ಬೆಂಗಳೂರು: ದೇಶದಲ್ಲಿ ಸಹಕಾರಿ ಆಂದೋಲನಕ್ಕೆ ಹೊಸ ದಿಕ್ಕು ನೀಡುವ ಪ್ರಯತ್ನಗಳ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ಸಹಕಾರಿ ಇಲಾಖೆಯನ್ನು ಪ್ರತ್ಯೇಕಗೊಳಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದರು. ಇದರಿಂದ ಸಾಕಷ್ಟು ಲಾಭವಾಗಿದೆ. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಹಕಾರ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದ್ದೇವೆ. ದೇಶದ ಯಾವ ಭಾಗದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಇದಕ್ಕಾಗಿ ಈ ಹಿಂದೆ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಸಹಕಾರ ಸಚಿವರೂ ಆಗಿರುವ ಗೃಹ ಮಂತ್ರಿ ಅಮಿತ್ ಶಾ (Amit Shah) ಅವರು ಹೇಳಿದರು.
ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಸಹಕಾರ ಸಮ್ಮೇಳನವನ್ನು ಉದ್ಘಾಟಿಸಿ, ವಿವಿಧ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು, ಆರ್ಗಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಾಗಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್, ಬೀಜ ಉತ್ಪಾದನೆ ಮತ್ತು ಸಂರಕ್ಷಣೆಗಾಗಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸಂಸ್ಥೆ ಮತ್ತು ಉತ್ಪನ್ನಗಳು ರಫ್ತು ಮಾಡಲು ಸಹಕಾರ ತತ್ವದ ಆಧಾರದ ಮೇಲೆಯೇ ಎಕ್ಸ್‌ಪೋರ್ಟ್ ಹೌಸ್ ಸ್ಥಾಪಿಲಾಗುತ್ತಿದೆ. ಈ ಎಲ್ಲ ಕೆಲಸಗಳನ್ನು ನಿರ್ವಹಿಸಲು ಸಾಕಷ್ಟು ಮಾನವ ಸಂಪನ್ಮೂಲ ಬೇಕಾಗುತ್ತದೆ. ಅದಕ್ಕಾಗಿಯೇ ಕೌಶಲಯುಕ್ತ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲು ಸಹಕಾರ ವಿವಿಯನ್ನು ಆರಂಭಿಸಲಾಗುವುದು ಎಂದು ಅಮಿತ್ ಶಾ ಅವರು ಹೇಳಿದರು.
ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ಬಲವನ್ನು ನೀಡುವುದಕ್ಕಾಗಿ, ಚುನಾವಣೆಯಲ್ಲಿ ಪಾರದರ್ಶಕತೆಯನ್ನು ತರುವುದಕ್ಕಾಗಿ ಮಾದರಿ ಕಾನೂನು ರೂಪಿಸುತ್ತಿದ್ದೇವೆ. ಆರ್ಥಿಕ ನೆರವು ನೀಡುವುದಕ್ಕಾಗಿ ನಬಾರ್ಡ್ ಜತೆಗೇ ಎನ್‌ಸಿಡಿಸಿ ಕೂಡ ಕೈಜೋಡಿಸುತ್ತಿದೆ. ಹಾಗೆಯೇ, ಸಹಕಾರ ಕ್ಷೇತ್ರದಲ್ಲಿ ರಾಜ್ಯಗಳ ಹೊಣೆಗಾರಿಕೆಯನ್ನು ಹೆಚ್ಚಿಸುವುದಕ್ಕಾಗಿ ಬಿಲ್ ಸಿದ್ಧಪಡಿಸಲಾಗಿದ್ದು, ಸ್ಥಾಯಿ ಸಮಿತಿ ಮುಂದೆ ಇದೆ. ಹಾಗೆಯೇ ರಾಜ್ಯಗಳು ಕೂಡ ತಮ್ಮ ಕಾನೂನುಗಳಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಶಾ ಕರೆ ನೀಡಿದರು.
ಈ ಮೊದಲು ಸಹಕಾರಿ ಸಂಸ್ಥೆಗಳೂ ಕಂಪನಿಗಳು ರೀತಿಯಲ್ಲಿ ಅಧಿಕ ತೆರಿಗೆಯನ್ನು ಭರಿಸುತ್ತಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ತೆರಿಗೆ ಭಾರವನ್ನು ಕಡಿಮೆ ಮಾಡಿದ್ದಾರೆ. ಶೇ.12ರಷ್ಟು ಕಡಿಮೆ ಮಾಡಿ, ತೆರಿಗೆಯನ್ನು ಶೇ.7ಕ್ಕೆ ಸ್ಥಿರಗೊಳಿಸಿದ್ದಾರೆ ಎಂದು ಶಾ ಹೇಳಿದರು.
ಕರ್ನಾಟಕ ಮಾದರಿಯಾಗಲಿ
ಸಹಕಾರ ಕ್ಷೇತ್ರದಲ್ಲಿ ಕರ್ನಾಟಕವು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಇದು ಮಾದರಿ ರಾಜ್ಯವಾಗಬೇಕು. ಇಲ್ಲಿನ ಅತ್ಯುತ್ತಮ ಪದ್ಧತಿಗಳನ್ನು ಬೇರೆ ರಾಜ್ಯಗಳೂ ಅಳವಡಿಸಿಕೊಳ್ಳುವಂತಾಗಬೇಕು. ಮೋದಿ ಅವರ ಪ್ರಯತ್ನದಿಂದಾಗಿ ಯಾವ ರಾಜ್ಯವು ಸಹಕಾರಿ ಕ್ಷೇತ್ರದಲ್ಲಿ ಹಿಂದೆ ಬಿದ್ದಿದೆಯೋ ಆ ರಾಜ್ಯಗಳು ಕೂಡ ಈ ನಿಟ್ಟಿನಲ್ಲಿ ದಾಪುಗಾಲು ಹಾಕಲು ಸಾಧ್ಯವಾಗಲಿದೆ ಎಂದರು.
ಸಹಕಾರಿ ಆಂದೋಲನಕ್ಕೆ ಸಂಬಂಧಿಸಿದಂತೆ ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕವು ದೇಶದ ಇತರ ರಾಜ್ಯಗಳಿಗೆ ಮಾದರಿ ರಾಜ್ಯವಾಗಿದೆ. ಹಾಗಿದ್ದೂ ಪಾರದರ್ಶಕ ಆಡಳಿತವನ್ನು ಅನುಸರಿಸಿಕೊಳ್ಳುವ ಮೂಲಕ ಮೇಲ್ಪಂಕ್ತಿ ಹಾಕಿಕೊಡಬೇಕು. ಇಲ್ಲಿನ ಸಹಕಾರಿ ಕ್ಷೇತ್ರದಲ್ಲಿನ ಆಡಳಿತ ಪದ್ಧತಿಗಳನ್ನು ಇತರ ರಾಜ್ಯಗಳು ಅನುಸರಿಸುವಂತಾಗಬೇಕು ಎಂದು ಸಚಿವ ಅಮಿತ್ ಶಾ ಅವರು ಹೇಳಿದರು.
ರೈತ ಕೇಂದ್ರೀತ ಯೋಜನೆಗಳು
ಮೋದಿ ಆಡಳಿತ ಬಂದ ಮೇಲೆ ರೈತ ಕೇಂದ್ರೀತ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಹಕಾರಿ ಸಚಿವಾಲಯವು ಈ ನಿಟ್ಟಿನಲ್ಲಿ ಸಾಕಷ್ಟು ನಿರ್ಧಾರಗಳನ್ನು ಕೈಗೊಂಡಿದೆ. ಪಾದರ್ಶಕ ಆಡಳಿತಕ್ಕಾಗಿ ಗಣಕೀಕರಣ ಮಾಡಲು ನಿರ್ಧಾರಿಸಲಾಗಿದೆ. ದೇಶದಲ್ಲಿನ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಸಹಕಾರಿ ಸಮಿತಿಗಳನ್ನು ಆರಂಭಿಸಲಾಗುವುದು. ಈ ಸಂಸ್ಥೆಯು ಎಲ್ಲ ರೀತಿಯ ಸಹಕಾರಿ ಕೆಲಸಗಳನ್ನು ಮಾಡಲಿದೆ. ಮುಂದಿನ ಮೂರು ವರ್ಷಗಳಲ್ಲಿ 2 ಲಕ್ಷ ಸಹಕಾರಿ ಸಂಘಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದರು. ಇದರಿಂದ ಸಹಕಾರಿ ಕ್ಷೇತ್ರದ ಫಲಾನುಭವಿಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ | Amit Shah | ಮುಂದಿನ 3 ವರ್ಷದಲ್ಲಿ ದೇಶದ ಎಲ್ಲ ಪಂಚಾಯಿತಿಗಳಲ್ಲಿ ಡೇರಿ ಸ್ಥಾಪನೆ: ಸಚಿವ ಅಮಿತ್ ಶಾ ಭರವಸೆ