ಶಿರಸಿ: ಶಿರಸಿ ಹಾಗೂ ಬನವಾಸಿ ಭಾಗದಲ್ಲಿ ಬೈಕ್ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಮೂವರು ದರೋಡೆಕೋರರನ್ನು ಶಿರಸಿ (Sirsi News) ಗ್ರಾಮೀಣ ಠಾಣೆ ಹಾಗೂ ಬನವಾಸಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಜೀವ ಉಜ್ಜಪ್ಪ ಗೊಲ್ಲರ (೨೨), ಗಣೇಶ ಕುಮಾರ ಕೃಷ್ಣಪ್ಪ ಗೊಲ್ಲರ (೨೧) ಹಾಗೂ ಅಜ್ಜಪ್ಪ @ಅರ್ಜುನ ಮಂಜಪ್ಪ ಗೊಲ್ಲರ (೨೮) ಬಂಧಿತ ಆರೋಪಿಗಳು. ಬಂಧಿತರಿಂದ ೧೩,೫೦೦ ರೂ. ನಗದು, ಎರಡು ಬೈಕ್ ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಡಿ.೨೮ರಂದು ಬನವಾಸಿ ರಸ್ತೆಯಲ್ಲಿ, ಹೆಗಡೆಕಟ್ಟಾ ಕ್ರಾಸ್ ಸೇರಿ ಹಲವೆಡೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ ಹಣ ಹಾಗೂ ಮೊಬೈಲ್‌ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣೆ ಹಾಗೂ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿರಸಿ ವೃತ್ತ ಪೊಲೀಸರು, ಆರೋಪಿಗಳ ಬಂಧನಕ್ಕಾಗಿ ವಿಶೇಷ ಐದು ತಂಡವನ್ನು ರಚಿಸಿ ತನಿಖೆ ಪ್ರಾರಂಭಿಸಿದ್ದರು. ದರೋಡೆಗೆ ಒಳಗಾದವರ ಬಳಿ ಆರೋಪಿಗಳ ಚಿತ್ರಣ ಹಾಗೂ ಬಳಸಿದ ವಾಹನಗಳ ಬಗ್ಗೆ ಮಾಹಿತಿ ಪಡೆದುಕೊಂಡ ಖಾಕಿ ಪಡೆಯು ಆರೋಪಿಗಳ ಬಂಧನಕ್ಕಾಗಿ ತೀವ್ರ ಹುಡುಕಾಟ ಪ್ರಾರಂಭಿಸಿತ್ತು.
ಡಿ.೩೦ರಂದು ಮತ್ತೆ ದರೋಡೆಗೆ ಇಳಿದಿದ್ದ ಖದೀಮರನ್ನು ಚೇಸ್ ಮಾಡಿ ಮಳಗಿ ಬಳಿ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಇದನ್ನೂ ಓದಿ Rishabh Pant | ಸದ್ಯಕ್ಕಿಲ್ಲ ಪಂತ್ ಏರ್ಲಿಫ್ಟ್; ಡೆಹ್ರಾಡೂನ್ನಲ್ಲೇ ಚಿಕಿತ್ಸೆ ಮುಂದುವರಿಕೆ; ಡಿಡಿಸಿಎ ಸ್ಪಷ್ಟನೆ
ಬೈಕ್, ಮೊಬೈಲ್ ಸಾಲ ತೀರಿಸಲು ದರೋಡೆಗೆ ಇಳಿದ ಯುವಕರು!
ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಹಾಗೂ ಮೊಬೈಲ್‌ಗಳನ್ನು ಕಂತಿನ ಸಾಲದ ಮೇಲೆ ಖರೀದಿ ಮಾಡಿದ್ದ ಆರೋಪಿಗಳು ಸಾಲ ತೀರಿಸಲು ಏನಾದರೂ ಉಪಾಯ ಮಾಡಬೇಕು ಎಂದು ಯೋಚಿಸಿದ್ದು, ಅಂತಿಮವಾಗಿ ದರೋಡೆ ಮಾಡುವ ಯೋಚನೆ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಜನರಿಗೆ ರಿಲೀಫ್ ನೀಡಿದ ಪೋಲಿಸ್ ಇಲಾಖೆ
ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆ ಸಂಚರಿಸುವ ಬೈಕ್ ಸವಾರರಿಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಹಿಂದಿನಿಂದ ಮತ್ತೊಂದು ಬೈಕ್ ಬಂದರೂ ಭಯ ಬೀಳುವಷ್ಟರಮಟ್ಟಿಗೆ ಈ ಖದೀಮರು ಆತಂಕವನ್ನು ಹುಟ್ಟುಹಾಕಿದ್ದರು. ಪೊಲೀಸ್ ಇಲಾಖೆಯು ಆರೋಪಿಗಳನ್ನು ಬಂಧಿಸಿ ಜನರಲ್ಲಿದ್ದ ಭಯವನ್ನು ದೂರ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಗಣೇಶ ಕೆ ಎಲ್., ಸಿಪಿಐ ರಾಮಚಂದ್ರ ನಾಯಕ್ ಹಾಗೂ ಶಿರಸಿ ಉಪ ವಿಭಾಗದ ಎಲ್ಲ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹರ್ಷ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ | Urvashi Rautela | ಏರ್‌ಪೋರ್ಟ್‌ನಲ್ಲಿ ಜಾರಿದ ಡ್ರೆಸ್, ಮುಜುಗರಕ್ಕೀಡಾದ ನಟಿ ಊರ್ವಶಿ ರೌಟೇಲಾ!