Site icon Vistara News

Skeletons found : ಕಾಲು ಕಟ್ಟಿದ ಸ್ಥಿತಿಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆ! ಕೊಲೆನಾ? ಆತ್ಮಹತ್ಯೆನಾ

Skeletons found with hands and legs tied in chitradurga

ಚಿತ್ರದುರ್ಗ: ಚಿತ್ರದುರ್ಗ ನಗರದ ಜೈಲ್ ರೋಡ್ ಸಮೀಪದ ಪಾಳು ಬಿದ್ದ ಮನೆಯಲ್ಲಿ ಸಿಕ್ಕಿರುವ ಐವರ ಅಸ್ಥಿಪಂಜರಗಳ ಪ್ರಕರಣವು (Skeletons found) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದು ಕೊಲೆನಾ ಅಥವಾ ಆತ್ಮಹತ್ಯೆನಾ ಎಂಬುದನ್ನು ತಿಳಿಯುವುದೇ ಪೊಲೀಸರಿಗೆ ಹರಸಾಹಸವಾಗಿದೆ. ಈ ನಡುವೆ ಮರಣೋತ್ತರ ಪರೀಕ್ಷೆಯು ನಡೆದಿದ್ದು, ಇಬ್ಬರ ಕಾಲು ಕಟ್ಟಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ.

ನಿನ್ನೆ ಶನಿವಾರ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಅಸ್ಥಿಪಂಜರದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿದ್ದು, ನಂತರ ಮೃತರ ಸಂಬಂಧಿಕರು ಅಂತ್ಯಕ್ರಿಯೆ ಮುಗಿಸಿದ್ದಾರೆ. ಸದ್ಯ ಪೊಲೀಸರು ಪೋಸ್ಟ್ ಮಾರ್ಟಂ ಹಾಗೂ ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ.

ಮೃತರ ಮೂಳೆ, ಚರ್ಮ ಸಂಗ್ರಹಿಸಿರುವ ವೈದ್ಯಕೀಯ ಸಿಬ್ಬಂದಿ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಿದ್ದಾರೆ. ಸದ್ಯ ಅಸ್ಥಿಪಂಜರ ಪರೀಕ್ಷೆ ವೇಳೆ ಇಬ್ಬರ ಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಮಹಿಳೆ ಹಾಗೂ ಪುರುಷನ ಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಲು ಕಟ್ಟಿದ್ದು ಸತ್ಯವಾದರೆ ಕೊಲೆ ನಡೆದಿದೆಯೆ ಎಂಬ ಶಂಕೆ ವ್ಯಕ್ತವಾಗುತ್ತದೆ.

ಸದ್ಯ ಕಾಲು ಕಟ್ಟಲಾಗಿತ್ತೆಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಕಾಲು ಕಟ್ಟಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ತಿಳಿದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೋಸ್ಟ್ ಮಾರ್ಟಂ, ಎಫ್ ಎಸ್ ಎಲ್ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರಾ? ಕೊಲೆಯೋ? ಅಥವಾ ಅನಾರೋಗ್ಯದಿಂದ ಮೃತಪಟ್ಟಿದ್ದಾ ಎಂಬುದು ತಿಳಿಯಲಿದೆ.

ಇದನ್ನೂ ಓದಿ: Attempt To Murder: ಗರ್ಲ್‌ ಫ್ರೆಂಡ್‌ಗೆ ಫೋನ್‌ ಮಾಡಿ ಟಾರ್ಚರ್‌ ಕೊಟ್ಟ ಗೆಳೆಯನಿಗೆ ಮಚ್ಚಿನೇಟು!

ಮೃತ ದುರ್ದೈವಿಗಳು

ಏನಿದು ಪ್ರಕರಣ?

ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯಿರುವ ದೊಡ್ಡ ಸಿದ್ದವ್ವನ ಹಳ್ಳಿಯ ನಿವಾಸಿ ಜಗನ್ನಾಥ್ ರೆಡ್ಡಿ ಎಂಬವರ ಇಡೀ ಕುಟುಂಬದವರ ಅಸ್ಥಿಪಂಜರ ಪತ್ತೆಯಾಗಿತ್ತು. ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿತ್ತು. ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮ, ಮಕ್ಕಳಾದ ತ್ರಿವೇಣಿ, ನರೇಂದ್ರ ರೆಡ್ಡಿ, ಕೃಷ್ಣ ರೆಡ್ಡಿ ಅವರ ಮೃತದೇಹದ ಅಸ್ಥಿಪಂಜರಗಳು ಪತ್ತೆ ಆಗಿತ್ತು.

ಜಗನ್ನಾಥ್ ರೆಡ್ಡಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಾರಿ ಮನನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಇನ್ನು ಮನೆಯಲ್ಲಿ ಸಿಕ್ಕ 2019ರ ಕ್ಯಾಲೆಂಡರ್ ಪ್ರಕಾರ ಜಗನ್ನಾಥ್ ರೆಡ್ಡಿ ಕುಟುಂಬದವರು ಮೃತಪಟ್ಟು 5 ವರ್ಷಗಳು ಆಗಿರಬಹುದು ಎಂದು ಹೇಳಲಾಗುತ್ತಿದೆ. ಈ ನಿಗೂಢ ಸಾವಿಗೆ ಕಾರಣ ಹುಡುಕಲು ಪೊಲೀಸರು ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version