ಶಿವಾನಂದ ಹಿರೇಮಠ, ವಿಸ್ತಾರ ನ್ಯೂಸ್ ಗದಗ
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಲವಡೆ ರಾಸುಗಳಿಗೆ ಇದ್ದಕ್ಕಿದ್ದಂತೆ ಚರ್ಮ ಮತ್ತು ಗಂಟಲು ರೋಗ ಕಾಣಿಸಿಕೊಳ್ಳುತ್ತಿದ್ದು, ಏಳಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ. ಗಾಯದ ಮೇಲೆ ಬರೆ ಎಳೆದಂತೆ ಮಳೆಯಿಂದ ಬೆಳೆ ಹಾನಿಗೊಳಗಾದ ರೈತ ಈಗ ರಾಸುಗಳಲ್ಲಿ ಹರಡುತ್ತಿರುವ ರೋಗದಿಂದ ಮತ್ತಷ್ಟು ಕುಗ್ಗಿದ್ದಾನೆ. ಆಗಸ್ಟ್‌ನಲ್ಲಿ ಲಕ್ಷ್ಮೇಶ್ವರ ಪಟ್ಟಣದ ಎತ್ತುಗಳಿಗೆ ಕಾಣಿಸಿಕೊಂಡಿದ್ದ ರೋಗ ಈಗ ತಾಲೂಕಿನಾದ್ಯಂತ ಹಬ್ಬಿದೆ. ದಿನೇದಿನೆ ಪ್ರಕರಣಗಳು ಹೆಚ್ಚುತ್ತಿವೆ.
ರೋಗದ ಲಕ್ಷಣಗಳು
ರೋಗ ತಗುಲಿದ ಆರಂಭದಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ವಾರದ ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದಲ್ಲಿ ತುರಿಕೆ ಆರಂಭವಾಗುತ್ತದೆ. ರೋಗ ಕಾಣಿಸಿಕೊಂಡ ಹಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ. ಅತಿಯಾದ ಜ್ವರ, ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೈಮೇಲೆ ದೊಡ್ಡ ಗಂಟುಗಳ ಬರುವುದು ಈ ರೋಗದ ಪ್ರಮುಖ ಲಕ್ಷಣಗಳು. ಕೆಲವು ರಾಸುಗಳು ಮೇವು ತಿನ್ನದೆ ಕ್ರಮೇಣ ಬಡಕಲಾಗುತ್ತವೆ. ತಳಿ ಸಂವರ್ಧನೆ ಹೋರಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು. ರೋಗಕ್ಕೆ ಶೀಘ್ರವೇ ಚಿಕಿತ್ಸೆ ಕೊಡಿಸದಿದ್ದರೆ ಗಂಟುಗಳು ಕೊಳೆತು, ನೊಣ ಮತ್ತು ಉಣ್ಣೆ ಕಡಿತದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. ರೋಗದ ಸ್ಥಿತಿ ಗಂಭೀರವಾದರೆ ರಾಸುಗಳು ಸಾವನ್ನಪ್ಪುತ್ತವೆ.
ವೈದ್ಯರಿಲ್ಲ, ಏನ್ ಮಾಡೋದು?
ರಾಸುಗಳಿಗೆ ಚಿಕಿತ್ಸೆ ಕೊಡಿಸಲೆಂದು ಲಕ್ಷ್ಮೇಶ್ವರ ಪಟ್ಟಣದ ಪಶು ಆಸ್ಪತ್ರೆಗೆ ರೈತರು ಧಾವಿಸಿದರೆ ಆಸ್ಪತ್ರೆಯಲ್ಲಿ ವೈದ್ಯರೇ ಇರುವದಿಲ್ಲ. ಸರಿಯಾಗಿ ಸ್ಪಂದನೆ ನೀಡುವುದಿಲ್ಲ. ಔಷಧ ಮತ್ತು ಲಸಿಕೆಯನ್ನು ನೀಡದೆ ಖಾಸಗಿ ಔಷಧಾಲಯದಲ್ಲಿ ಖರೀದಿ ಮಾಡಲು ಅಲ್ಲಿನ ಸಿಬ್ಬಂದಿಗಳು ಚೀಟಿ ಬರೆದು ಕೊಡುತ್ತಾರೆ ಎಂಬುದು ರೈತರ ಆರೋಪ.
ಅಡ್ಡಗಟ್ಟಿ ಪ್ರತಿಭಟನೆ
ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮದಲ್ಲಿ ದನಕರುಗಳಿಗೆ ಚರ್ಮ, ಗಂಟು ರೋಗ ತಗುಲಿ ಒಂದೇ ವಾರದಲ್ಲಿ ಎತ್ತು, ಎಮ್ಮೆ ಹಾಗೂ ಕರು ಸೇರಿ ಒಟ್ಟು 10 ಜಾನುವಾರುಗಳು ಹಾಗೂ 13 ಕುರಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಇರುವ ಕಾರಣ ಸುಗ್ನಳ್ಳಿ ಗ್ರಾಮದ ಗ್ರಾಮಸ್ಥರು ಬೆಳ್ಳಟ್ಟಿ – ಮುಂಡರಗಿ ಮಾರ್ಗ ತಡೆದು ರಸ್ತೆಯ ಮೇಲೆ ಸಾವನ್ನಪ್ಪಿದ ಎತ್ತು, ಕುರಿಗಳನ್ನು ಇಟ್ಟು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಕಲ್ಲಗೌಡ ಪಾಟೀಲ್ ಭೇಟಿ ನೀಡಿ ಮನವರಿಕೆ ಮಾಡಿದರೂ ಪ್ರತಿಭಟನೆ ಹಿಂಪಡೆಯದೆ ಎಚ್ಚರಿಸಿದ ಘಟನೆ ಜರುಗಿದೆ.
ʻʻನಮ್ಮಲ್ಲಿ ಇರುವ ಲಸಿಕೆ, ಔಷಧ ನೀಡುತ್ತೇವೆ. ಈಗ ಕಾಣಿಸಿಕೊಳ್ಳುತ್ತಿರುವ ರೋಗ ಸೊಳ್ಳೆ, ನೋಣಗಳಿಂದ ಬರುವ ರೋಗವಾಗಿದೆ. ರೋಗಪೀಡಿತ ರಾಸುಗಳಿಗೆ ಶೀಘ್ರವೇ ಲಸಿಕೆ ಹಾಕಿಸಬೇಕು. ಸೂಕ್ತ ಲಸಿಕೆ ನೀಡುವ ಕುರಿತು ಮೇಲಾಧಿಕಾರಿ ಜತೆ ಚರ್ಚಿಸುತ್ತೇನೆʼʼ ಎಂದು ಲಕ್ಷ್ಮೇಶ್ವರದ ಪಶುವೈದ್ಯಾಧಿಕಾರಿಗಳಾದ ಡಾ. ನೀಲಕಂಠ ಹವಳದ ಹೇಳಿದ್ದಾರೆ.