Site icon Vistara News

Bengaluru Bandh: ಸೆ.11ರಂದು ಬೆಂಗಳೂರು ಬಂದ್‌ ಹಿನ್ನೆಲೆ ಕೆಲ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

bangalore Road

ಬೆಂಗಳೂರು: ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ವತಿಯಿಂದ ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವುದರಿಂದ ರಾಜಧಾನಿಯ ಕೆಲವೆಡೆ ಖಾಸಗಿ ಬಸ್‌, ಆಟೋ ಮಾಲೀಕರು, ಚಾಲಕರು ಪ್ರತಿಭಟನೆ, ರ‍್ಯಾಲಿ ನಡೆಸಲಿದ್ದಾರೆ. ಹೀಗಾಗಿ ಸಂಚಾರ ದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೊಲೀಸ್‌ ವಿಭಾಗ, ನಗರದ ಕೆಲ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿದೆ.

ಈ ಕೆಳಕಂಡ ಬದಲಿ ರಸ್ತೆಗಳನ್ನು ಬಳಸಿ

ಸೋಮವಾರ ಖಾಸಗಿ ವಾಹನ ಬಂದ್‌; ವಿದ್ಯಾರ್ಥಿಗಳು, ನೌಕರರಿಗೆ ಬಿಸಿ; ಪರ್ಯಾಯ ವ್ಯವಸ್ಥೆ ಏನು?

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸೆ.11ರಂದು ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವುದರಿಂದ ಭಾನುವಾರ ಮಧ್ಯರಾತ್ರಿಯಿಂದಲೇ ಬಸ್‌, ಶಾಲಾ ವಾಹನ, ಆಟೋ, ಕ್ಯಾಬ್‌ಗಳ ಸೇವೆ ಸ್ಥಗಿತವಾಗಲಿದೆ. ಈ ನಡುವೆ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಸಾರಿಗೆ ಇಲಾಖೆ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ. ರಾಜಧಾನಿಯಲ್ಲಿ ಶಾಲೆ, ಏರ್‌ಪೋರ್ಟ್, ಪ್ರಮುಖ ಆಸ್ಪತ್ರೆಗಳಿರುವ ಕಡೆ ಹೆಚ್ಚು ಟ್ರಿಪ್ ಬಸ್ ಓಡಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಬಂದ್‌ ಬಗ್ಗೆ ಶಾಂತಿ ನಗರದಲ್ಲಿದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಶಾಲೆ, ಏರ್‌ಪೋರ್ಟ್, ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಹೆಚ್ಚು ಟ್ರಿಪ್ ಬಸ್ ಓಡಿಸಲು ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಸಹ ನಿಗಾ ಇಡುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ನಾಳೆ ಬಸ್‌ಗಳು ಹೆಚ್ಚುವರಿ 4 ಸಾವಿರ ಟ್ರಿಪ್ ಓಡುತ್ತವೆ. ಏರ್‌ಪೋರ್ಟ್‌ ಹೆಚ್ಚುವರಿ 100 ಬಸ್ ಹಾಕಿದ್ದೇವೆ. ಬೇಡಿಕೆ ಹೆಚ್ಚಿರುವ ಕಡೆ ಬಸ್‌ಗಳು ಹೆಚ್ಚಾಗಿ ಓಡುತ್ತೆ. 1 ಕೋಟಿಗೂ ಹೆಚ್ಚು ಮಂದಿ ನಮ್ಮ ಬಿಎಂಟಿಸಿಯಲ್ಲಿ ಪ್ರತಿ ನಿತ್ಯ ಪ್ರಯಾಣ ಮಾಡುತ್ತಾರೆ. ಅವರು ಎಷ್ಟು ಸಂಘ ಆದರೂ ಇಟ್ಟುಕೊಳ್ಳಲಿ, ಮುಷ್ಕರ ಮಾಡಿಯೇ ಮಾಡುತ್ತೇವೆ ಎಂಬುವವರ ಬಗ್ಗೆ ಏನು ಹೇಳಲಿ ಎಂದರು.

ಸೋಮವಾರ ರಸ್ತೆಗಿಳಿಯಲ್ಲ ಸ್ಕೂಲ್‌ ಬಸ್‌, ವ್ಯಾನ್‌;‌ ಮಕ್ಕಳಿಗೆ ಶಾಲೆ ಇದ್ಯಾ, ಇಲ್ವಾ?

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟವು ಸೆ.11ರಂದು ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವುದರಿಂದ ಬಂದ್‌ ಬಿಸಿ ಶಾಲಾ ಕಾಲೇಜುಗಳಿಗೂ ತಟ್ಟಲಿದೆ. ಮಕ್ಕಳ ಓಡಾಟಕ್ಕೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲ ಖಾಸಗಿ ಶಾಲೆಗಳು ರಜೆ ಘೋಷಿಸಿವೆ.

ಸೆಪ್ಟೆಂಬರ್‌ 10ರ ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಖಾಸಗಿ ಸಾರಿಗೆ ಸೇವೆಗಳು ಬಂದ್ ಆಗಲಿವೆ. ಖಾಸಗಿ ಬಸ್‌ಗಳು, ಮಿನಿ ಲಗೇಜ್ ವಾಹನಗಳು, ಸ್ಕೂಲ್‌ ಬಸ್‌, ವ್ಯಾನ್‌, ಆಟೋ ಸೇರಿದಂತೆ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌, ಕಂಪೆನಿ ಕ್ಯಾಬ್‌ಗಳ ಓಡಾಟ ಇರುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ.

ಬೆಂಗಳೂರು ಬಂದ್‌ ಬಿಸಿ ಶಾಲಾ ಮಕ್ಕಳ ಓಡಾಟಕ್ಕೂ ತಟ್ಟಲಿದೆ. ಸ್ಕೂಲ್‌ ಬಸ್‌, ವ್ಯಾನ್‌, ಆಟೋ ಯಾವುದು ಇರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಬೇಕಾದರೆ ನಿಮ್ಮ ಸ್ವಂತ ವಾಹನ ಅಥವಾ ಬಿಎಂಟಿಸಿ ಬಸ್‌ ಗಟ್ಟಿ.

ರಜೆ ಘೋಷಿಸಿದ ಖಾಸಗಿ ಶಾಲೆಗಳು

ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್ ಕರೆ ನೀಡುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿವೆ. ಈಗಾಗಲೇ ಹೆಬ್ಬಾಳದ ವಿದ್ಯಾನಿಕೇತನ ಶಾಲೆ, ಆರ್ಕಿಡ್ ಶಾಲೆ ಸೇರಿದಂತೆ ಹಲವು ಶಾಲೆಗಳು ಮಕ್ಕಳಿಗೆ ರಜೆ ನೀಡಿವೆ. ಈ ಬಗ್ಗೆ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಸೂಚನೆ ನೀಡಿದೆ. ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ರಜೆ ಘೋಷಣೆ ಎಂದು ಉಲ್ಲೇಖಿಸಿದೆ. ಸದ್ಯ ಇತರೆ ಶಾಲೆಗಳು ರಜೆ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ. ಎಂದಿನಂತೆ ಬಹುತೇಕ ಕಡೆಗಳಲ್ಲಿ ಶಾಲೆ ನಡೆಯಲಿದೆ.

ಚಾಲಕರ ಅಷ್ಟ ದಿಗ್ಬಂಧನ!

ಸೆ.11ರಂದು ಪ್ರಮುಖ ಜಂಕ್ಷನ್, ಹೆದ್ದಾರಿಯಲ್ಲಿ ವಾಹನಗಳ ತಡೆಗೆ ಚಾಲಕರು ಯೋಜನೆ ರೂಪಿಸಿದ್ದಾರೆ. ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಸಿ, ಮತ್ತೊಮ್ಮೆ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ಸರ್ಕಾರವು ಲಿಖಿತ ಆದೇಶ ನೀಡುವವರೆಗೂ ಬಂದ್ ಕೈ ಬಿಡದಿರಲು ತೀರ್ಮಾನಿಸಿದ್ದಾರೆ.

ಮೆರವಣಿಗೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆದಿದ್ದು, ನೆಲಮಂಗಲ , ವೈಟ್ ಫೀಲ್ಡ್, ಕೆಂಗೇರಿ, ಕೆ.ಆರ್ ಪುರಂ, ಹೆಬ್ಬಾಳದಿಂದ ರ‍್ಯಾಲಿ ಬಂದು ಫ್ರೀಡಂ ಪಾರ್ಕ್‌ ಸೇರಲಿದ್ದಾರೆ. ಪೊಲೀಸರು ರ‍್ಯಾಲಿ ಹತ್ತಿಕ್ಕುವ ಪ್ರಯತ್ನ ಮಾಡಿದರೆ, ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ ನಡೆಸಲು ಒಕ್ಕೂಟ ಪ್ಲ್ಯಾನ್‌ ಮಾಡಿದೆ.

ಇದನ್ನೂ ಓದಿ | Shuchi Scheme: ಶುಚಿ ಯೋಜನೆಯಲ್ಲಿ ಹೊಸ ಪ್ರಯೋಗ; ನ್ಯಾಪ್ಕಿನ್‌ಗೆ ಪರ್ಯಾಯವಾಗಿ ಮೆನ್‌ಸ್ಟ್ರುಯಲ್ ಕಪ್

ಟ್ರಾಫಿಕ್‌ ಕಿರಿಕಿರಿ

ಒಂದು ಕಡೆ ಖಾಸಗಿ ವಾಹನಗಳು ಸಿಗದೆ ಪ್ರಯಾಣಿಕರ ಪರದಾಟ ಅನುಭವಿಸಿದರೆ ಮತ್ತೊಂದು ಕಡೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಖಾಸಗಿ ವಾಹನ ಚಾಲಕರ ರ‍್ಯಾಲಿಯಿಂದಾಗಿ ಮೆಜಸ್ಟಿಕ್‌ ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಉಂಟಾಗಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version