ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್
ಶಿರಸಿ: ಕಳೆದ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ಹೆದ್ದಾರಿ ಬಂದ್ (Bandh) ಮಾಡುವ ನಿರ್ಧಾರ ಕೈಗೊಂಡಿದೆ.
ಸಾಗರಮಾಲಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆ ಶಿರಸಿ- ಕುಮಟಾ ಭಾಗದ ರಾಷ್ಟ್ರೀಯ ಹೆದ್ದಾರಿ 766 (E) ಅಗಲೀಕರಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಕಾರಣ ನವೆಂಬರ್ 1ರಿಂದ ಮೇ 31ರವರೆಗೆ ವಾಹನ ಸಂಚಾರ ಬಂದ್ ಆಗಲಿದೆ.
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಆರ್.ಎನ್.ಎಸ್.ಕಂಪನಿಗೆ ಗುತ್ತಿಗೆ ನೀಡಲಾಗಿದೆ. 2020ರಲ್ಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಹನ ನಿರ್ಬಂಧಕ್ಕೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಇದೀಗ ಹೆದ್ದಾರಿ ಪ್ರಾಧಿಕಾರವು ಸಹ ಸಂಚಾರ ದಟ್ಟಣೆ ಕಡಿಮೆ ಮಾಡಿ ಕಾಮಗಾರಿ ಮುಗಿಸಲು ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿದೆ. ಈಗಾಗಲೇ ಅಗಲೀಕರಣದ 33 ಕಿಲೋಮೀಟರ್ ವ್ಯಾಪ್ತಿಯಲ್ಲಿ 26 ಕಿಲೋಮೀಟರ್ವರೆಗೂ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ವಾಹನಗಳಿಗೆ ನಿರ್ಬಂಧಿಸಲಾಗುವುದು. ಇನ್ನು ವಾಹನ ಸವಾರರಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದು, ಕುಮಟಾ-ದೊಡ್ಮನೆ-ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೊನ್ನಾವರ-ಮಾವಿನಗುಂಡಿ, ಸಿದ್ದಾಪುರ, ಶಿರಸಿ ಮಾರ್ಗದಲ್ಲಿ ಎಲ್ಲ ತರಹದ ವಾಹನಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಶಿರಸಿ-ಯಾಣ-ವಡ್ಡಿ-ಕುಮಟಾ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ: Food Grain: 2022-23ರಲ್ಲಿ ದಾಖಲೆಯ ಆಹಾರ ಧಾನ್ಯ ಉತ್ಪಾದನೆ; ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇನ್ನು ಶಿರಸಿಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮಾರ್ಗದಲ್ಲಿ ಎಲ್ಲ ತರಹದ ಭಾರಿ ವಾಹನಗಳ ಸಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ . ಆದರೆ ಘಟ್ಟ ಭಾಗದ ಯಾಣ ಮತ್ತು ದೊಡ್ಮನೆ ಮಾರ್ಗದಲ್ಲಿ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಿದೆ.
ಇನ್ನು ಕಳೆದ ನಾಲ್ಕು ವರ್ಷದಿಂದ ಶಿರಸಿ-ಕುಮಟಾ ಹೆದ್ದಾರಿ ಅಗಲೀಕರಣಕ್ಕೆ ಹೋರಾಟಗಳು ನಡೆದಿವೆ. ಕಾಮಗಾರಿ ವಿಳಂಬಕ್ಕೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಕೂಡ ಮಾಡಲಾಗಿತ್ತು. ಅಲ್ಲದೆ ಕೊರೋನ ವೇಳೆಯಲ್ಲಿ ಎರಡು ವರ್ಷಗಳ ಕಾಲ ಹೆದ್ದಾರಿ ಬಂದ್ ಆಗಿದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ. ಇನ್ನು ಎರಡು ವರ್ಷದಲ್ಲಿ ಪೂರ್ಣಗೊಳ್ಳದ ಕಾಮಗಾರಿ ಕೇವಲ ಏಳು ತಿಂಗಳಲ್ಲಿ ಪೂರ್ಣಗೊಳ್ಳಲು ಸಾಧ್ಯವಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಒಟ್ಟಾರೆ ನವಂಬರ್ 1 ರಿಂದ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಬಂದ್ ಆಗೋದಂತೂ ಪಕ್ಕಾ ಆಗಿದೆ. ಹೆದ್ದಾರಿ ಬಂದ್ ನಿಂದ ವಾಹನ ಸವಾರರಿಗೆ ಜಿಲ್ಲಾಡಳಿತ ಬದಲಿ ರಸ್ತೆ ಸಂಪರ್ಕ ಕಲ್ಪಿಸಿಕೊಡಲಿದೆ. ಆದರೆ ಏಳು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಾ… ಸಾರ್ವಜನಿಕರ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ರೆಡಿಯಾಗುತ್ತಾ ಕಾದು ನೋಡಬೇಕಿದೆ.
ಇದನ್ನೂ ಓದಿ: Viral Video: ಕಾಳಿಂಗ ಸರ್ಪಕ್ಕೇ ಸ್ನಾನ ಮಾಡಿಸಿದ ರಣಧೀರ!
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಸಾಗುವ ರಸ್ತೆಯಲ್ಲಿ ಕೆಲವು ಸೇತುವೆಗಳ ಕಾಮಗಾರಿ ನಡೆಯಬೇಕಿದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದ್ದು, ಆ ಭಾಗದ ಸೇತುವೆ ಕಾಮಗಾರಿ ಹಾಗೂ ದೇವಿಮನೆ ಘಾಟ್ ಬಳಿ ರಸ್ತೆ ಕಾಮಗಾರಿಗೆ ಸಮಯಾವಕಾಶ ಕೇಳಿಕೊಂಡಿದೆ. ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ ಕೈಕೊಳ್ಳುವಂತೆ ಸೂಚನೆ ನೀಡಿದೆ. ಈ ಹಿನ್ನಲೆ ನ.1 ರಿಂದ ಮೇ.31ರವರೆಗೆ ಹೆದ್ದಾರಿ ಬಂದ್ ಮಾಡಲಾಗುವುದು. ಇನ್ನು ವಾಹನಗಳ ಸಂಚಾರಕ್ಕೆ ಬದಲಿ ಸಂಪರ್ಕ ಕಲ್ಪಿಸಲಾಗುವುದು.
–ಆರ್. ದೇವರಾಜ್, ಉಪವಿಭಾಧಿಕಾರಿ, ಶಿರಸಿ
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭವಾಗುವ ಮುಂಚೆಯೇ ಹದೆಗಟ್ಟ ರಸ್ತೆಗೆ ಕಾಯಕಲ್ಪ ನೀಡಲು ಹೋರಾಟ ಮಾಡಿದ್ದೆವು. ಇದೀಗ ಕಳೆದ ನಾಲ್ಕು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಕೊರೋನಾ ವೇಳೆ ಎರಡು ವರ್ಷ ಹೆದ್ದಾರಿ ಬಂದ್ ಆಗಿತ್ತು. ಆಗಲೇ ಪೂರ್ಣಗೊಳ್ಳದ ಕಾಮಗಾರಿ ಏಳು ತಿಂಗಳಲ್ಲಿ ಪೂರ್ಣಗೊಳ್ಳಲು ಸಾಧ್ಯವೆ?
-ಪರಮಾನಂದ ಹೆಗಡೆ, ಜನಪರ ಹೋರಾಟಗಾರ