ನೆಲಮಂಗಲ: ಇಲ್ಲಿನ ಸೋಲೂರು ಗ್ರಾಮದಲ್ಲಿ ಹಾವು ಕಡಿತಕ್ಕೆ (Snake bite) ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಸೋಲೂರು ಗ್ರಾಮದ ನಿವಾಸಿ ಸೈಯದ್ ಸಮೀವುಲ್ಲಾ (38) ಮೃತ ದುರ್ದೈವಿ.
ಸೈಯದ್ ರಾತ್ರಿ ಊಟ ಮುಗಿಸಿ ಮನೆಯ ಸಮೀಪದಲ್ಲಿದ್ದ ಪಾರ್ಕ್‌ಗೆ ಹೋಗಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ನಾಗರ ಹಾವೊಂದು ಕಾಲಿಗೆ ಕಚ್ಚಿದ್ದು, ಅಸ್ವಸ್ತರಾಗಿದ್ದ ಸೈಯದ್‌ನನ್ನು ಕೂಡಲೇ ಸೋಲೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿನ ಸಿಬ್ಬಂದಿ ಹಾವು ಕಡಿತಕ್ಕೆ ಇಂಜೆಕ್ಷನ್ ಲಭ್ಯವಿಲ್ಲ ಎಂದು ಹೇಳಿದ್ದಾರೆ.
ವೈದ್ಯರ ಅನುಪಸ್ಥಿತಿಯಲ್ಲಿ ಹಾವು ಕಡಿತಕ್ಕೆ ಒಳಗಾದ ಸೈಯದ್‌ನನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲು ಸೂಚಿಸಿದ್ದಾರೆ. ಈ ವೇಳೆ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೆ ಸ್ಥಳಕ್ಕೆ ಬರಲು ವಿಳಂಬ ಮಾಡಿದ್ದಾರೆ. ಕೊನೆಗೆ ಬೇರೆ ವಾಹನದ ಮೂಲಕ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಇದನ್ನೂ ಓದಿ: Modi at Belagavi: ಕುಂದಾನಗರಿಯಲ್ಲಿ ಮೋದಿ ಮೆಗಾ ರೋಡ್ ಶೋ; ಪ್ರಧಾನಿಗೆ ಹೂಮಳೆಯ ಸ್ವಾಗತ, ಮೊಳಗಿದ ಜಯಘೋಷ
ಕಳಚಿದ ಆಧಾರ ಸ್ತಂಭ
ತಿಂಗಳ ಹಿಂದಷ್ಟೇ ಸೈಯದ್ ದಂಪತಿಗೆ ಮಗುವಾಗಿದ್ದು, ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ಪೂರೈಕೆ ಮಾಡದ ಆರೋಗ್ಯ ಇಲಾಖೆಯ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ