ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಅವರು ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಮತ್ತು ಕಾಂಗ್ರೆಸ್ ಶೇ. 40 ಕಮಿಷನ್ ಆರೋಪ ಮಾಡುತ್ತಿರುವ ಸಮಯದಲ್ಲಿ ನಡೆದಿರುವ ದಾಳಿ ಮತ್ತು ಬಂಧನ ರಾಜಕೀಯ ಚರ್ಚೆಗೂ ಕಾರಣವಾಗಬಹುದಾದ ಬೆಳವಣಿಗೆಯಾಗಿದೆ.
ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳು ಪುತ್ರ ಪ್ರಶಾಂತ್ 40 ಲಕ್ಷ ರೂಪಾಯಿಗೂ ಹೆಚ್ಚು ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಯಲ್ಲಿ ಸಿಲುಕಿದ್ದಾರೆ. ಮಾಡಾಳು ವಿರೂಪಾಕ್ಷಪ್ಪ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ (ಕೆಎಸ್‌ಡಿಎಲ್) ಕಚ್ಚಾ ವಸ್ತುಗಳನ್ನು ಪೂರೈಸಲು ಟೆಂಡರ್ ಕೊಡಿಸಲು ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಕುಮಾರಕೃಪಾ ಅತಿಥಿ ಗೃಹದ ಸಮೀಪ ಇರುವ ಶಾಸಕರ ಕಚೇರಿಯಲ್ಲಿ ಹಣ ಸ್ವೀಕರಿಸುತ್ತಿದ್ದಾಗಲೇ ಪ್ರಶಾಂತ್ ಅವರನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ. ಶಾಸಕರ ಪುತ್ರ ಟೆಂಡರ್ ಕೊಡಿಸಲು 80 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಶಾಂತ್ ಅವರು ಅವರು ಕೆಎಸ್‌ಡಿಎಲ್ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು 80 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ವಿಚಾರವನ್ನು ತಿಳಿದ ಲೋಕಾಯುಕ್ತ ದಾಳಿಗೆ ಸಜ್ಜಾಗಿತ್ತು. ಸುಮಾರು 10 ಮಂದಿ ಲೋಕಾಯುಕ್ತ ಪೊಲೀಸರು ಕಚೇರಿಗೆ ದಾಳಿ ಮಾಡಿ ಪ್ರಶಾಂತ್ ಅವರನ್ನು ವಶಕ್ಕೆ ಪಡೆದರು. ಲೋಕಾಯುಕ್ತ ಐಜಿಪಿಯಾಗಿರುವ ಸುಬ್ರಹ್ಮಣ್ಯೇಶ್ವರ ರಾವ್ ಅವರು ಕಚೇರಿಗೆ ಭೇಟಿ ನೀಡಿದ್ದಾರೆ. ಕಚೇರಿಯಲ್ಲಿ 1.63 ಕೋಟಿ ರೂ. ಪತ್ತೆಯಾಗಿದೆ ಎಂದು ಸುಬ್ರಹ್ಮಣ್ಯೇಶ್ವರ ರಾವ್ ಅವರು ತಿಳಿಸಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ಸಂಕಷ್ಟ
ಮಾಡಾಳ್ ವಿರೂಪಾಕ್ಷಪ್ಪ ಮತ್ತು ಬಿಜೆಪಿಗೆ ಈ ಘಟನೆ ಭಾರಿ ಮುಜುಗರಕ್ಕೆ ಕಾರಣವಾಗಲಿದೆ. ಲೋಕಾಯುಕ್ತ ಬಲೆಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಹಣ ಸಿಕ್ಕರೆ ಇಡಿ, ಐಟಿ ತನಿಖೆಯಾಗಬೇಕಾಗುತ್ತದೆ. ಒಂದೊಮ್ಮೆ ಇಡಿ, ಐಟಿಗೆ ಪ್ರಕರಣ ವರ್ಗಾವಣೆಯಾದರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಸಂಕಷ್ಟ ಎದುರಾಗಲಿದೆ.
ಮಾಡಾಳು ವಿರೂಪಾಕ್ಷಪ್ಪ ಅವರು ಅವರು 2008, 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ವಿರೂಪಾಕ್ಷಪ್ಪ ಅವರ ಮೊದಲ ಪುತ್ರ ಮಲ್ಲಿಕಾರ್ಜುನ್, ಎರಡನೇ ಪುತ್ರ ಪ್ರವೀಣ್ ಮತ್ತು ಮೂರನೇ ಪುತ್ರ ಪ್ರಶಾಂತ್ ಆಗಿದ್ದಾರೆ.
2023ರ ಚುನಾವಣೆಯಲ್ಲಿ ಇನ್ನೊಬ್ಬ ಪುತ್ರ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿತ್ತು. ಈ ಹೊತ್ತಿನಲ್ಲಿ ಇನ್ನೊಬ್ಬ ಪುತ್ರ ಜೈಲಿಗೆ ಹೋಗುತ್ತಿರುವುದು ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ.
ಇದನ್ನೂ ಓದಿ : Karnataka Election : ಕಾಂಗ್ರೆಸ್-ಬಿಜೆಪಿ ನಡುವೆ ಥಟ್ ಅಂತ ಹೇಳಿ ಫೈಟ್; ಶಿಕ್ಷಕರ ನೇಮಕಾತಿ ಅಕ್ರಮ V/S 40% ಕಮಿಷನ್