟಕ್ಕೆ ಅಡಕೆ ಹಾಳೆ ತಟ್ಟೆಯನ್ನು ಬಳಸಲಾಗುತ್ತಿದೆ.

ಶಾಮಿಯಾನದ ದ್ವಾರದಲ್ಲಿ ಅಡಕೆ ಮಂಟಪವನ್ನು ಕುಳವೆಯ ಚಾರುಚಂದ್ರ ಶಾಸ್ತ್ರಿ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದೆ. ವಾಹನಗಳ ಪಾರ್ಕಿಂಗ್‌ಗೆ 4-5 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಬೈಕ್‌ಗಳ ನಿಲುಗಡೆಗೆ ಶಾಸಕರ ಮಾದರಿ 2 ನಂ.ಶಾಲೆ, ಗೋವಿಂದ ರಾವ್‌ ಹಾಲ್‌, ದೀನದಯಾಳ ಭವನ, ದೊಡ್ಡ ವಾಹನಗಳ ಪಾರ್ಕಿಂಗ್‌ಗೆ ವಿಕಾಸಾಶ್ರಮ, ಯೋಗ ಮಂದಿರ, ಅರವಿಂದ ಹಾಸ್ಟೆಲ್‌, ರಾಘವೇಂದ್ರ ಕಲ್ಯಾಣ ಮಂಟಪ, ಪೊಲೀಸ್‌ ಗ್ರೌಂಡ್‌ನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ೨೦ ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

ಇದನ್ನೂ ಓದಿ | Panchamasali reservation | ಸ್ವಾಮೀಜಿಗಳು ವಿಷಮ ಪರಿಸ್ಥಿತಿ ನಿರ್ಮಿಸಬಾರದು ಎಂದ ಬೊಮ್ಮಾಯಿ; ಪಕ್ಷ ವಿರೋಧಿಗಳ ಬಗ್ಗೆಯೂ ಕ್ರಮ

ಮಾರಿಕಾಂಬಾ ಶಾಲಾ ಆವರಣದ ಆರಂಭದಲ್ಲಿ ವಿಧಾನಸೌಧದ ಬೋರ್ಡ್‌ ಒಳಗೊಂಡು ಸ್ಪೀಕರ್‌ ಕಾಗೇರಿ ಅವರ ಪ್ರತಿಕೃತಿ ನಿಲ್ಲಿಸಲಾಗುತ್ತಿದೆ. ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಯೇ ಸಂಜೆಯ ಸಮಯದಲ್ಲಿ ಕಾಗೇರಿ ಅವರಿಗೆ ಅಭಿನಂದಿಸುವುದಕ್ಕೂ ಅವಕಾಶ ನೀಡಲಾಗುತ್ತಿದೆ.

ನಮ್ಮ ಹೆಮ್ಮೆ ನಮ್ಮ ಕಾಗೇರಿ ಘೋಷ ವಾಕ್ಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮುಂತಾದವರು ಭಾಗವಹಿಸುವರು. ಮಧ್ಯಾಹ್ನದ ನಂತರ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಸುನೀಲ್‌ ಕುಮಾರ, ಮಾಜಿ ಸಚಿವರಾದ ಜಿ.ಟಿ.ದೇವೆಗೌಡ, ಕೃಷ್ಣ ಭೈರೇಗೌಡ, ಹರತಾಳು ಹಾಲಪ್ಪ ಭಾಗವಹಿಸುವರು. ಚಿಂತಕ ಹಿರೇಮಗಳೂರು ಕಣ್ಣನ್‌ ವಿಶೇಷ ಉಪಸ್ಥಿತಿ ಇರಲಿದೆ.

ಇದನ್ನೂ ಓದಿ | Indian Cricket Team | ತಿರುವನಂತಪುರದ ಪದ್ಮನಾಭಸ್ವಾಮಿ ದೇಗುಲಕ್ಕೆ ಭಾರತ ಕ್ರಿಕೆಟ್​ ತಂಡದ ಆಟಗಾರರು ಭೇಟಿ

Exit mobile version