Site icon Vistara News

Skeletons found : ಐವರ ಅಸ್ಥಿಪಂಜರ ಪತ್ತೆ ಕೇಸ್‌; ಡೇಟ್ ಇಲ್ಲದ ಡೆತ್‌ನೋಟ್ ಪತ್ತೆ!

5 skeletons found in chitradurga reddit

ಚಿತ್ರದುರ್ಗ: ಚಿತ್ರದುರ್ಗ ನಗರದ ಜೈಲ್ ರೋಡ್ ಸಮೀಪದ ಪಾಳು ಬಿದ್ದ ಮನೆಯಲ್ಲಿ ಸಿಕ್ಕಿರುವ ಐವರ ಅಸ್ಥಿಪಂಜರಗಳ ಪ್ರಕರಣವು (Skeletons found) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಾಳು ಮನೆಯಲ್ಲಿ ಡೇಟ್‌ ಇಲ್ಲದ ಡೆತ್‌ನೋಟ್‌ವೊಂದು ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಮೂಡಿಸಿದೆ.

ಡೆತ್‌ನೋಟ್‌ನಲ್ಲಿ ಇಬ್ಬರ ಹೆಸರು ಉಲ್ಲೇಖವಾಗಿದ್ದು, ಜಗನ್ನಾಥ್‌ ರೆಡ್ಡಿ ಕುಟುಂಬಕ್ಕೆ ಅವರೇ ಮಾನಸಿಕ ಕಿರುಕುಳ ನೀಡಿದ್ರಾ ಎಂಬ ಅನುಮಾನ ಮಾಡಿದೆ. ಅವರಿಗೂ ಈ ಐವರ ಸಾವಿಗೂ ಸಂಬಂಧ ಇದೆಯಾ? ಎಂಬ ಹಲವು ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇದರೊಟ್ಟಿಗೆ ಜಗನ್ನಾಥ್‌ ರೆಡ್ಡಿ ಸಂಬಂಧಿಕರು ಆ ಇಬ್ಬರು ಯಾರು ಎಂಬುದನ್ನು ತಿಳಿಸಿದ್ದಾರೆ. ಹೀಗಾಗಿ ಬಾರಿ ಸಂಚಲನ ಸೃಷ್ಟಿಸಿರುವ ಐವರ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಚುರುಕುಪಡಿಸಿದ್ದಾರೆ.

ಈಗಾಗಲೇ ಅಸ್ಥಿಪಂಜರವನ್ನು ಸುಡುವ ಬದಲು ಹೂಳುವಂತೆ ಪೊಲೀಸರು ಸೂಚನೆ ಕೊಟ್ಟ ನಂತರ ಜಗನ್ನಾಥ್ ರೆಡ್ಡಿ ಸಂಬಂಧಿಕರು ಐವರ ಅಂತ್ಯ ಸಂಸ್ಕಾರವನ್ನು ಸಂಪ್ರದಾಯದಂತೆ ಮಾಡಿ ಮುಗಿಸಿದರು. ಅಂತ್ಯ ಸಂಸ್ಕಾರದ ಬಳಿಕ ಪೊಲೀಸ್ ಮೂಲಗಳಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಈ ಪ್ರಕರಣದಲ್ಲಿ ಈವರೆಗೂ ಆತ್ಮಹತ್ಯೆ ಎಂದು ಹೇಳುತ್ತಿದ್ದ ಪೊಲೀಸರು, ಕೊಲೆ ಶಂಕೆಯು ವ್ಯಕ್ತವಾದ ಹಿನ್ನಲೆಯಲ್ಲಿ ಐವರ ಅಸ್ತಿ ಪಂಜರ ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಜತೆಗೆ ದಾಖಲಿಸಿಕೊಂಡ ದೂರಿನಲ್ಲಿ ಅನುಮಾನಾಸ್ಪದ ಸಾವು ಎಂದು ಉಲ್ಲೇಖಿಸಿದ್ದಾರೆ. ಇದರ ಬೆನ್ನಲ್ಲೇ ಸಿಕ್ಕ ಐದು ಅಸ್ತಿ ಪಂಜರಗಳ ಪೈಕಿ ಓರ್ವ ಮಹಿಳೆ ಹಾಗೂ ಓರ್ವ ಪುರುಷನ ಕಾಲಿನಲ್ಲಿ ಹಗ್ಗ ಪತ್ತೆಯಾಗಿದೆ.

ಎರಡು ಅಸ್ಥಿಪಂಜರಗಳ ಕಾಲಲ್ಲಿ ಹಗ್ಗ ಪತ್ತೆಯಾದ ಬೆನ್ನಲ್ಲೇ, ಸಾವಿಗೀಡಾದ ಜಗನ್ನಾಥ್ ರೆಡ್ಡಿ ಮನೆಯ ಗೋಡೆ ಮೇಲೆ ರಕ್ತ ಮಾದರಿಯಲ್ಲಿರುವ ಐವರ ಕೈ ಗುರುತುಗಳು ಪತ್ತೆ ಆಗಿವೆ. ಒಂದೇ ಜಾಗದಲ್ಲಿ ಐವರ ಕೈ ಗುರುತುಗಳು ರಕ್ತದ ಮಾದರಿಯಲ್ಲಿ ಇದ್ದು, ಯಾರಾದರೂ ಬಂದು ಕೊಲೆ ಮಾಡಿ ಹಗ್ಗದಲ್ಲಿ ಕಟ್ಟಿ ಹಾಕಿ ಹೋದರಾ ಎಂಬ ಸಂಶಯ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದ್ದು, ಪೊಲೀಸರಿಗೆ ಈ ಪ್ರಕರಣ ಕುತೂಹಲದ ಜತೆಗೆ ತಲೆ ನೋವಾಗಿಯೂ ಪರಿಣಮಿಸಿದೆ.

ಇದನ್ನೂ ಓದಿ: Skeletons found : ಪಾಳು ಬಿದ್ದ ಮನೆ ಗೋಡೆ ಮೇಲೆ ಪತ್ತೆಯಾದ್ವು 5 ಕೈ ಗುರುತುಗಳು! ಅಸ್ಥಿಪಂಜರ ಕೇಸ್‌ಗೆ ಟ್ವಿಸ್ಟ್‌

ಏನಿದು ಪ್ರಕರಣ?

ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯಿರುವ ದೊಡ್ಡ ಸಿದ್ದವ್ವನ ಹಳ್ಳಿಯ ನಿವಾಸಿ ಜಗನ್ನಾಥ್ ರೆಡ್ಡಿ ಎಂಬವರ ಇಡೀ ಕುಟುಂಬದವರ ಅಸ್ಥಿಪಂಜರ ಪತ್ತೆಯಾಗಿತ್ತು. ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿತ್ತು. ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮ, ಮಕ್ಕಳಾದ ತ್ರಿವೇಣಿ, ನರೇಂದ್ರ ರೆಡ್ಡಿ, ಕೃಷ್ಣ ರೆಡ್ಡಿ ಅವರ ಮೃತದೇಹದ ಅಸ್ಥಿಪಂಜರಗಳು ಪತ್ತೆ ಆಗಿತ್ತು.

ಜಗನ್ನಾಥ್ ರೆಡ್ಡಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಾರಿ ಮನನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಇನ್ನು ಮನೆಯಲ್ಲಿ ಸಿಕ್ಕ 2019ರ ಕ್ಯಾಲೆಂಡರ್ ಪ್ರಕಾರ ಜಗನ್ನಾಥ್ ರೆಡ್ಡಿ ಕುಟುಂಬದವರು ಮೃತಪಟ್ಟು 5 ವರ್ಷಗಳು ಆಗಿರಬಹುದು ಎಂದು ಹೇಳಲಾಗುತ್ತಿದೆ. ನಿಗೂಢ ಸಾವಿಗೆ ಕಾರಣ ಹುಡುಕಲು ಪೊಲೀಸರು ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version