ಧಾರವಾಡ: ಆಗಾಗ ಪ್ರಾಣಿಗಳ ನಡುವೆ ಸಂಘರ್ಷಗಳನ್ನು ನಾವು ನೋಡುತ್ತೇವೆ. ಇಲಿಯನ್ನು ಕಂಡರೆ ಬೆಕ್ಕಿಗೆ ಆಗದು, ಬೆಕ್ಕನ್ನು ಕಂಡರೆ ನಾಯಿಗೆ ಆಗದು. ನಾಯಿ ಕಂಡರೆ ಹುಲಿ, ಸಿಂಹಗಳು ಭೇಟೆಯಾಡುತ್ತವೆ. ಹೀಗೆ ಒಂದೊಂದಕ್ಕೆ ಒಂದೊಂದು ಬೇಟೆಯೂ ಇರುತ್ತವೆ. ಆದರೆ, ಕೆಲವು ಬಾರಿ ಒಂದು ಜೀವಿಯನ್ನು ನೋಡಿದರೆ ಇನ್ನೊಂದು ಬೇಟೆಯಾಡುವುದಕ್ಕಿಂತಲೂ ಅದೇನೋ ಸಿಟ್ಟು. ಅವುಗಳ ಮೇಲೆ ಎಗರಿ ಎಗರಿ ಹೋಗಿ ದಾಳಿ ಮಾಡುತ್ತವೆ, ಗಾಯಗೊಳಿಸುತ್ತವೆ. ಅದರಲ್ಲೂ ಹಾವು ಕಂಡರೆ ನಾಯಿಗಳಿಗೆ ಆಗಿಬರದು. ಈಗ ಧಾರವಾಡ ನಗರದಲ್ಲಿ ನಾಗರ ಹಾವು ಮತ್ತು ಹುಚ್ಚು ನಾಯಿಯೊಂದರ ಕಾದಾಟ ನಡೆದಿದ್ದು, ವಿಡಿಯೊ ವೈರಲ್ (Video Viral) ಆಗಿದೆ.
ಧಾರವಾಡ ಜಿಲ್ಲೆಯ ಉಮೇಶ ಹಿರೇಮಠ ಎಂಬುವವರ ಹೊಲದ ಮನೆ ಬಳಿ ಈ ಪ್ರಸಂಗ ನಡೆದಿದೆ. ಉಮೇಶ್ ಎಂಬುವವರು ಮನೆಯೊಳಗೆ ಇದ್ದಾಗ ನಾಯಿಯೊಂದು ಕಿರುಚಾಡುತ್ತಿರುವ ಶಬ್ದ ಕೇಳಿದೆ. ಹೀಗಾಗಿ ಏಕೆ ಎಂದು ಬಾಗಿಲು ತೆರೆದು ನೋಡಿದ್ದಾರೆ. ಆಗ ನಾಯಿಯು ನಾಗರ ಹಾವಿನ ಮೇಲೆ ದಾಳಿ ಮಾಡುತ್ತಲಿತ್ತು. ವ್ಯಗ್ರಗೊಂಡಿದ್ದ ನಾಯಿಯು ಪದೇ ಪದೆ ಹೋಗಿ ಹಾವಿನ ಮೇಲೆ ಎರಗುತ್ತಿತ್ತು. ಅದನ್ನು ಕಚ್ಚುತ್ತಿತ್ತು. ಇದನ್ನು ಕಂಡ ಅವರು ಮೊಬೈಲ್ ಎತ್ತಿಕೊಂಡು ವಿಡಿಯೊ ಮಾಡಿಕೊಂಡಿದ್ದಾರೆ.
ನಾಯಿ ದಾಳಿ ಮಾಡುತ್ತಿದ್ದಂತೆ ಆ ಹಾವೂ ಸಹ ಪ್ರತಿ ದಾಳಿ ಮಾಡುತ್ತಿತ್ತು. ತನ್ನ ಹೆಡೆ ಎತ್ತಿ ಕಚ್ಚುತ್ತಿತ್ತು. ಆಗ ನಾಯಿ ತಪ್ಪಿಸಿಕೊಳ್ಳುತ್ತಿತ್ತು. ಹೀಗೆಯೇ ಸುಮಾರು 15 ನಿಮಿಷಗಳ ಕಾಲ ಹಾವು ಮತ್ತು ನಾಯಿ ಕಾದಾಡಿವೆ. ನಾಯಿಯಿಂದ ಬಹಳವೇ ಕಚ್ಚಿಸಿಕೊಂಡಿದ್ದ ಹಾವು ಅಲ್ಲಿಂದ ಪಾರಾದರೆ ಸಾಕು ಎಂದು ನೋಡಿದೆ. ಹಾಗೂ ಅಲ್ಲಿಂದ ಬೇರೆ ಕಡೆಗೆ ಹೋಗಲು ಮುಂದಾಗಿದೆ. ಆದರೆ, ನಾಯಿ ಮಾತ್ರ ಬಿಟ್ಟಿಲ್ಲ. ಅಟ್ಟಿಸಿಕೊಂಡು ಹೋಗಿ ಕಚ್ಚಿದೆ.
ನಾಯಿ – ಹಾವು ಕಾಳಗದ ವಿಡಿಯೊ ಇಲ್ಲಿದೆ
ಕೊನೆಗೆ ಉಮೇಶ ಅವರ ಮನೆಯತ್ತ ಹಾವು ಹೊರಟಿದೆ. ಇದರಿಂದ ಗಾಬರಿಗೊಂಡ ಉಮೇಶ ಅವರು ಮನೆಯ ಬಾಗಿಲನ್ನು ಹಾಕಿಕೊಂಡಿದ್ದಾರೆ. ನಾಯಿಯೂ ಸಹ ಆ ವೇಳೆ ಅಲ್ಲಿಂದ ಕಾಲ್ಕಿತ್ತಿದೆ. ಇಷ್ಟರೊಳಗೆ ಹಾವು ಗಂಭೀರವಾಗಿ ಗಾಯಗೊಂಡಿದ್ದರಿಂದ ಮೃತಪಟ್ಟಿದೆ. ಅತ್ತ ನಾಯಿಯೂ ಸಹ ಹಾವಿನ ಕಡಿತಕ್ಕೊಳಗಾಗಿದ್ದರಿಂದ ವಿಷವೇರಿ ಮೃತಪಟ್ಟಿದೆ.
ಇದನ್ನೂ ಓದಿ: Video Viral : ಸುರಪುರದಲ್ಲಿ ನಾಗರ ಹಾವುಗಳ ಸಲ್ಲಾಪ; ವೈರಲ್ ಆಯ್ತು ರಾಜ-ರಾಣಿಯ ವಿಡಿಯೊ!
ಹಾವು-ನಾಯಿ ಸಾವು
ಹುಚ್ಚು ಹಿಡಿದು ಓಡಾಡುತ್ತಿದ್ದ ನಾಯಿ ಇದಾಗಿದೆ ಎಂದು ಹೇಳಲಾಗಿದ್ದು, ಹಾವು ಕಂಡೊಡನೆ ಅದರ ಮೇಲೆ ಎರಗಿದೆ ಎನ್ನಲಾಗಿದೆ. ಈ ಎಲ್ಲ ದೃಶ್ಯವನ್ನು ಉಮೇಶ ಅವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈಗ ವಿಡಿಯೊ ವೈರಲ್ ಆಗಿದೆ. ವಿಪರ್ಯಾಸವೆಂದರೆ ಈ ಕಾದಾಟದ ನಂತರ ಹಾವು ಮತ್ತು ನಾಯಿ ಎರಡೂ ಮೃತಪಟ್ಟಿವೆ.