ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಈ ಹಿಂದೆ ಬೆಳಕಿಗೆ ಬಂದಿದ್ದ ವಿಚಿತ್ರ ಚುಕ್ಕಿ ಚರ್ಮ ಕಾಯಿಲೆ (Skin disease) ಮತ್ತೆ ಪ್ರತ್ಯಕ್ಷವಾಗಿದೆ.
ಚುಕ್ಕಿ ಚರ್ಮರೋಗ ಎಂದು ಕರೆಯಲಾಗುವ ಈ ಕಾಯಿಲೆ ಇದುವರೆಗೂ ವೈದ್ಯಲೋಕಕ್ಕೆ ಸವಾಲಾಗಿದೆ. ಮಾರಣಾಂತಿಕ ಕಾಯಿಲೆಯಾಗಿರುವ ಇದು ಅಂಟಿಕೊಂಡರೆ ಸಾವು ಖಚಿತ ಎಂದು ಸ್ಥಳೀಯರು ಆತಂಕಪಡುತ್ತಿದ್ದಾರೆ. ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಈ ವಿಚಿತ್ರ ಕಾಯಿಲೆ ಬೆಳಕಿಗೆ ಬಂದಿದೆ.
2015ರಲ್ಲಿ ಇದೇ ಭಾಗದಲ್ಲಿ ಕಾಯಿಲೆ ಕಾಣಿಸಿಕೊಂಡಿತ್ತು. ಇದೊಂದು ಬಗೆಯ Autoimmune disease ಎಂದು ವೈದ್ಯಲೋಕ ಕರೆದಿದೆ. ಈ ಕಾಯಿಲೆ ಅಂಟಿದ ಮಕ್ಕಳು 18 ವರ್ಷದ ವರೆಗೆ ಬದುಕುವುದೇ ಹೆಚ್ಚು ಎಂಬಂತಾಗಿದೆ. ಚುಕ್ಕಿ ಚರ್ಮ ರೋಗದಿಂದ ಹಲವು ಮಕ್ಕಳು ಸಾವನ್ನಪ್ಪಿದ್ದಾರೆ. ಔಷಧಿಯೇ ಇಲ್ಲದ ಕಾಯಿಲೆಗೆ ಕಂದಮ್ಮಗಳು ಹೈರಾಣಾಗಿವೆ. ಕೆಲವು ಔಷಧಗಳ ಮೂಲಕ ಈ ಕಾಯಿಲೆಯ ಕೆಲವು ಲಕ್ಷಣಗಳನ್ನು ಗುಣಪಡಿಸಬಹುದಾಗಿದೆ; ಆದರೆ ಈ ಕಾಯಿಲೆ ವಾಸಿಯಾಗುವುದಿಲ್ಲ ಎಂದು ಹೇಳಲಾಗಿದೆ.
ಈ ಕಾಯಿಲೆಯಲ್ಲಿ ಮೊದಲು ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತವೆ. ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಣ್ಣು ಊದಿಕೊಳ್ಳುತ್ತದೆ. ಆನುವಂಶಿಕವಾಗಿ ಈ ವಿಚಿತ್ರ ಕಾಯಿಲೆ ಕೆಲವು ಕುಟುಂಬಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಹನೂರು ಸುತ್ತಲಿನ ಎಂಟು ಮಕ್ಕಳಲ್ಲಿ ರೋಗ ಲಕ್ಷಣ ಪತ್ತೆಯಾಗಿದ್ದು, ಬಡ ಕುಟುಂಬಗಳಿಗೆ ಶಾಪವಾಗಿ ಪರಿಣಮಿಸಿದೆ. ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೇಲಧಿಕಾರಿಗಳಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ.