Site icon Vistara News

Smoking Zone | ಹೋಟೆಲ್​​​, ಬಾರ್‌ & ರೆಸ್ಟೋರೆಂಟ್‌ನಲ್ಲಿ ಸ್ಮೋಕಿಂಗ್ ಜೋನ್ ಕಡ್ಡಾಯ ವಿವಾದ; ಧೂಮಪಾನಕ್ಕೆ ಅವಕಾಶ ಏಕೆ ಎಂಬ ವಾದ

Smoking Zone bbmp notice

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್‌, ಬಾರ್‌ & ರೆಸ್ಟೋರೆಂಟ್‌, ಕಾಫಿ ಬಾರ್‌ಗಳಲ್ಲಿ ಸ್ಮೋಕಿಂಗ್‌ ಜೋನ್‌ (Smoking Zone) ಇರುವುದು ಕಡ್ಡಾಯವಾಗಿದೆ. ಆದರೆ ನಗರದ ಹಲವು ಕಡೆ ಸ್ಮೋಕಿಂಗ್‌ ಜೋನ್‌ ಇಲ್ಲದಿರುವುದು ಕಂಡು ಬಂದಿದೆ. ಹೀಗಾಗಿ ಪಾಲಿಕೆಯು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ನೋಟಿಸ್‌ ಜಾರಿ ಮಾಡಿದೆ. ಆದರೆ ಈ ಆದೇಶಕ್ಕೆ ವಿರೋಧ ವ್ಯಕ್ತವಾಗಿದೆ. ಸ್ಮೋಕಿಂಜ್‌ ಜೋನ್‌ ಅಲ್ಲ, ಇಂಥ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವನ್ನೇ ನೀಡಬಾರದು ಎಂಬ ಆಗ್ರಹ ಕೇಳಿ ಬರುತ್ತಿದೆ. ಕುಟುಂಬ ಸಮೇತ ಹೋಗುವ ಹೋಟೆಲ್‌, ಕಾಫಿ ಬಾರ್‌ಗಳಲ್ಲಿ ಧೂಮಪಾನ ಮಾಡಲು ಅವಕಾಶ ನೀಡುವುದೇ ತಪ್ಪು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ತಂಬಾಕು ಉತ್ಪನ್ನ ನಿಯಂತ್ರಣ ಕಾಯ್ದೆ COTPA 2003 ಅಡಿಯಲ್ಲಿ ಹುಕ್ಕಾ ಸೇವನೆ/ ತಂಬಾಕು ಪದಾರ್ಥಗಳ ಸೇವನೆಗಾಗಿ ಪ್ರತ್ಯೇಕವಾಗಿ ಸ್ಥಳವನ್ನು ಮೀಸಲಿಡಬೇಕು. 30ಕ್ಕಿಂತ ಹೆಚ್ಚು ಆಸನಗಳಿದ್ದರೆ ಅಲ್ಲಿ ಪ್ರತ್ಯೇಕ ಧೂಮಪಾನ ಕೊಠಡಿ ಇರುವುದು ಕಡ್ಡಾಯವಾಗಿದೆ. ಆದರೆ ಹಲವು ಹೋಟೆಲ್‌, ಕಾಫಿ ಬಾರ್‌ಗಳು ಈ ನಿಯಮವನ್ನು ಗಾಳಿಗೆ ತೂರಿರುವ ಆರೋಪ ಕೇಳಿ ಬಂದಿತ್ತು.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಬರುವ ಹೋಟೆಲ್‌ ಮಾಲೀಕರಿಗೆ ನೋಟಿಸ್‌ ನೀಡಲಾಗಿದ್ದು, ನಿಗದಿತ ಧೂಮಪಾನ ಪ್ರದೇಶ ಹಾಗೂ ಕೊಠಡಿ ನಿರ್ಮಿಸಿ ಮೀಸಲಿಡಬೇಕು. ಇಲ್ಲವಾದರೆ ಉದ್ದಿಮೆಗೆ ನೀಡಿರುವ ಲೈಸೆನ್ಸ್‌ ರದ್ದು ಮಾಡಿ, ಮುಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬಿಬಿಎಂಪಿ ನೋಟಿಸ್‌ ಪ್ರತಿ

ಹೋಟೆಲ್‌ ಮಾಲೀಕರ ಆಕ್ರೋಶ
ಬಿಬಿಎಂಪಿಯ ಆದೇಶಕ್ಕೆ ಹೋಟೆಲ್‌ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಸ್ಮೋಕಿಂಗ್ ಜೋನ್ ಮಾಡಿದರೆ ಮಕ್ಕಳು, ಕುಟುಂಬಸ್ಥರು ಹೋಟೆಲ್​ಗೆ ಬರುವುದಿಲ್ಲ ಎನ್ನುವುದು ಅವರ ವಾದವಾಗಿದೆ.

ಬಿಬಿಎಂಪಿ ಆದೇಶದಲ್ಲಿ ಏನಿದೆ?
– 30ಕ್ಕಿಂತ ಹೆಚ್ಚು ಆಸನವಿರುವ ಬಾರ್‌ ಮತ್ತು ರೆಸ್ಟೊರೆಂಟ್‌, ಕಾಫಿ ಬಾರ್‌ಗಳಲ್ಲಿ ಸ್ಮೋಕಿಂಗ್​ ಜೋನ್​ ಕಡ್ಡಾಯ.
– COTPA 2003ರ ಅಡಿಯಲ್ಲಿ ಪ್ರತ್ಯೇಕ ಸ್ಮೋಕಿಂಗ್​ ಜೋನ್​ ಮಾಡುವುದು ಕಡ್ಡಾಯ.
– ನಿಗದಿತ ಧೂಮಪಾನ ಪ್ರದೇಶ ಮೀಸಲಿಡುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ.
– ಸ್ಮೋಕಿಂಗ್​ ಝೋನ್​ ಮಾಡದೇ ಉದ್ಯಮ ನಡೆಸುತ್ತಿರುವ ಕಾನೂನಿನ ಉಲ್ಲಂಘನೆ.
– ಶೀಘ್ರದಲ್ಲಿ ಸ್ಮೋಕಿಂಗ್​ ಝೋನ್ ಮಾಡಬೇಕು. ತಪ್ಪಿದ್ದರೆ ಲೈಸೆನ್ಸ್​ ರದ್ದು ಮಾಡಲಾಗುತ್ತದೆ.
– ಹೋಟೆಲ್​ಗಳಿಗೂ ಈ ನಿಯಮ ಅನ್ವಯ ಎಂದು ಬಿಬಿಎಂಪಿಯಿಂದ ನೊಟೀಸ್.

ಇದನ್ನೂ ಓದಿ | ‌Talk War | ಸಿ.ಟಿ. ರವಿ ಕಳ್ಳಬಟ್ಟಿ ಕುಡಿದು ಮಾತಾಡುತ್ತಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್;‌ ನಾನು ಕೊತ್ವಾಲ್‌ ಶಿಷ್ಯ ಅಲ್ಲ ಎಂದ ರವಿ

Exit mobile version