ವಿಜಯಪುರ: ನನ್ನ ಮಗಳನ್ನು ಬಾವಿಗೆ ಹಾಕಿ ಅಳಿಯ ಕೊಂದಿದ್ದಾನೆ. ಅವನಿಗೆ ಕಠಿಣ ಶಿಕ್ಷೆ ಆಗಲೇಬೇಕು, ನನಗೆ ಅದಕ್ಕಿಂತ ಬೇರೆ ಸಹಾಯ ಬೇಡ ಎಂದು ಮಹಿಳೆಯೊಬ್ಬರು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪಾದ ಹಿಡಿದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಳಿಯ ಮಹಾಕ್ರೂರ, ಪೊಲೀಸರ ಬಳಿ ನ್ಯಾಯ ಕೇಳಲು ಹೋದರೆ ನನ್ನನ್ನು ಗದಿರಿಸಿ ಕಳುಹಿಸುತ್ತಾರೆ ಎಂದು ಗೋಳಿಟ್ಟಿರುವ ಪ್ರಸಂಗವು ಇಲ್ಲಿನ ಟಕ್ಕಳಕಿಯ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ನಡೆದಿದೆ.
ಟಕ್ಕಳಕಿಯ ಜೆಡಿಎಸ್ ಸಮಾವೇಶ ನಡೆಯುವ ವೇಳೆ ವೇದಿಕೆ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಇದ್ದರು. ಈ ವೇಳೆ ವಿಜಯಪುರದ ಮಹಲ್ ಗ್ರಾಮದ ಮಹಿಳೆ ಲಕ್ಷ್ಮಿ ಬಾಯಿ ಕನ್ನೂರ ಎಂಬ ಮಹಿಳೆ ಬಂದು ಎಚ್‌ಡಿಕೆ ಭೇಟಿಗೆ ಅವಕಾಶ ಕೇಳಿದ್ದಾರೆ. ಆಗ ಅವರಿದ್ದಲ್ಲಿಗೆ ಹೋಗಲು ಬಿಡಲಾಗಿದೆ. ಲಕ್ಷ್ಮಿ ಹತ್ತಿರ ಬರುತ್ತಿದ್ದಂತೆ, “ಏನಮ್ಮ ನಿಮ್ಮ ಸಮಸ್ಯೆ ಎಂದು ಕುಮಾರಸ್ವಾಮಿ ಕೇಳಿದ್ದಾರೆ. ಆಗ ಮಹಿಳೆ ಕಣ್ಣೀರು ಹಾಕುತ್ತಲೇ, ಮಗಳನ್ನು ಅಳಿಯ ಕೊಂದು ಬಾವಿಗೆ ಎಸೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಶೋಭಾ’ ಫ್ಲ್ಯಾಟ್ ಖರೀದಿಸಿದವರಿಗೆ ಆತಂಕ, 2 ಸಾವಿರ ಫ್ಲ್ಯಾಟ್ ನಿರ್ಮಾಣದ ನಕ್ಷೆ ಮಂಜೂರಾತಿ ರದ್ದು ಮಾಡಿದ ಬಿಬಿಎಂಪಿ
ನನ್ನ ಮಗಳೂ ಮಾಯಕ್ಕಳನ್ನು ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ವ್ಯಕ್ತಿಗೆ ಮದುವೆ ಮಾಡಿ ಕೊಟ್ಟಿದ್ದೆ. ಮಾಯಕ್ಕ ಏಳು ತಿಂಗಳು ಗರ್ಭಿಣಿಯಾಗಿದ್ದಳು. ಆದರೆ ಅಳಿಯ ವರದಕ್ಷಿಣೆಗಾಗಿ ಪದೇ ಪದೆ ಪೀಡಿಸುತ್ತಿದ್ದ. ಸಾಕಷ್ಟು ಗಲಾಟೆ ಮಾಡುತ್ತಿದ್ದ, ಐದು ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಕಿರುಕುಳ ಕೊಡುತ್ತಿದ್ದ. ಊರಿನ ಹಿರಿಯರಿಂದ ರಾಜಿ ಪಂಚಾಯಿತಿ ಮಾಡಿದೆವು. ಕೊನೆಗೆ ಊರಿನ ಹಿರಿಯರ ಮೂಲಕ ಅಳಿಯನಿಗೆ 30,000 ರೂಪಾಯಿ ವರದಕ್ಷಿಣೆ ಕೊಟ್ಟಿದ್ದೆ. ಆದರೂ, ಆತ ನನ್ನ ಮಗಳನ್ನು ಕೊಂದು ಹಾಕಿದ್ದಾನೆ ಎಂದು ಕುಮಾರಸ್ವಾಮಿ ಕಾಲಿಗೆ ಬಿದ್ದು ಕಣ್ಣೀರಿಟ್ಟಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬಸವನ ಬಾಗೇವಾಡಿ ಕಾರ್ಯಕ್ರಮದ ವೇಳೆಯೇ ಲಕ್ಷ್ಮಿ ಬಾಯಿ ಹುಡುಕಿಕೊಂಡು ಬಂದಿದ್ದರು. ಅಲ್ಲಿ ಸಿಗದೇ ಇದ್ದಿದ್ದಕ್ಕೆ ಬಸ್ ಹಿಡಿದು ಟಕ್ಕಳಕಿಯ ಸಮಾವೇಶದ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಇಂಡಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರೂ ಏನು ಕ್ರಮವಹಿಸುತ್ತಿಲ್ಲ. ನನಗೇ ಗದರಿಸಿ ಕಳುಹಿಸುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಕರೆ
ಮಹಿಳೆಯ ಕಣ್ಣೀರಿಗೆ ಮಿಡಿದ ಮಾಜಿ ಸಿಎಂ ಕುಮಾರಸ್ವಾಮಿ ತಕ್ಷಣವೇ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾತನಾಡಿದರು. ತಕ್ಷಣವೇ ಕ್ರಮ ತೆಗೆದುಕೊಂಡು ವಿಷಯವನ್ನು ತಿಳಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಸೋಮವಾರ (ಜ.೨೩) ಬಬಲೇಶ್ವರ ಕ್ಷೇತ್ರದ ನಿಡೋಣಿ ಗ್ರಾಮಕ್ಕೆ ಬನ್ನಿ ಎಂದು ಮಹಿಳೆಗೆ ತಿಳಿಸಿದರು.
ಇದು ರಾಜ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಪೊಲೀಸ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನರ ಪರಿಸ್ಥಿತಿ ದಯನೀಯವಾಗಿದೆ. ಶಿಲಾಯುಗದ ಪರಿಸ್ಥಿತಿ ಈ ಭಾಗದಲ್ಲಿದೆ. ಜನರ ಮುಗ್ದ ಸ್ಥಿತಿಯನ್ನು ರಾಜಕೀಯ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ನಿಂತು ಬುರಡೆ ಭಾಷಣ ಮಾಡಿದರೆ ಏನು ಪ್ರಯೋಜನ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.