Site icon Vistara News

SM Krishna | ಬಿಜೆಪಿ ಹಿರಿಯ ಮುಖಂಡ, ಮಾಜಿ ಸಿಎಂ ಎಸ್‌ ಎಂ ಕೃಷ್ಣ ರಾಜಕೀಯ ಜೀವನಕ್ಕೆ ಗುಡ್‌ಬೈ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಬಹುತೇಕ ಎಲ್ಲ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ಮಾಜಿ ಕಾಂಗ್ರೆಸಿಗ, ಹಾಲಿ ಬಿಜೆಪಿ ಮುಖಂಡ ಎಸ್‌.ಎಂ. ಕೃಷ್ಣ (SM Krishna) ಅವರು ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ.

ಹೊಸ ವರ್ಷದ ಶುಭಾಶಯ ಸಂದೇಶವನ್ನು ನೀಡುವ ಜತೆಗೆ ತಮ್ಮ ರಾಜಕೀಯ ನಿವೃತ್ತಿಯ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ನನಗೀಗ ೯೦ ವರ್ಷ. ವಯಸ್ಸಿನ ಬಗ್ಗೆ ನಮಗೆ ಅರಿವು ಇರಬೇಕು. 90ರಲ್ಲಿ‌ 50 ವರ್ಷದ ರೀತಿ ನಟನೆ ಮಾಡಲು ಆಗಲ್ಲ, ಅದಕ್ಕಾಗಿ ಕ್ರಮೇಣವಾಗಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಎಸ್‌ಎಂ ಕೃಷ್ಣ ಹೇಳಿದರು.

ಮೇಲೆ ಬಿದ್ದು ಹೋಗಲ್ಲ, ಕೇಳಿದರೆ ಸಲಹೆ ಎಂದ ಎಸ್ಸೆಂಕೆ
ಹಾಗಂತ ಸಂಪೂರ್ಣವಾಗಿ ಸನ್ಯಾಸಿಯಾಗುತ್ತೇನೆ ಎಂದಲ್ಲ, ಪಕ್ಷ ಇಲ್ಲವೇ ನಾಯಕರು ಸಲಹೆ ಕೇಳಿದರೆ ಕೊಡುವುದಾಗಿಯೂ ಅವರು ತಿಳಿಸಿದ್ದಾರೆ. ʻʻಮೀಸಲಾತಿ ವಿಚಾರವಾಗಿ ಕೇಳಿದ್ರೆ ಸಲಹೆ ಕೊಡ್ತೇನೆ. ನಾನು ಮೇಲೆ ಬಿದ್ದು ಸಲಹೆ ಕೊಡುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಬಂದು ಸಲಹೆ ಕೇಳಿದ್ರೆ ಕೊಡ್ತೇನೆʼʼ ಎಂದರು ಎಸ್ಸೆಂ ಕೃಷ್ಣ.

ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಆರೋಪದ ವಿಚಾರವಾಗಿ ಪ್ರಶ್ನಿಸಿದಾಗ ʻʻನಾನೇ ರಿಟೈಡ್ ಆಗುತ್ತಿರುವಾಗ ಕಡೆಗಣಿಸುವ ಪ್ರಶ್ನೆ ಬರುವುದಿಲ್ಲ. ನಾನೇ ನಿವೃತ್ತಿ ಪಡೆಯುತ್ತಿದ್ದೇನೆʼʼ ಎಂದರು. ರಾಜಕೀಯದಲ್ಲಿ ಯಾರೂ ಪೆನ್ಶನ್‌ ಕೊಡುವುದಿಲ್ಲ. ಹೀಗಾಗಿ ನನ್ನ ನಿವೃತ್ತಿ ನಿರ್ಧಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ ಎಂದರು ಮಾಜಿ ಸಿಎಂ.

ಮೈಸೂರು ರಸ್ತೆಗೆ ಹೆಸರಿಡೋ ವಿಚಾರ
ಮೈಸೂರು-ಬೆಂಗಳೂರು ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡಬೇಕು ಎಂದು ಎಸ್‌ ಎಂ ಕೃಷ್ಣ ಅವರು ಇತ್ತೀಚೆಗೆ ಸಲಹೆ ಮಾಡಿದ್ದರು. ಅದರ ಬಗ್ಗೆ ಪ್ರತಿಕ್ರಿಯಿಸಿ, ಒಡೆಯರ್‌ ಅವರು ದೇಶ ಕಂಡ ಮಹಾನ್ ವ್ಯಕ್ತಿ. ಅಭಿವೃದ್ಧಿ ವಿಚಾರವಾಗಿ ಅನೇಕ ಕೆಲಸ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ದಶ ಪಥ ರಸ್ತೆಗೆ ಇಡುವಂತೆ ನಿತಿನ್ ಗಡ್ಕರಿ ಹಾಗೂ ಸಿಎಂ‌ಗೆ ಮನವಿ ಮಾಡಿದ್ದೇನೆ. ಅವರು ಏನು ಮಾಡ್ತಾರೆ ಅಂತ ನೋಡಬೇಕು ಎಂದರು.

ʻʻನಾನೇ ಸ್ವಯಂ ಪ್ರೇರಿತವಾಗಿ ತೆರೆಮರೆಗೆ ಸರಿಯುತ್ತಿದ್ದೇನೆʼʼ ಎಂದು ಅವರು ಮತ್ತೆ ಮತ್ತೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನಿಂದ ಬಿಜೆಪಿಯತ್ತ
ರಾಜ್ಯ ಕಂಡ ಅತ್ಯಂತ ಪ್ರಭಾವಿ ಮತ್ತು ದೂರಗಾಮಿ ದೃಷ್ಟಿಯುಳ್ಳ ಮುಖ್ಯಮಂತ್ರಿ ಎಂದೇ ಹೆಸರಾಗಿದ್ದ ಎಸ್‌ಎಂ ಕೃಷ್ಣ ಕಾಂಗ್ರೆಸ್‌ ಪಾಲಿಗೆ ಪ್ರಧಾನ ಸೇನಾನಿಯೇ ಆಗಿದ್ದರು. ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಮತ್ತಿತರ ಹಲವು ಹುದ್ದೆಗಳನ್ನು ನಿಭಾಯಿಸಿದ ಅವರಿಗೆ ಕೇಂದ್ರದ ಮನಮೋಹನ್‌ ಸಿಂಗ್‌ ಸರಕಾರದಲ್ಲಿ ಸಚಿವಗಿರಿ ಇತ್ತು. ಬಳಿಕ ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿಯೂ ನೇಮಿಸಲಾಗಿತ್ತು.

ಆದರೆ, ಅವರು ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ವರ್ಚಸ್ಸನ್ನು ಎತ್ತರಿಸಲು ಪಕ್ಷ ಅವರನ್ನು ಸೇರಿಸಿಕೊಂಡಿತ್ತು. ಆದರೆ, ಅದು ಅಷ್ಟೊಂದು ದೊಡ್ಡ ಮಟ್ಟದ ಪ್ರಭಾವ ಬೀರದೆ ಇದ್ದುದರಿಂದ ಅವರಿಗೆ ಹೆಚ್ಚಿನ ಸ್ಥಾನಮಾನಗಳು ಸಿಕ್ಕಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯಲ್ಲಿ ಅವರಿಗೆ ಹೆಚ್ಚಿನ ಗೌರವಗಳೇನೂ ಸಿಕ್ಕಿರಲಿಲ್ಲ. ಇವೆಲ್ಲವುಗಳ ಪರಿಣಾಮ ಮತ್ತು ವಯಸ್ಸಿನ ಕಾರಣಕ್ಕೆ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗಿದೆ.

Exit mobile version