Site icon Vistara News

Sirsi News: ದೇಶ ಹಾಳು ಮಾಡುವ ಕಾಂಗ್ರೆಸ್ ಪ್ರಣಾಳಿಕೆ ನಂಬಬಾರದು: ಹರಿಪ್ರಕಾಶ್ ಕೋಣೆಮನೆ

BJP State Spokesperson Hariprakash konemane pressmeet at sirsi

ಶಿರಸಿ: ದೇಶ ಒಡೆಯುವ, ದೇಶ ಹಾಳು ಮಾಡುವ, ರಾಜ್ಯದ ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್ (Congress) ಪ್ರಣಾಳಿಕೆಯ ಬಗ್ಗೆ ಯಾರೂ ಕಿವಿ ಕೊಡಬಾರದು; ಯಾರೂ ನಂಬಬಾರದು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ (Sirsi News) ತಿಳಿಸಿದರು.

ನಗರದ ದೀನದಯಾಳ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆ ಎಂದು ನ್ಯಾಯಪತ್ರ ಬಿಡುಗಡೆ ಪ್ರಹಸನದ ಮೂಲಕ ಕಾಂಗ್ರೆಸ್ ತಾನು ಕಳೆದ 60 ವರ್ಷಗಳ ಕಾಲ ಮಾಡಿದ ಅನ್ಯಾಯವನ್ನು ಮುಚ್ಚಿ ಹಾಕಲು ಮುಂದಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: Millets For Health: ಸಿರಿಧಾನ್ಯಗಳನ್ನು ನಾವು ಏಕೆ ತಿನ್ನಬೇಕೆಂದರೆ…

ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯು ಆ ಪಕ್ಷದ ಸೋಲಿನ ಇತಿಹಾಸ ಬಿಚ್ಚಿಟ್ಟಿವೆ. 2017ರ ನಂತರ ದೇಶದಲ್ಲಿ ಹಣದುಬ್ಬರ ಕಡಿಮೆಯಿತ್ತು. ಆದರೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಣದುಬ್ಬರ ಹೆಚ್ಚಿತ್ತು. ಕಾಂಗ್ರೆಸ್‌ನ 60 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ. 1.19 ಹಾಗೂ 2014ರಿಂದ ಈಚೆಗೆ ಬಿಜೆಪಿ ಅಧಿಕಾರಾವಧಿಯಲ್ಲಿ ಶೇ.26 ರಷ್ಟು ದಾಖಲಾಗಿದೆ.

ಕಾಂಗ್ರೆಸ್ ದೇಶದ ಪರವಾಗಿದೆಯೇ ಅಥವಾ ಭಾರತದ ವೈರಿ ರಾಷ್ಟ್ರಗಳ ಪ್ರಲೋಭನೆ ಪಡೆದು ಅದರಂತೆ ವರ್ತಿಸುತ್ತಿದೆಯೇ?. 1936ರಲ್ಲಿ ಮುಸ್ಲಿಂ ಲೀಗ್ ಪ್ರಣಾಳಿಕೆ ಹಾಗೂ 2024ರ ಕಾಂಗ್ರೆಸ್ ಪ್ರಣಾಳಿಕೆಗೂ ಯಾವುದೇ ವ್ಯತ್ಯಾಸವಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯು ಪಾಕಿಸ್ತಾನದ ಪ್ರಣಾಳಿಕೆಯಂತೆ ಗೋಚರಿಸುತ್ತಿದೆ ಎಂದು ಆರೋಪಿಸಿದರು.

ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ನೀಡುವಂತಿರುವ ಕಾಂಗ್ರೆಸ್ ಪ್ರಣಾಳಿಕೆಯು ಕಾಂಗ್ರೆಸ್‌ನ ರಾಹುಲ್ ಗಾಂಧಿ ನಕ್ಸಲ್ ನಾಯಕರಾಗುತ್ತಿದ್ದಾರೆಯೇ? ಎಂಬ ಅನುಮಾನ ಬರಲು ಕಾರಣವಾಗಿದೆ ಎಂದು ದೂರಿದ ಅವರು,‌ ಇದೇ ಕಾರಣದಿಂದ ದೇಶದಲ್ಲಿ ನಾವು 400 ಕ್ಕಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲುತ್ತೇವೆ. ಕರ್ನಾಟಕದಲ್ಲಿ ಹಿಂದೆ 27 ಸ್ಥಾನಗಳನ್ನು ಹೊಂದಿದ್ದೆವು. ಈ ಬಾರಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ. ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗೋದು ಬಿಗ್ ಝೀರೋ ಎಂದು ಲೇವಡಿ ಮಾಡಿದರು. ಈ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಪ್ರತಿಪಕ್ಷ ಸ್ಥಾನವೂ ಸಿಗುವುದಿಲ್ಲ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: 2nd PUC Result 2024: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗಿನ ತಾಯಿ – ಮಗಳು ಪಾಸ್!

ಬಿಜೆಪಿ ಸರ್ಕಾರ ಈ ಹಿಂದೆ ಜನರ ಪರವಾಗಿ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ, ವಿವೇಕ ಶಾಲೆ ಅಭಿವೃದ್ಧಿ ಯೋಜನೆ, ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ, ಜಿಲ್ಲೆಗೊಂದು ಗೋ ಶಾಲೆ ಯೋಜನೆ, ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ. ಕೃಷಿ ಭೂಮಿ ಮಾರಾಟ ಕಾಯ್ದೆ, ಸ್ತ್ರೀ ಸಾಮರ್ಥ್ಯ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ಮಕ್ಕಳಿಗೆ ಉಚಿತ ಬಸ್ ಪಾಸ್ ಯೋಜನೆ ಕೈಬಿಡಲಾಗಿದೆ. 36 ಸಾವಿರ ಕೋಟಿ ಎಸ್ಸಿ ಎಸ್ಟಿ ಅಭಿವೃದ್ಧಿ ಹಣವನ್ನೂ ಪೊಳ್ಳು ಗ್ಯಾರಂಟಿಗಾಗಿ ಖರ್ಚು ಮಾಡಲಾಗಿದೆ. ಕಾಂಗ್ರೆಸ್‌ನ ಎಲ್ಲಾ ತೀರ್ಮಾನ ಜನ ವಿರೋಧಿಯಾಗಿದೆ ಎಂದವರು ವಾಗ್ದಾಳಿ ನಡೆಸಿದರು.

ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅತೃಪ್ತಿ ಇದೇ ಮೊದಲಲ್ಲ. ಅವರು ಬಿಜೆಪಿಗೆ ಬಂದಿದ್ದಿರಲಿ, ಹೋಗುತ್ತಿರುವುದಿರಲಿ ಮೊದಲಲ್ಲ. ಆದರೆ ಈ ಬಾರಿ ಪಕ್ಷಾಂತರ ಮಾಡಲು ಅವರು ಇಷ್ಟೊಂದು ಮೀನಾಮೇಷ ಮಾಡುತ್ತಿರುವುದೇಕೆ ಎಂದು ಹರಿಪ್ರಕಾಶ ಕೋಣೆಮನೆ ಪ್ರಶ್ನಿಸಿದರು.

ಪಕ್ಷಕ್ಕೆ ನಾಯಕರಿಗಿಂತ ಕಾರ್ಯಕರ್ತರು ಮುಖ್ಯ. ಆದರೂ ಹೆಬ್ಬಾರ್ ಅವರಿಗೆ ವ್ಯಕ್ತಿಗತ ಗೌರವ ಕೊಡಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪದಾಧಿಕಾರಿಗಳ ಹುದ್ದೆಯಿಂದ ಇಳಿಸಿ ಹೊರಗಿಡುವ ಸ್ಥಿತಿ ಬಂತು. ಅದನ್ನು ಮಾಡಿದ್ದು ಬಿಜೆಪಿಗರ ಬಹುದೊಡ್ಡ ತಪ್ಪು. ಇನ್ನು ಮುಂದೆ ವ್ಯಕ್ತಿಗತವಾಗಿ ಗೌರವ ಕೊಡುವ ಬದಲು ಕಾರ್ಯಕರ್ತರಿಗೆ ಗೌರವ ಕೊಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಜಿಲ್ಲಾ ಖಜಾಂಚಿ ರಮಾಕಾಂತ ಭಟ್ ಇದ್ದರು.

ಇದನ್ನೂ ಓದಿ: Water Crisis: ಬೆಂಗಳೂರಿನಲ್ಲಿ ಕುಡಿಯುವ ನೀರಿಂದ ವಾಹನ ತೊಳೆದವರಿಗೆ 20.25 ಲಕ್ಷ ರೂಪಾಯಿ ದಂಡ!

ಎ. 12ರಂದು ನಾಮಪತ್ರ ಸಲ್ಲಿಕೆ

ಏ.12ರಂದು ಶುಕ್ರವಾರ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರವಾರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಗೋವಾ ಸಿಎಂ ಪ್ರಮೋದ ಸಾವಂತ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಸುನೀಲ್ ಕುಮಾರ್, ವಿಠ್ಠಲ ಹಳಗೇಕರ್, ದಿನಕರ ಶೆಟ್ಟಿ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್‌ ತಿಳಿಸಿದ್ದಾರೆ.

Exit mobile version