Site icon Vistara News

Soraba News | ಶಾಸಕರಿಂದ ಮನೆ ಮುರಿಯುವ ಕೆಲಸ: ಮಧು ಬಂಗಾರಪ್ಪ ಆರೋಪ

Madhu Bangarappa Political Meeting of Congress workers

ಸೊರಬ: ಗೆಲುವು ಸಾಧಿಸಿ ನಾಲ್ಕು ವರ್ಷ ಕಳೆದರೂ ಇಲ್ಲಿನ ಶಾಸಕರು ಬಡವರನ್ನು ಗುರುತಿಸಿ, ಅರ್ಹರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡುವ ಬದಲಾಗಿ ಈಗಿನ ಶಾಸಕರು ಎಲ್ಲೆಂದರಲ್ಲಿ ಬಡವರ ಮನೆ ಮುರಿಯುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.

ತಾಲೂಕಿನ ಜಡೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಜನರಿಗೆ ಅನಾವಶ್ಯಕ ತೊಂದರೆ ನೀಡಿ ರಾಜಕಾರಣ ಮಾಡುವವರು ಎಂದಿಗೂ ಜನನಾಯಕ ಎಂದು ಕರೆಸಿಕೊಳ್ಳವುದಿಲ್ಲ. ವಿಶ್ವಾಸವಿಟ್ಟು ಗೆಲುವು ತಂದುಕೊಟ್ಟ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವವನು ನಿಜವಾದ ಜನ ಸೇವಕನಾಗಿ ಜನರಿಂದ ಜನ ನಾಯಕ ಎಂದು ಕರೆಸಿಕೊಳ್ಳುತ್ತಾನೆ ಎಂದರು.

ಗೆಲುವು ಸಾಧಿಸಿ ನಾಲ್ಕು ವರ್ಷ ಕಳೆದರೂ ಇಲ್ಲಿನ ಶಾಸಕರು ಅರ್ಹರನ್ನು ಗುರುತಿಸಿ ಮನೆ ಕೊಡಲು ಸಾಧ್ಯವಿಲ್ಲದವರು ಬಡವರ ಬಗ್ಗೆ ಚಿಂತನೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. “ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ತಾಲೂಕಿನ ಜನತೆಗಾಗಿ ಸಾವಿರಾರು ಮನೆಗಳನ್ನು ಕಟ್ಟಿಕೊಟ್ಟಿದ್ದೇನೆ. ರೈತರಿಗೆ ಕೊಳವೆ ಬಾವಿ, ಬಗರ್‌ಹುಕುಂ ಮಂಜೂರಾತಿ ಹಾಗೂ ತಾಲೂಕಿನ ನೀರಾವರಿ ಯೋಜನೆಗಳಾದ ಕಚವಿ, ಮೂಗೂರು ಮತ್ತು ಮೂಡಿ ಏತ ನೀರಾವರಿಗಾಗಿ ಪಾದಯಾತ್ರೆ ನಡೆಸುವ ಮೂಲಕ ಆಡಳಿತಾತ್ಮಕ ಅನುಮೋದನೆ ಪಡೆದು ಯೋಜನೆಗಳು ಜಾರಿಗೆ ಬರುವಂತೆ ಸರ್ಕಾರದ ಗಮನಕ್ಕೆ ತಂದಿದ್ದೇನೆ.
ಬಡವರಿಗಾಗಿ ಮತ್ತು ರೈತರು ಸೇರಿದಂತೆ ಪ್ರತಿಯೊಂದು ವರ್ಷಕ್ಕೂ ಅನೇಕ ರೀತಿಯ ಸವಲತ್ತುಗಳನ್ನು ನೀಡಿದ್ದೇನೆ. ಆದರೆ, ಯಾರಿಗೂ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಹೀಗಿದ್ದೂ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಈಗಿನ ಶಾಸಕರು ಎಲ್ಲೆಂದರಲ್ಲಿ ಬಡವರ ಮನೆ ಮುರಿಯುವ ಕೆಲಸಕ್ಕೆ ಕೈಹಾಕಿದ್ದಾರೆ” ಎಂದು ಆರೋಪಿಸಿದರು.

“ಸೊರಬ ಎಸ್. ಬಂಗಾರಪ್ಪ ಅವರನ್ನು ರಾಜಕೀಯವಾಗಿ ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ ತಾಲೂಕು. ಈ ಕ್ಷೇತ್ರದ ಜನತೆಯ ಋಣವನ್ನು ಎಂದಿಗೂ ಮರೆಯುವುದಿಲ್ಲ. ತಂದೆಯವರು ನಾನು ರಾಜಕಾರಣಕ್ಕೆ ಬರುವ ಮೊದಲು ನನ್ನನ್ನು ತಮ್ಮೆಲ್ಲರ ಮಡಿಲಿಗೆ ಹಾಕಿ ಹೋಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನ್ನ ಸೋಲು ಮುಖ್ಯವಲ್ಲ. ಸೋತ ಮಾತ್ರಕ್ಕೆ ನಿಮ್ಮ ಕೈ ಬಿಡುವುದಿಲ್ಲ. ನಿಮ್ಮ ಸೇವೆ ಮಾಡಲು ಎಸ್. ಬಂಗಾರಪ್ಪನವರು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಬಾರಿ ಜನತೆ ತಮ್ಮ ಕೈ ಹಿಡಿಯುತ್ತಾರೆ ಎಂಬ ಭರವಸೆ ನನಗಿದೆ. ಆಶೀರ್ವದಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ” ಎಂದರು.

ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ, ಮಾಜಿ ತಾ.ಪಂ. ಸದಸ್ಯ ಸುರೇಶ ಹಾವಣ್ಣನವರ್, ಆನವಟ್ಟಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರುದ್ರಗೌಡ, ಜಡೆ ಬೂತ್ ಅಧ್ಯಕ್ಷ ಪ್ರವೀಣ್, ಅಶೋಕ್ ಸುಣಗಾರ್, ವೀರೇಂದ್ರ ಪಾಟೀಲ್, ಗಣಪತಿ, ರವಿ ಮೇದಾರ್, ಈರಪ್ಪ, ಮಕ್ಬೂಲ್ ಸಾಬ್, ಪಕ್ಕೀರಪ್ಪ, ರಿಯಾಜ್, ಸಂಜು ತರಕಾರಿ ಸೇರಿದಂತೆ ವಿವಿಧ ಘಟಕಗಳ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.

ಇದನ್ನೂ ಓದಿ | Border Dispute | ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿ: ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ

Exit mobile version