ಬೆಂಗಳೂರು: ಹೂಡಿಕೆ, ಹಣಕಾಸು ನಿರ್ವಹಣೆ ಸೇರಿ ಹಲವು ವಿಷಯಗಳ ಕುರಿತು ಮಾಹಿತಿ ನೀಡುವ ಫ್ರೀಡಂ ಆ್ಯಪ್ (ffreedom App) ಬಗ್ಗೆ ಅಪಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಖಾಸಗಿ ಯುಟ್ಯೂಬ್ ಚಾನೆಲ್ ವಿರುದ್ಧ ಫ್ರೀಡಂ ಆ್ಯಪ್‌ನಿಂದ ೧೦ ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಫೆಬ್ರವರಿ ೩ರಂದು ಯುಟ್ಯೂಬ್ ಚಾನೆಲ್ ಫೇಸ್‌ಬುಕ್ ಪೇಜ್‌ನಲ್ಲಿ ಫ್ರೀಡಂ ಆ್ಯಪ್ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಫ್ರೀಡಂ ಆ್ಯಪ್ ಬಗ್ಗೆ ತೇಜೋವಧೆ ಮಾಡಿ, ಸರಣಿ 8 ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಹಾಗಾಗಿ, ಆಧಾರರಹಿತ, ಸುಳ್ಳು ಪೋಸ್ಟ್‌ಗಳನ್ನು ತೆಗೆಯಬೇಕು ಎಂದು ಈಗಾಗಲೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸೂಚಿಸಿದೆ. ವಿಡಿಯೊಗಳನ್ನು ಜಾಲತಾಣಗಳಿಂದ ಡಿಲೀಟ್ ಮಾಡುವಂತೆಯೂ ಆದೇಶಿದೆ. ಸುಳ್ಳು ವರದಿ ಹಿನ್ನೆಲೆಯಲ್ಲಿ ಫ್ರೀಡಂ ಆ್ಯಪ್‌ನಿಂದ ೧೦ ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನೂ ಹೂಡಲಾಗಿದೆ.
ಫ್ರೀಡಂ ಆ್ಯಪ್‌ನಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ. ಭಾರತದಾದ್ಯಂತ 1 ಕೋಟಿ 6 ಲಕ್ಷ ಜನ ಫ್ರೀಡಂ ಆ್ಯಪ್ ಬಳಸುತ್ತಿದ್ದಾರೆ. ಕೃಷಿ ಮತ್ತು ಬಿಸಿನೆಸ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 1,೨೦೦ ಸಾಧಕ ಮಾರ್ಗದರ್ಶಕರಿದ್ದಾರೆ. ಪ್ರತಿ ದಿನ 30 ರಿಂದ 40 ಸಾವಿರ ಜನ ಫ್ರೀಡಂ ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ 960 ಕೋರ್ಸ್‌ಗಳಿವೆ. ಇಷ್ಟೆಲ್ಲ ಕಾರ್ಯ ಮಾಡುತ್ತಿರುವ ಫ್ರೀಡಂ ಆ್ಯಪ್ ಮೇಲೆ ಆಧಾರ ರಹಿತ ಆರೋಪ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ಫ್ರೀಡಂ ಆ್ಯಪ್ ಸಂಸ್ಥಾಪಕ, ಸಿಇಒ ಸಿ.ಎಸ್.ಸುಧೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವರ್ಕ್ ಫ್ರಂ ಹೋಮ್ ಆಫ್ಷನ್ ನೀಡಿ, ಮನೆಯಲ್ಲಿ ಉಳಿದ ಡಿಗ್ರಿಯೇ ಇಲ್ಲದವರಿಗೂ 15 ಸಾವಿರ ರೂ. ಸಂಬಳ ಕೊಟ್ಟು ಕೆಲಸ ಕೊಟ್ಟಿದೆ. ಕಂಪನಿಗೆ ಜಾಯಿನ್ ಆಗುತ್ತಿರುವವರಿಗೆ ಸಂದರ್ಶನ ಮುಗಿಯುತ್ತಿದ್ದಂತೆಯೇ ಸೆಲೆಕ್ಷನ್ ಲೆಟರ್, ವರ್ಕ್ ಫ್ರಂ ಹೋಮ್ ಹ್ಯಾಂಡ್ ಬುಕ್ ಮತ್ತು ಆಫರ್ ಲೆಟರ್ ನೀಡಿ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತಿದೆ. ಅದೇ ರೀತಿ ಅವರ ಸಾಮರ್ಥ್ಯ ಪರೀಕ್ಷಿಸಲು ಮತ್ತು ಸೇಲ್ಸ್ ಜಾಬ್‌ನಲ್ಲಿ ಆಸಕ್ತಿ ಪರೀಕ್ಷಿಸಲು 3 ಸೇಲ್ ಮಾಡುವುದು ಟ್ರೈನಿಂಗ್ ಮತ್ತು ಸರ್ಟಿಫಿಕೇಷನ್ ಪ್ರೊಸೆಸ್‌ನಲ್ಲಿ ಒಳಗೊಂಡಿದೆ. ಅದನ್ನು ಆಫರ್ ಲೆಟರ್ ಮತ್ತು ವರ್ಕ್ ಫ್ರಂ ಹ್ಯಾಂಡ್ ಬುಕ್‌ನಲ್ಲಿ ನೀಟಾಗಿ ಹೇಳಲಾಗಿದೆ. ಆದರೂ ಕೆಲವರು ಸ್ವಂತ ದುಡ್ಡನ್ನೇ ಹಾಕಿ ಸೇಲ್ ಮಾಡಿ ಕಂಪನಿ ನಿಯಮದಂತೆ ಟ್ರೈನಿಂಗ್ ಮತ್ತು ಸರ್ಟಿಫಿಕೇಷನ್ ಪ್ರೊಸೆಸ್‌ನಲ್ಲಿ ನಿಯಮಗಳನ್ನು ಉಲ್ಲಂಘಿಸಿ ದ್ರೋಹ ಬಗೆದಿದ್ದಾರೆ. ಇಂಥಹವರ ಅರ್ಥಹೀನ ಹೇಳಿಕೆ ಇಟ್ಟುಕೊಂಡು ಯುಟ್ಯೂಬ್ ಚಾನೆಲ್ ಫ್ರೀಡಂ ಆ್ಯಪ್ ಗೌರವಕ್ಕೆ ಚ್ಯುತಿ ತರುವ ಪ್ರಯತ್ನ ಪಟ್ಟಿರುವುದು ಹೇಯ ಹಾಗೂ ಅರ್ಥ ಹೀನ ಕೃತ್ಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫ್ರೀಡಂ ಆ್ಯಪ್ ಸಿಬ್ಬಂದಿ ಸ್ನೇಹಿ ಸಂಸ್ಥೆ
“ಶರವೇಗದಲ್ಲಿ ಬೆಳೆದ ಫ್ರೀಡಂ ಆ್ಯಪ್‌ನ ಬೆಳವಣಿಗೆ ಕೇವಲ ಒಂದು ದಿನದ್ದಲ್ಲ. ವೃತ್ತಿ ಪರ ಉದ್ಯೋಗಿಗಳ ತಂಡದೊಂದಿಗೆ ಕಳೆದ 3 ವರ್ಷಗಳಲ್ಲಿ ದೇಶಾದ್ಯಂತ 16 ಲಕ್ಷ ಕಿಲೋಮೀಟರ್ ಟ್ರಾವೆಲ್ ಮಾಡಿ 960 ಕೋರ್ಸ್‌ಗಳನ್ನು ವಿನ್ಯಾಸ ಮಾಡಿ ಪರಿಚಯಿಸಿದೆ. ಆಯಾ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದ ಸಾಧಕರ ಅನುಮತಿ ಮೇರೆಗೆ 1,200ಕ್ಕೂ ಹೆಚ್ಚು ಸಾಧಕರ ಮನೆಯಂಗಳಕ್ಕೆ ಹೋಗಿ 2ರಿಂದ3 ದಿನಗಳ ಕಾಲ ಶೂಟಿಂಗ್ ಮಾಡಿ ಕೋರ್ಸ್ ಅನಾವರಣ ಮಾಡಿದೆ. ಈ ಕೋರ್ಸ್‌ಗಳ ಮಾರ್ಗದರ್ಶನದಡಿಯಲ್ಲಿ ಬಹುತೇಕರು ಸ್ವ ಉದ್ಯೋಗದ ಹಾದಿ ಕಂಡುಕೊಂಡು ಸ್ವಾವಲಂಬಿಗಳಾಗಿದ್ದಾರೆ. ಹೀಗಿರುವಾಗ ಮೆಂಟರ್ ಅನುಮತಿ ಇಲ್ಲದೆ ಕೋರ್ಸ್ ಚಿತ್ರೀಕರಿಸಲಾಗಿದೆ ಎನ್ನುವ ಮಾತು ನೈತಿಕತೆಗೆ ದೂರವಿದೆ” ಎಂದು ಸುಧೀರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Vistara news launch | ಫ್ರೀಡಂ ಆ್ಯಪ್ ಸಂಸ್ಥಾಪಕ ಸಿ.ಎಸ್. ಸುಧೀರ್‌ಗೆ ಕಾಯಕಯೋಗಿ ಪುರಸ್ಕಾರ
ಯಾವ ಕೋರ್ಸ್‌ಗೂ ಪ್ರತ್ಯೇಕ ಶುಲ್ಕವಿಲ್ಲ
“ಇಲ್ಲಿ ಯಾವ ಕೋರ್ಸ್‌ಗೂ ಪ್ರತ್ಯೇಕ ಚಾರ್ಜ್ ಇಲ್ಲ. 1 ಚಂದಾದಾರಿಕೆಯಲ್ಲಿಯೇ ಆ್ಯಪ್‌ನಲ್ಲಿರುವ 960 ಕೋರ್ಸ್‌ಗಳನ್ನು 6 ಭಾಷೆಗಳಲ್ಲಿ ವೀಕ್ಷಿಸಬಹುದು. ಹೀಗಿರುವಾಗ ಆ್ಯಪ್‌ನಲ್ಲೇನಿದೆ ಎನ್ನುವ ಕನಿಷ್ಠ ಜ್ಞಾನವಿಲ್ಲದೆ ಪೋಸ್ಟ್ ಮಾಡಿರುವುದು ಖಡಾಖಂಡಿತವಾಗಿಯೂ ಕ್ಷಮೆಗೂ ಅರ್ಹವಾದುದಲ್ಲ. ಅಪ್ರಬುದ್ಧ ವ್ಯಕ್ತಿಗಳ ನಡವಳಿಕೆಯಿಂದ ತೊಂದರೆ ಆಗಿದ್ದು, ಗಮನಕ್ಕೆ ಬಂದಲ್ಲಿ ಅಂಥಹವರನ್ನ ಫ್ರೀಡಂ ಆ್ಯಪ್ ನೇರ ಟರ್ಮಿನೇಟ್ ಮಾಡುತ್ತದೆ. ಆ ಮಟ್ಟಿಗಿನ ಬದ್ಧತೆ ಫ್ರೀಡಂ ಆ್ಯಪ್‌ಗಿದೆ. ಯಾವುದೇ ತರಹದ ದೂರುಗಳು ಇಲ್ಲದ ಸಂದರ್ಭದಲ್ಲಿ ಕಂಪನಿಗೆ ಮಸಿ ಬಳಿಯುವುದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ.
ಅವಿವೇಕಿ ವ್ಯಕ್ತಿಗಳಿಂದ ಆಗಿರುವ ಸಮಸ್ಯೆಗೆ ಇಡೀ ಕಂಪನಿಯನ್ನೇ ದೂರುವುದು ಸಹಿಸಲಸಾಧ್ಯವಾದ ಅಪರಾಧ. ಈ ಬಗ್ಗೆ ಕಾನೂನಿನ ಮೂಲಕವೇ ಉತ್ತರಿಸಲಾಗಿದೆ. ಕಂಪನಿ ವಿರುದ್ಧ ಮಾಡಲಾದ ವಿವೇಚನಾ ರಹಿತ, ಅರ್ಥಹೀನ, ದಾಖಲೆರಹಿತ ಸುಳ್ಳು ಆಪಾದನೆಗಳಿಗೆ ಹಾಗೂ ಕಂಪೆನಿಗೆ ಇಲ್ಲಸಲ್ಲದ ಆರೋಪ ಮಾಡಿರುವವರ ವಿರುದ್ಧ ಈಗಾಗಲೆ 10 ಕೋಟಿ ರೂ. ಪರಿಹಾರ ಕೋರಿ ದೂರು ದಾಖಲಿಸಿದ್ದು, ಇಂಥಹ ಆರೋಪಗಳ ವಿರುದ್ಧ ಕಾನೂನು ಮುಖಾಂತರವಾಗಿ , ಕಾನೂನು ಬದ್ಧವಾಗಿ ಕ್ರಮ ಕೈಗೊಂಡಿದೆ. ಫ್ರೀಡಂ ಆ್ಯಪ್ ಬಗ್ಗೆ ಹಬ್ಬಿಸಿರುವ ಸುಳ್ಳು ವದಂತಿಗಳಿಗೆ, ಬಳಕೆದಾರರು ಮಹತ್ವ ನೀಡಬಾರದು” ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ: https://youtu.be/4egqE9wz2Uc , https://youtu.be/rhAQRYEWWdY ಸಂಪರ್ಕಿಸಿ.