ಬೆಂಗಳೂರು: ವಿಮಾನದಲ್ಲಿ ಮದ್ಯಪಾನಕ್ಕಾದರೂ ಅವಕಾಶವಿದೆ, ಧೂಮಪಾನಕ್ಕೆ ಸುತಾರಾಂ ಅವಕಾಶವಿಲ್ಲ (Smoking in Flight). ಅದರಲ್ಲೂ ಮುಖ್ಯವಾಗಿ ದೇಶೀಯ ವಿಮಾನಗಳಲ್ಲಿ ಇದು ಕಠಿಣ ಕಾನೂನು. ಆದರೆ, ಇದನ್ನು ಮೀರಿ ಮಹಿಳೆಯೊಬ್ಬರು ವಿಮಾನದ ಟಾಯ್ಲೆಟ್‌ನಲ್ಲಿ ಸಿಗರೇಟು ಸೇದಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಅದೂ ಕೋಲ್ಕೊತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನ ಎನ್ನುವುದು ವಿಶೇಷ.
ಕೋಲ್ಕೊತಾ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಕೊನೆಯ ವಿಮಾನವಾಗಿರುವ 6ಇ-716 ಇಂಡಿಗೋ ವಿಮಾನದಲ್ಲಿ ಕಳೆದ ಭಾನುವಾರ ಮಧ್ಯ ರಾತ್ರಿ ಈ ಘಟನೆ ನಡೆದಿದೆ. ಕೋಲ್ಕೊತಾದಿಂದ ರಾತ್ರಿ 9.50ಕ್ಕೆ ಹೊರಟಿದ್ದ ವಿಮಾನ ರಾತ್ರಿ 1 ಗಂಟೆಯ ಹೊತ್ತಿಗೆ ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು.
ಪಶ್ಚಿಮ ಬಂಗಾಳದ ಸೀಲ್ಡಾ ಜಿಲ್ಲೆಗೆ ಸೇರಿದ 24 ವರ್ಷದ ಯುವತಿ ಪ್ರಿಯಾಂಕ ಚಕ್ರವರ್ತಿ ಈ ವಿಮಾನದಲ್ಲಿ ಹತ್ತಿದ್ದಳು. ವಿಮಾನ ಪ್ರಯಾಣ ಶುರುವಾಗಿ ಇನ್ನೇನು ಒಂದು ಗಂಟೆಯೊಳಗೆ ಬೆಂಗಳೂರು ತಲುಪುತ್ತಿದೆ ಎನ್ನುವಾಗ ಟಾಯ್ಲೆಟ್‌ಗೆ ಹೋದ ಪ್ರಿಯಾಂಕಾ ತುಂಬ ಹೊತ್ತು ಹೊರಗೆ ಬಂದಿರಲಿಲ್ಲ. ಹೀಗಾಗಿ ಆಕೆ ಒಳಗೆ ಹೋದವಳು ಸಿಗರೇಟ್ ಸೇದಿದ್ದಾಳೆ ಎಂಬ ಸಂಶಯ ಸಿಬ್ಬಂದಿಗೆ ಬಂದಿತ್ತು. ಆಕೆ ಹೊರಗೆ ಬಂದ ಬಳಿಕ ಒಳಗೆ ಹೋಗಿ ನೋಡಿದರೆ ಡಸ್ಟ್‌ಬಿನ್‌ನಲ್ಲಿ ಸಿಗರೇಟಿನ ತುಂಡು ಕಂಡುಬಂದಿತ್ತು. ಸಿಬ್ಬಂದಿ ಕೂಡಲೇ ಅದಕ್ಕೆ ನೀರು ಹಾಕಿ ನಂದಿಸಿದರು.
ಈ ನಡುವೆ ವಿಮಾನದ ಕ್ಯಾಪ್ಟನ್ ಪ್ರಿಯಾಂಕಾಳನ್ನು ನಿಯಮಮೀರಿದ ಪ್ರಯಾಣಿಕಳು ಎಂದು ಘೋಷಿಸಿದರು. ಬೆಂಗಳೂರಿನಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ ಆಕೆಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು ಆಕೆಯ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆಯ ಮೇಲೆ ತನ್ನ ಮತ್ತು ಇತರ ಪ್ರಾಣದ ಜತೆ ಚೆಲ್ಲಾಟವಾಡಿದ ಆರೋಪವನ್ನು ಹೊರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ : ಅಮೆರಿಕದಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!