ಬೆಳಗಾವಿ: ಪಂಜಾಬ್‌ನ ಮಿಲಿಟರಿ ಶೆಡ್‌ಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತರಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯೋಧ ಈ ತಿಂಗಳು ತಮ್ಮ ವಿವಾಹಕ್ಕಾಗಿ ಊರಿಗೆ ಬರಲಿದ್ದರು ಎಂದು ಗೊತ್ತಾಗಿದೆ.
ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಯೋಧ ಸಾಗರ ಅಪ್ಪಾಸಾಹೇಬ್ ಬನ್ನೆ(25) ಗುಂಡಿನ ದಾಳಿಯಲ್ಲಿ ಹತರಾಗಿದ್ದು , ಮೇ ತಿಂಗಳಲ್ಲಿ ಸಪ್ತಪದಿ ತುಳಿಯಬೇಕಿದ್ದ ಯೋಧ ಸಾಗರ್ ಇದೇ ತಿಂಗಳು 18ರಂದು ಸ್ವ ಗ್ರಾಮಕ್ಕೆ ಬರುವ ತಯಾರಿಯಲ್ಲಿದ್ದರು. ಆದರೆ ವಿಧಿ ವಂಚಿಸಿದೆ. ಸಾಗರ್ ಸಾವಿನ ಸುದ್ದಿ ಕೇಳಿ ಬೇನಾಡಿ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
2018ರಲ್ಲಿ ಭೂಸೇನಾ ರ್ಯಾಲಿಯಲ್ಲಿ ಭಾಗವಹಿಸಿ ಸೇನೆಗೆ ಸೇರಿದ್ದ ಸಾಗರ್, ಪಂಜಾಬ್ ಮಿಲಿಟರಿ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಜ್ಞಾತರಿಂದ ಸೇನಾ ಶೆಡ್ ಮೇಲೆ ನಡೆದ ದಾಳಿ ವೇಳೆ ಹುತಾತ್ಮರಾಗಿದ್ದಾರೆ. ಪಂಜಾಬ್‌ನಿಂದ ಗೋವಾಗೆ, ಗೋವಾದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಪಾರ್ಥಿವ ಶರೀರ ಆಗಮಿಸಿದ್ದು, ಇಂದು ಸ್ವಗ್ರಾಮಕ್ಕೆ ಆಗಮಿಸಲಿದೆ.
ಪಂಜಾಬ್‌ನ ಬಟಿಂಡಾ (Bathinda Firing) ಸೇನಾ ನೆಲೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ದೇಶದ ನಾಲ್ವರು ಯೋಧರು ಹುತಾತ್ಮರಾಗಿದ್ದು, ಇವರಲ್ಲಿ ಇಬ್ಬರು ಕರ್ನಾಟಕದವರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಇನಾಮಹನಮನೇರಿ ಗ್ರಾಮದ ಸಂತೋಷ್ ಮಲ್ಲಪ್ಪ ನಾಗರಾಳ (24) ಅವರೂ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಮಾಹಿತಿ ನೀಡಲಾಗಿದ್ದು, ಪಾರ್ಥಿವ ಶರೀರಗಳ ರವಾನೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸಂತೋಷ್ ಮಲ್ಲಪ್ಪ ನಾಗರಾಳ ಅವರು 19ನೇ ವಯಸ್ಸಿಗೆ ಸೇನೆ ಸೇರಿದ್ದು, ಕಳೆದ ನಾಲ್ಕು ವರ್ಷದಿಂದ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ಹುತಾತ್ಮನಾದ ಕಾರಣ ಅವರ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ ಎಂದು ತಿಳಿದುಬಂದಿದೆ.
ಪಂಜಾಬ್‌ನ ಬಟಿಂಡಾ ಸೇನಾ ನೆಲೆಯಲ್ಲಿ ಬುಧವಾರ ಬೆಳಗ್ಗೆ ನಡೆದ ಫೈರಿಂಗ್ನಲ್ಲಿ ಮೃತಪಟ್ಟ ನಾಲ್ವರೂ ಸೇನಾ ಯೋಧರೇ ಎಂದು ಭಾರತೀಯ ಸೇನೆ ನೈಋತ್ಯ ಕಮಾಂಡ್ ಹೇಳಿಕೆ ಬಿಡುಗಡೆ ಮಾಡಿದೆ. ಬೆಳಗ್ಗೆ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರು ಉಗ್ರರು ಎಂದು ಮೊದಲು ವರದಿಯಾಗಿತ್ತು. ಸೇನಾ ನೆಲೆಗೆ ಭಯೋತ್ಪಾದಕರು ನುಗ್ಗಿದ್ದರು. ಹೀಗಾಗಿ ಸೇನಾ ಸಿಬ್ಬಂದಿ ಅವರ ಮೇಲೆ ಫೈರಿಂಗ್ ನಡೆಸಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಅಪ್ಡೇಟ್ ಮಾಹಿತಿ ಬಂದಿದ್ದು, ಮೃತಪಟ್ಟವರು ಉಗ್ರರಲ್ಲ, ಸೇನಾ ಯೋಧರೇ ಎನ್ನಲಾಗಿದೆ.
ಬಟಿಂಡಾ ಸೇನಾ ನೆಲೆಯ ಸುತ್ತ ಭದ್ರತಾ ಸಿಬ್ಬಂದಿಯು ಸುತ್ತುವರಿದಿದ್ದು, ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಆದಾಗ್ಯೂ, ಘಟನೆಯ ಸ್ಥಳದಲ್ಲಿ ಇನ್ಸಾಸ್ ರೈಫಲ್, ಮ್ಯಾಗಜಿನ್‌ಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದುವರೆಗೆ ನಡೆದ ಶೋಧದ ವೇಳೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.