ಸೊರಬ: ಬಿಜೆಪಿಯ ತತ್ತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿರುವ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ (Soraba News) ಪಕ್ಷಕ್ಕೆ ಹಿನ್ನೆಡೆ ಖಚಿತ. ಈ ಹಿನ್ನೆಲೆಯಲ್ಲಿ ಟಿಕೆಟ್ ನೀಡದಂತೆ ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ನಮೋ ವೇದಿಕೆಯ ತಾಲೂಕು ವಿಶೇಷ ಆಹ್ವಾನಿತ, ವಕೀಲ ಎಂ.ಕೆ. ಯೋಗೇಶ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ (ಜ.೨೭) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದವರು ಎಂದು ಕುಮಾರ್ ಬಂಗಾರಪ್ಪ ಅವರು ಈ ಹಿಂದೆ ಹೇಳುತ್ತಿದ್ದರು. ಆದರೆ, ಅಂತಹ ನಾಯಕರಿಗೂ ಗೌರವ ನೀಡದೆ ವರ್ತಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಬಿಎಸ್‍ವೈ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಕೊಡುಗೆ ಸಾಕಷ್ಟಿದೆ. ನೂರಾರು ಕೋಟಿ ರೂ., ಅನುದಾನ ನೀಡಿದ್ದಾರೆ. ಆದರೆ, ಶಾಸಕರು ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಮತ್ತು ಉದ್ಘಾಟನೆ ಸಂದರ್ಭಗಳಲ್ಲಿ ಅನುದಾನಗಳನ್ನು ನೀಡಲು ಕಾರಣೀಕರ್ತರಾದವರಿಗೆ ಕೃತಜ್ಞತೆ ಸಹ ಸಲ್ಲಿಸುತ್ತಿಲ್ಲ. ಟಿಕೆಟ್ ನೀಡುವುದು ದೆಹಲಿ ನಾಯಕರು ಎನ್ನುವ ಭ್ರಮೆ ಕುಮಾರ್ ಅವರಲ್ಲಿದೆ. ಆದರೆ, ಜಿಲ್ಲೆಯ ವಿಷಯದಲ್ಲಿ ಯಡಿಯೂರಪ್ಪ ಅವರೇ ಬಿಜೆಪಿಗೆ ಹೈಕಮಾಂಡ್ ಇದ್ದಂತೆ ಎನ್ನುವುದನ್ನು ಮರೆಯಬಾರದು ಎಂದರು.
ಇದನ್ನೂ ಓದಿ | Basavaraj Bommai Birthday Special : ಬೆರಳ ತುದಿಯಲ್ಲೇ ಕಾನೂನು, ನೀರಾವರಿ, ಗಡಿ ಮಾಹಿತಿ ಹೊಂದಿದ ಗಣಿ ಬೊಮ್ಮಾಯಿ
ಕ್ಷೇತ್ರದಲ್ಲಿ ಎಲ್ಲ ರೀತಿಯ ಸಮೀಕ್ಷೆಗಳು ಶಾಸಕರ ವಿರುದ್ಧವಾಗಿಯೇ ಬಂದಿವೆ. ತಾಲೂಕಿನಲ್ಲಿ ಅಧಿಕಾರಿಗಳು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರಿಗೂ ಗೌರವ ನೀಡುವ ಸೌಜನ್ಯವಿಲ್ಲ. ಸುಮಾರು 14 ಜನ ತಹಸೀಲ್ದಾರರ ಬದಲಾವಣೆ ಆಗಿರುವುದು ತಾಲೂಕಿನ ದೌರ್ಭಾಗ್ಯ ಎನ್ನಬಹುದು. ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವಲ್ಲಿ ಹಿನ್ನಡೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರಕ್ಕೂ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಹಿಂದು ವಿರೋಧಿ, ಜನ ವಿರೋಧಿ, ಅಧಿಕಾರಿಗಳ ವಿರೋಧಿಯಾಗಿರುವ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವಿದ್ದರೆ ಬೇರೆ ಪಕ್ಷದಿಂದ ಸ್ಪರ್ಧಿಸಲಿ. ಆದರೆ, ಬಿಜೆಪಿಯಿಂದ ಸ್ಪರ್ಧಿಸಿ ಸೋಲುಣ್ಣುವ ಮೂಲಕ ಪಕ್ಷಕ್ಕೆ ಮುಜುಗರ ತರುವುದು ಬೇಡ. ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ. ಆದರೆ, ಕುಮಾರ್ ಸ್ಪರ್ಧಿಸಿದರೆ ಸೋಲು ಖಚಿತ ಎನ್ನುವುದನ್ನು ವರಿಷ್ಠರು ಗಮನಿಸಬೇಕು. ಈ ಹಿಂದೆ 2008ರಲ್ಲಿ ಪಕ್ಷದ ಸಣ್ಣಮಟ್ಟದ ಕಾರ್ಯಕರ್ತರು ಒಗ್ಗೂಡಿ ಚುನಾವಣೆ ಎದುರಿಸಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿದ ಅನುಭವ ಇರುವ ಪಡೆ ನಮ್ಮೊಂದಿಗೆ ಇದೆ ಎಂದರು.
ಇದನ್ನೂ ಓದಿ | U19 Women’s T20 World Cup : ಇಂಗ್ಲೆಂಡ್ ವಿರುದ್ಧ ಗೆದ್ದು ವಿಶ್ವ ಚಾಂಪಿಯನ್ ಪಟ್ಟ ಗಳಿಸುವುದೇ ಭಾರತ?
ನಮೋ ವೇದಿಕೆಯ ಕಾರ್ಯಕರ್ತರು ಬಿಜೆಪಿಯಲ್ಲಿಲ್ಲ ಎನ್ನುವ ಕುರಿತು ಕೆಲವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ನಮೋ ವೇದಿಕೆ ರಚನೆಯಾದ ತರುವಾಯ ಪಕ್ಷ ನೀಡಿದ ಜವಾಬ್ದಾರಿಗಳಿಂದ ಮುಕ್ತಿಗೊಳಿಸಲಾಗಿದೆ ವಿನಃ ಪಕ್ಷದ ಸದಸ್ಯತ್ವದಿಂದಲ್ಲ. ಕುಮಾರ್ ಬಂಗಾರಪ್ಪ ಅವರಲ್ಲಿನ ಸಮನ್ವಯತೆಯ ಕೊರತೆಯನ್ನು ನೀಗಿಸಲು ಜಿಲ್ಲಾ ಮುಖಂಡರು ಸಂಘ-ಪರಿವಾರದ ಹಿನ್ನೆಲೆಯ ಪ್ರಕಾಶ್ ತಲಕಾಲಕೊಪ್ಪ ಅವರಿಗೆ ತಾಲೂಕು ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಸಹ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿಯೇ ನಡೆದಿದೆ. ತಲಕಾಲಕೊಪ್ಪ ಅವರಿಂದ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಇವರು ಶಾಸಕರ ಜೊತೆಗೆ ಹೊಂದಿಕೊಂಡರು. ನಮ್ಮ ನಿರೀಕ್ಷೆ ಹುಸಿಗೊಳಿಸಿದರು. ಪ್ರಸ್ತುತ ಈಗಲೂ ರಾಜ್ಯ ಮಟ್ಟದಲ್ಲಿ ತಾಲೂಕು ಅಧ್ಯಕ್ಷರಾಗಿ ಗುರುಪ್ರಸನ್ನ ಗೌಡ ಮತ್ತು ಪದಾಧಿಕಾರಿಗಳ ಪಟ್ಟಿಯೇ ಚಾಲ್ತಿಯಲ್ಲಿದೆ. ಪ್ರಕಾಶ್ ತಲಕಾಲಕೊಪ್ಪ ಪಕ್ಷದಿಂದ ನಾಮನಿರ್ದೇಶಿತಗೊಂಡ ಅಧ್ಯಕ್ಷ ಎಂದರು.
ಇದನ್ನೂ ಓದಿ | Pathaan Movie: ಮೂರು ದಿನಗಳಲ್ಲಿ ಬಾಹುಬಲಿ-2, ಕೆಜಿಎಫ್-2 ದಾಖಲೆ ಮುರಿದ ಪಠಾಣ್!
ಸುದ್ದಿಗೋಷ್ಠಿಯಲ್ಲಿ ನಮೋ ವೇದಿಕೆಯ ತಾಲೂಕು ಕಾರ್ಯದರ್ಶಿ ಅರುಣ್ ಕುಮಾರ್ ಪುಟ್ಟನಹಳ್ಳಿ, ಟೌನ್ ಅಧ್ಯಕ್ಷ ಸಂಜೀವ್ ಆಚಾರ್, ಪ್ರಮುಖರಾದ ಗೌರಮ್ಮ ಭಂಡಾರಿ, ಚಂದ್ರಪ್ಪ ಬರಗಿ, ಚಂದ್ರಪ್ಪ ಅಂಗಡಿ, ಡಿ. ಶಿವಯೋಗಿ, ಮೋಹನ್ ಹಿರೇಶಕುನ, ರಾಮಚಂದ್ರ, ಬಸವರಾಜ, ಹರೀಶ್, ಪುನೀತ್ ಇದ್ದರು.
ಇದನ್ನೂ ಓದಿ | IAF Fighter Jets Crash: ಭಾರತೀಯ ವಾಯುಪಡೆಯ 2 ಯುದ್ಧ ವಿಮಾನಗಳು ಮಧ್ಯಪ್ರದೇಶದಲ್ಲಿ ಪತನ; ಪೈಲೆಟ್ಗಳು ಆಸ್ಪತ್ರೆಗೆ ದಾಖಲು