ತುಮಕೂರು: ಅವರಿಗೆಲ್ಲ ಒಂದು ಗುಂಟೆಗೆ 1.3 ಲಕ್ಷ ರೂ. ಪರಿಹಾರ (Discrimination in Compensation) ಕೊಟ್ಟಿದ್ದಾರೆ. ನನಗೆ ಕೊಟ್ಟಿದ್ದು ಬರೀ 6,000 ರೂ. ಯೋಧನ ಪತ್ನಿ (Soldiers wife protest) ನಾನು. ನನಗೇ ಯಾಕೆ ಮೋಸ ಮಾಡುತ್ತಾರೆ, ಯಾಕೆ ಈ ತಾರತಮ್ಯ, ಇದನ್ನೆಲ್ಲ ಹೇಳೋರು ಕೇಳೋರೂ ಯಾರೂ ಇಲ್ವಾ?
ಹೀಗೆ ನಡುರಸ್ತೆಯಲ್ಲಿ ಕುಳಿತು ಕೇಳುತ್ತಿದ್ದಾರೆ ಯೋಧನ ಪತ್ನಿ ಶಶಿಕಲಾ. ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹಂಗರಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ನಡುವೆ ಒಬ್ಬರೇ ಕುಳಿತು ಇಡೀ ರಸ್ತೆಯನ್ನು ತಡೆದು ಪ್ರತಿಭಟನೆ (Road Block protest) ನಡೆಸುತ್ತಿರುವ ಅವರ ಪ್ರಶ್ನೆ ಒಂದೇ, ಯೋಧನ ಪತ್ನಿಯಾಗಿರುವ ನನಗೆ, ನನ್ನ ಕುಟುಂಬಕ್ಕೆ ಹೀಗೆ ಮೋಸ ಮಾಡಬಹುದಾ?
ಮಾಗಡಿ, ಹುಲಿಯೂರುದುರ್ಗ, ಸೋಮವಾರಪೇಟೆ ಮಧ್ಯೆ ನಿರ್ಮಾಣ ಆಗುತ್ತಿರುವ ಕೆಶಿಪ್ ರಸ್ತೆಗಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ಇದು. ಶಶಿಕಲಾ ಅವರು ನಡು ರಸ್ತೆಯಲ್ಲಿ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಅವರ ಮಕ್ಕಳು ವಾಹನ ಸಂಚಾರವನ್ನು ತಡೆಯುತ್ತಾ ಅವರಿಗೆ ನೆರವಾಗಿದ್ದಾರೆ.
ಮಾಗಡಿ – ಹುಲಿಯೂರುದುರ್ಗ ರಸ್ತೆಯಲ್ಲಿ ಯೋಧನ ಪತ್ನಿ ಮತ್ತು ಮಕ್ಕಳು ಈ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
2017ರಿಂದ ನಡೆಯುತ್ತಿರುವ ಕಾಮಗಾರಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದಕ್ಕಿಂತ ಮೊದಲೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ʻʻನಮ್ಮ ಅಕ್ಕಪಕ್ಕದವರ ಒಂದು ಗುಂಟೆ ಜಮೀನಿಗೆ 1.30ಲಕ್ಷ ಪರಿಹಾರ ನೀಡಿದ್ದಾರೆ. ಆದ್ರೆ ನಮ್ಮ ಜಮೀನಿಗೆ ಮಾತ್ರ ಒಂದು ಗುಂಟೆಗೆ ಕೇವಲ 6 ಸಾವಿರ ಕೊಟ್ಟಿದ್ದಾರೆ. ನ್ಯಾಯಯುತವಾಗಿ ನಮಗೆ ಪರಿಹಾರ ಬೇಕುʼʼ ಎನ್ನುವ ಶಶಿಕಲಾ, ನಮಗೆ 15 ಗುಂಟೆ ಜಮೀನಿಗೆ ಪರಿಹಾರ ಸಿಕ್ಕಿಲ್ಲ. ಎಲ್ಲಾ ದಾಖಲೆ ನೀಡಿದ್ದರೂ ನಮಗೆ ಪರಿಹಾರ ನೀಡಿಲ್ಲ. 2021ರಿಂದ ಹೋರಾಟ ಮಾಡುತ್ತಿದ್ದೇವೆ ಆದ್ರೂ ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಈ ನಡುವೆ ʻʻನ್ಯಾಯಾಲಯದಲ್ಲಿ ನಿಮ್ಮ ಹಣ ಇದೆ ಅಲ್ಲಿಯೇ ಬಿಡಿಸಿಕೊಳ್ಳಿʼʼ ಎಂದು ಭೂ ಸ್ವಾಧೀನ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಪರಿಹಾರದಲ್ಲಿ ತಾರತಮ್ಯ ಆಗಿದೆ ಎನ್ನುವುದು ಶಶಿಕಲಾ ದೂರು.
ಕಾಶ್ಮೀರದಲ್ಲಿ ಸೇವೆ ಮಾಡುತ್ತಿರುವ ಪತಿ ಕಂಬಯ್ಯ
ಶಶಿಕಲಾ ಪತಿ ಕಂಬಯ್ಯ ಜಮ್ಮು ಕಾಶ್ಮೀರದ ಸಿಆರ್‌ಪಿಎಫ್‌ನಲ್ಲಿ ದೇಶ ಕಾಯುತ್ತಿದ್ದಾರೆ. ಕಂಬಯ್ಯರಿಗೆ ರಜೆ ಇಲ್ಲದ ಕಾರಣ ಜನವರಿಯಿಂದ ಊರಿಗೆ ಬಂದಿಲ್ಲ. ಈ ನಡುವೆ ಶಶಿಕಲಾ ಅವರಿಗೆ ಗೊತ್ತಿಲ್ಲದೆ ರಾತ್ರೋ ರಾತ್ರಿ ರಸ್ತೆ ಕಾಮಗಾರಿ ಮಾಡುವುದಕ್ಕೆ ಮುಂದಾಗಿದ್ದರಿಂದ ಅವರು ರಸ್ತೆಯಲ್ಲಿಯೇ ಮಕ್ಕಳ ಸಮೇತ ಧರಣಿ ಕುಳಿತಿದಿದ್ದಾರೆ.
ಶಶಿಕಲಾ ಅವರ ಪ್ರತಿಭಟನೆಯಿಂದ ಸ್ವಲ್ಪ ಹೊತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಬಳಿಕ ಪೊಲೀಸರು ಬಂದು ಅವರನ್ನು ಮನವೊಲಿಸಿ ರಸ್ತೆ ಮಧ್ಯದಿಂದ ಎಬ್ಬಿಸಿದ್ದಾರೆ. ಇದೀಗ ಶಶಿಕಲಾ ಅವರು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.