Site icon Vistara News

Snake Bite: ಹಾವು ಕಡಿತಕ್ಕೆ ಬಾಲಕ ಬಲಿ

Boy dies of snake bite

ಧಾರವಾಡ: ಹಾವು ಕಡಿತಕ್ಕೆ ಬಾಲಕನೊಬ್ಬ (snake bite) ಬಲಿಯಾಗಿದ್ದಾನೆ. ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಅರುಣ್ ಬಡಿಗೇರ್ (9) ಸಾವನ್ನಪ್ಪಿದ ಬಾಲಕ.

ಅರುಣ್‌ ಮನೆಯ ಪಕ್ಕದಲ್ಲೇ ಆಟವಾಡಲು ಹೋಗಿದ್ದಾಗ ಹಾವು ಕಚ್ಚಿದೆ. ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆ ಕರೆತಂದರೂ ಫಲಕಾರಿಯಾಗಲಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಲ್ಲಿ ಮಕ್ಕಳ ಮಾರಾಟ

ರಾಜಧಾನಿ ಬೆಂಗಳೂರಲ್ಲಿ ಸದ್ದಿಲ್ಲದೇ ಮಕ್ಕಳ ಮಾರಾಟ ಜಾಲವು (Child trafficking) ಶುರುವಾಗಿದ್ಯಾ? ಇಂತಹದೊಂದು ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಹೆತ್ತವರ ಮಡಿಲಿನಲ್ಲಿ ಬೆಚ್ಚಗೆ ಮಲಗಿರುವ ಹಸುಗೂಸುಗಳನ್ನು ಕದ್ದು ಮಾರಾಟ ಮಾಡುವ ಜಾಲವೊಂದನ್ನು ಸಿಸಿಬಿ ಅಧಿಕಾರಿಗಳು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹಸುಗೂಸು ಮಾರಾಟ ಮಾಡುವಾಗಲೇ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷ ಲಕ್ಷ ಹಣ ಪಡೆದು ಯಾರದ್ದೋ ಮಗುವನ್ನು ಯಾರದ್ದೋ ಮಡಿಲಿಗೆ ಸೇರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್‌ ಆಗಿದೆ.

ಮಕ್ಕಳಿಲ್ಲದ ದಂಪತಿಗೆ 15 ರಿಂದ 20 ದಿನದ ಹಸುಗೂಸನ್ನು ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ತಮಿಳುನಾಡು ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ, ಶರಣ್ಯ ಎಂಬುವರ ಬಂಧನವಾಗಿದೆ. ಕೆಂಪು ಬಣ್ಣದ ಶಿಫ್ಟ್ ಕಾರಿನಲ್ಲಿ ಮಗು ಮಾರಾಟಕ್ಕೆ ರಾಜರಾಜೇಶ್ವರಿ ನಗರದ ದೇವಸ್ಥಾನ ಸಮೀಪ ಬಂದ ವೇಳೆ ಸಿಸಿಬಿಗೆ ದಾಳಿ ಮಾಡಿ ಹಿಡಿದಿದ್ದಾರೆ.

ಮಹಾಲಕ್ಷ್ಮಿ ಎಂಬಾಕೆ ಹಣ ಪಡೆದು ಮಗು ಮಾರಿಸಲು ಕರೆಸಿದ್ದಳು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಆರೋಪಿಗಳ ಬಳಿಯಿದ್ದ 20 ದಿನದ ಗಂಡು ಮಗುವನ್ನು ರಕ್ಷಣೆ ಮಾಡಿದ್ದಾರೆ.

ಬೋನಿಗೆ ಬಿದ್ದ ಚಿರತೆ

ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆಯೊಂದು ಬಿದ್ದಿದೆ. ಮೈಸೂರಿನ ಮೋಸಂಬಾಯನ ಹಳ್ಳಿಯಲ್ಲಿ ಘಟನೆ ನಡೆದಿದೆ. ಮೂರು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೆರೆ ಸಿಕ್ಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಗ್ರಾಮೀಣ ಹಾಗೂ ಕಾಡಂಚಿನ ಗ್ರಾಮದಲ್ಲಿ ಚಿರತೆ ಹಾಗೂ ಹುಲಿ ಉಪಟಳ ಹೆಚ್ಚಳವಾಗಿದೆ. ಸದ್ಯ ಚಿರತೆ ಸೆರೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version