ಬೆಂಗಳೂರು: ಇಲ್ಲಿನ ಕಬ್ಬನ್ ಪಾರ್ಕ್‌ನಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಳ್ಳುತ್ತಿದ್ದ ವಿಷಕಾರಿ ನಾಗರಹಾವೊಂದನ್ನು (Snakes in Bangalore) ಅನಿಮಲ್ ರೆಸ್ಕ್ಯೂ ಟೀಂನ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಆದರೆ, ಈ ರೀತಿಯ ಅನೇಕ ಹಾವುಗಳು ಪಾರ್ಕಿನಲ್ಲಿ ಇರುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಇಲಾಖೆ ತಿಳಿಸಿದೆ. ಅಲ್ಲದೆ, ಈ ಬಗ್ಗೆ ಸಾರ್ವಜನಿಕರು ಹೆಚ್ಚು ಎಚ್ಚರವಹಿಸಬೇಕು ಎಂದು ಇಲಾಖೆಯು ಮನವಿ ಮಾಡಿಕೊಂಡಿದೆ.
ಬೆಂಗಳೂರಿನ ನಿತ್ಯವೂ ನೂರಾರು ಜನ ವಾಕಿಂಗ್‌ಗೆ ಎಂದು ಕಬ್ಬನ್ ಪಾರ್ಕಿಗೆ ಹೋಗುತ್ತಾರೆ. ವಾಕಿಂಗ್ ಮುಗಿಸಿ ದಣಿವು ಆರಿಸಿಕೊಳ್ಳಲು ಹುಲ್ಲುಗಾವಲಿನಲ್ಲಿ ಕುಳಿತು ವಿಶ್ರಮಿಸುತ್ತಾರೆ. ಆದರೆ, ಸದ್ಯದ ವಾತಾವರಣದಲ್ಲಿ ಈ ರೀತಿ ಮಾಡುವುದು ಅಪಾಯಕಾರಿಯಾಗಿದೆ.
ಜೂನ್ ಹಾಗೂ ಜುಲೈ ತಿಂಗಳು ಹಾವುಗಳ ಮೊಟ್ಟೆಯೊಡೆದು ಹೊರಗೆ ಬರುವ ಅವಧಿ. ಈ ಸದಂರ್ಭದಲ್ಲಿ ಹಾವುಗಳು ಬೆಚ್ಚಗಿನ ವಾತಾವರಣವನ್ನು ಅಪೇಕ್ಷಿಸುತ್ತವೆ. ಸದ್ಯ ಬೆಂಗಳೂರಿನಲ್ಲಿ ಮಳೆ ಹಾಗೂ ಚಳಿ ಇರುವುದರಿಂದ ಭೂಮಿ ತಂಪಾಗಿರುತ್ತದೆ. ಹಾವುಗಳು ಇರುವ ಜಾಗದಲ್ಲಿ ಕೂಡ ತಂಪು ಹೆಚ್ಚಿರುತ್ತದೆ. ಹೀಗಾಗಿ ಬೆಚ್ಚಗಿನ ಜಾಗ ಹುಡುಕಿಕೊಂಡು ಹೊರಬರುತ್ತವೆ. ಈ ಕಾರಣದಿಂದ ರಾಜಧಾನಿಯಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದೆ.
ಕಬ್ಬನ್ ಪಾರ್ಕ್‌ನಲ್ಲಿ ಕೂಡ ಕಳೆದ ಒಂದು ವಾರದಿಂದ ನಾಗರ ಹಾವೊಂದು ಕಾಣಿಸಿಕೊಳ್ಳುತ್ತಿತ್ತು. ಕಬ್ಬನ್ ಪಾರ್ಕ್‌ನ ಕಾರ್ಮಿಕರ ಕಣ್ಣಿಗೆ ನಿತ್ಯವೂ ಹಾವು ಕಾಣಿಸಿಕೊಳ್ಳುತ್ತಿದ್ದರಿಂದ ಆತಂಕಗೊಂಡಿದ್ದರು. ಆರು ಅಡಿಗೂ ಅಧಿಕ ಉದ್ದ ಇರುವ ವಿಷಕಾರಿ ಹಾವು ಕಂಡು ಭೀತಿಗೊಳಗಾಗಿದ್ದರು. ಈ ಬಗ್ಗೆ ಕೂಡಲೇ ಅನಿಮಲ್ ರೆಸ್ಕ್ಯೂ ಟೀಂಗೆ ಮಾಹಿತಿ ನೀಡಲಾಯಿತು. ಆ ಬಳಿಕ ವಿಷಕಾರಿ ನಾಗರಹಾವನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದರು.
ಕಬ್ಬನ್ ಪಾರ್ಕ್ ಸೇರಿದಂತೆ ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ಹಾವುಗಳು ಇರುವ ಸಾಧ್ಯತೆಯಿದ್ದು ಬಿಬಿಎಂಪಿ ಇಲಾಖೆಯು ಸಾರ್ವಜನಿಕರಲ್ಲಿ ಎಚ್ಚರವಹಿಸಲು ಮನವಿ ಮಾಡಿದೆ. ಪ್ರತಿದಿನ ನಗರದಲ್ಲಿ 50ಕ್ಕೂ ಅಧಿಕ ವಿಷಕಾರಿ ಹಾವುಗಳು ಸೆರೆಯಾಗುತ್ತಿದ್ದು, ಬಿಬಿಎಂಪಿ ವತಿಯಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತಿದೆ. ಹಾವುಗಳು ಸಾರ್ವಜನಿಕ ಸ್ಥಳಗಳಲ್ಲಿ, ಅಪಾರ್ಟ್‌ಮೆಂಟ್‌ನಲ್ಲಿ, ಕಾರುಗಳ ಕೆಳಗೆ ಅಥವಾ ಶೂ ಒಳಗೆ ಕೂಡ ಇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರ ವಹಿಸಬೇಕೆಂದು ಕೋರಲಾಗಿದೆ. ಅಲ್ಲದೆ, ಬಿಬಿಎಂಪಿ ಅರಣ್ಯ ವಿಭಾಗದ ರೆಸ್ಕ್ಯೂ ಟೀಂ ಕೂಡ ಜಾಗೃತವಾಗಿವೆ.
ಇದನ್ನೂ ಓದಿ: ವಿಷಕಾರಿ ಹಾವುಗಳ ಕಡಿತಕ್ಕೆ ಬೆಂಗಳೂರಿನಲ್ಲಿ ಸಿಗಲಿದೆ ಜೀವರಕ್ಷಕ ʻಪ್ರತಿವಿಷʼ