ಕೊಪ್ಪಳ: ಪಾಪಿ ಮಗ ಒಬ್ಬ ತನ್ನ ವೃದ್ಧೆ ತಾಯಿಯನ್ನು ದೇವಸ್ಥಾನಕ್ಕೆಂದು ಕರೆತಂದು ಅಲ್ಲಿಯೇ ಬಿಟ್ಟು ಹೋದ ಘಟನೆ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ನಡೆದಿದೆ. ಕಂಗಾಲಾಗಿದ್ದ ವೃದ್ಧೆಯನ್ನು ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
ತನ್ನ ಹೆಸರು ಖಾಸೀಂಬಿ ಎಂದು ಹೇಳುತ್ತಿರುವ ವೃದ್ಧೆ ಉಜ್ಜಯಿನಿ ಗ್ರಾಮದವರಂತೆ. ಸುಮಾರು 80 ವರ್ಷದ ವೃದ್ಧೆ ಬೇರೆ ಯಾವುದೇ ಮಾಹಿತಿ ನೀಡುತ್ತಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಪ್ರಸಿದ್ಧ ಹುಲಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ವೃದ್ಧೆ ತನ್ನ ಮಗನೊಡನೆ ಬಂದಿದ್ದಾರೆ. ವೃದ್ಧೆಯ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆಯನ್ನು ತಾಯಿಯ ಕೈಗೆ ನೀಡಿ ಹೋಗಿದ್ದಾನೆ.
ರಾತ್ರಿಯಾದರೂ ಈ ವೃದ್ಧೆಯ ಬಳಿ ಯಾರೂ ಬಾರದಿರುವುದನ್ನು ಗಮನಿಸಿದ ಅಲ್ಲಿದ್ದವರು ವೃದ್ದೆಗೆ ಊಟ, ಹೊದಿಕೆ ನೀಡಿದ್ದಾರೆ. ವೃದ್ದೆಯಿಂದ ಹೆಚ್ಚಿನ ಮಾಹಿತಿ ಸಿಗದಿದ್ದಾಗ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವೃದ್ಧೆಯನ್ನು ರಕ್ಷಣೆ ಮಾಡಿ ಕೊಪ್ಪಳದ ವೃದ್ಧಾಶ್ರಮವೊಂದಕ್ಕೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | ಫ್ರೆಂಡ್‌ಶಿಪ್ ಬ್ಯಾಂಡ್‌ಗಾಗಿಯೇ ಬದುಕಿತ್ತು ಆ ಜೀವ: ಕೊಪ್ಪಳದಲ್ಲೊಂದು ಮನಕಲಕುವ ಘಟನೆ