Site icon Vistara News

Aam Aadmi Party | ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ, ಕೀರ್ತನ್​ ಸೇರ್ಪಡೆ; ಭವ್ಯ ಭಾರತದ ಸಂಕಲ್ಪ

Aam Aadmi Party

ಬೆಂಗಳೂರು: ಕಾಂಗ್ರೆಸ್​ ಹಿರಿಯ ನಾಯಕ, ಸೌಂದರ್ಯ ಎಜುಕೇಶನಲ್​ ಟ್ರಸ್ಟ್​ನ ಸಂಸ್ಥಾಪಕ ಅಧ್ಯಕ್ಷ ಸೌಂದರ್ಯ ಮಂಜಪ್ಪ ಮತ್ತು ಅವರ ಪುತ್ರ, ಯುವ ಉದ್ಯಮಿ ಎಂ.ಕೀರ್ತನ್​ ಕುಮಾರ್​ ಅವರು ಶುಕ್ರವಾರ (ಆ.೫) ಆಮ್​ ಆದ್ಮಿ ಪಕ್ಷಕ್ಕೆ (Aam Aadmi Party) ಸೇರ್ಪಡೆಯಾದರು.

ಬೆಂಗಳೂರಿನ ಪರಾಗ್​ ಹೋಟೆಲ್​​ನಲ್ಲಿ, ಆಮ್​ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್​ ರಾವ್​ ಸಮ್ಮುಖದಲ್ಲಿ ಆಪ್​ಗೆ ಸೇರ್ಪಡೆಯಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪಕ್ಷಕ್ಕೆ ಸೇರ್ಪಡೆಯಾಗಬೇಕು. ಆ ಮೂಲಕ ಕನಸಿನ ಭವಿಷ್ಯವನ್ನು ನಿರ್ಮಾಣ ಮಾಡಬೇಕು ಎಂದು ಕರೆಕೊಟ್ಟಿದ್ದಾರೆ.

ಶಿಕ್ಷಣ ತಜ್ಞ, ಉದ್ಯಮಿ ಸೌಂದರ್ಯ ಮಂಜಪ್ಪ

ಸೌಂದರ್ಯ ಮಂಜಪ್ಪ ಅವರು ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದವರು. ಕೆಪಿಸಿಸಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದರು. ಇವರು ಸ್ಥಾಪಿಸಿದ ಸೌಂದರ್ಯ ಎಜುಕೇಶನಲ್​ ಟ್ರಸ್ಟ್​ನಲ್ಲಿ ಹಾಲಿ 6 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ 500 ಮಂದಿಗೆ ಉದ್ಯೋಗ ನೀಡಿದ್ದು, ಹೋಟೆಲ್​ ಉದ್ಯಮವನ್ನೂ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ದಾಸರಹಳ್ಳಿ ಕ್ಷೇತ್ರದಲ್ಲಿರುವ ಸೌಂದರ್ಯ ನಗರ ನಿವಾಸಿಗಳ ಹಿತರಕ್ಷಣಾ ಸಂಘಟನೆಯ ಗೌರವಾಧ್ಯಕ್ಷರಾಗಿದ್ದಾರೆ. ಅಲ್ಲದೆ, ಕರಾವಳಿ ಮಿತ್ರಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಾವನೂರು ಎಕ್ಸ್​ಟೆನ್ಷನ್​​ನ ಅಧ್ಯಕ್ಷರೂ ಆಗಿರುವ ಇವರು, ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನೆರೆ ಸಂದರ್ಭದಲ್ಲಿ ಸಂತ್ರಸ್ತರಾದವರಿಗೆ ಆರ್ಥಿಕ ಸಹಾಯ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಬಡವರಿಗೆ ಪಡಿತರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ರಿಯಾಯಿತಿ ಶಿಕ್ಷಣ ನೀಡುವ ಮೂಲಕ ಸಮಾಜ ಸೇವೆಯಲ್ಲೂ ತಮ್ಮ ಕೊಡುಗೆಯನ್ನು ನೀಡುತ್ತಿದ್ದು, ರಾಜಕೀಯವಾಗಿಯೂ ಸಾಕಷ್ಟು ಸೇವೆ ಮಾಡುವ ಆಶಯವನ್ನು ಹೊಂದಿದ್ದಾರೆ.

ಇದನ್ನೂ ಓದಿ | ಮುಖ್ಯಮಂತ್ರಿ ಚಂದ್ರುಗೆ ಆಮ್‌ ಆದ್ಮಿ ಪಕ್ಷದ ರಾಜ್ಯಮಟ್ಟದ ಹೊಣೆಗಾರಿಕೆ

ಯುವ ಉದ್ಯಮಿ ಕೀರ್ತನ್‌ ಕುಮಾರ್

ಸೌಂದರ್ಯ ಮಂಜಪ್ಪ ಅವರ ಪುತ್ರ ಕೀರ್ತನ್​ ಕುಮಾರ್​ ಯುವ ಉದ್ಯಮಿಯಾಗಿದ್ದು, ಸೌಂದರ್ಯ ಎಜುಕೇಶನಲ್​ ಟ್ರಸ್ಟ್​​ನ ಸಿಇಒ ಸಹ ಆಗಿದ್ದಾರೆ. ಲಂಡನ್​​ನಲ್ಲಿ ವ್ಯಾಸಂಗ ಮಾಡಿರುವ ಇವರು, ಅಲ್ಲಿನ ಶೈಕ್ಷಣಿಕ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ.

ಆಗಬೇಕಿದೆ ಕೇಜ್ರಿವಾಲ್​ ಮಾದರಿಯ ರಾಜಕೀಯ ಆಂದೋಲನ

ಆಪ್‌ ಸೇರ್ಪಡೆ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಕೀರ್ತನ್‌ ಕುಮಾರ್‌, “ಭಾರತೀಯರಿಗೆ ಪ್ರತಿಭೆಯ ಕೊರತೆಯಿಲ್ಲ. ಆದರೆ, ಅವಕಾಶದ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಇಲ್ಲಿನ ಕೆಟ್ಟ ರಾಜಕಾರಣವೇ ಕಾರಣ. ನಾವು ಕೊಡುವ ಆಡಳಿತ, ಯುವಕರಿಗೆ ಅವಕಾಶಗಳನ್ನು ಸೃಷ್ಟಿಸಿಕೊಡುವಂತೆ ಇರಬೇಕು. ಹಾಗಾದಾಗ ನಾವು ಜಗತ್ತನ್ನೇ ಗೆಲ್ಲಬಹುದು. ಹೀಗಾಗಬೇಕು ಎಂದರೆ ಕೇಜ್ರಿವಾಲ್​ ಮಾದರಿಯ ರಾಜಕೀಯ ಆಂದೋಲನವಾಗಬೇಕು. ಆ ನಿಟ್ಟಿನಲ್ಲಿ ನಾನೂ ನೇರವಾಗಿ ಭಾಗವಹಿಸಬೇಕು ಎಂದೆನಿಸಿತು. ಅದೇ ಕಾರಣಕ್ಕಾಗಿ ಆಪ್​​ಗೆ ಸೇರ್ಪಡೆಯಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ದೆಹಲಿ ಮತ್ತು ಪಂಜಾಬ್​ ರಾಜ್ಯಗಳಲ್ಲಿನ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷ ಮಾಡಿರುವ ಕ್ರಾಂತಿಯನ್ನು ನಾವು ಗಮನಿಸಿದ್ದೇವೆ. ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಕರ್ಯ ಒದಗಿಸಿಕೊಟ್ಟಿದ್ದಲ್ಲದೆ, Happiness ಪಠ್ಯಕ್ರಮ, Business Blaster (ಶಿಕ್ಷಣಕ್ಕೆ ಸಂಬಂಧಪಟ್ಟ ಟಿವಿ ಕಾರ್ಯಕ್ರಮ), ಶಿಕ್ಷಕರಿಗೆ ತರಬೇತಿ ಮತ್ತಿತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಇಂಥವುಗಳೆಲ್ಲ ಭಾರತದ ಭವಿಷ್ಯವನ್ನೇ ಬದಲಿಸಲಿವೆ’ ಎಂದೂ ಕೀರ್ತನ್​ ಹೇಳಿದ್ದಾರೆ.

ಯುವಕರು ರಾಜಕೀಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವ ಜನತೆ ಜವಾಬ್ದಾರಿಯನ್ನು ತೆಗೆದುಕೊಂಡಾಗ ಮಾತ್ರ ಕನಸಿನ ಭವಿಷ್ಯವನ್ನು ನಿರ್ಮಾಣ ಮಾಡಬಹುದು. ಈ ರೀತಿಯ ವಾತಾವರಣ, ಅವಕಾಶ ಕಲ್ಪಿಸುವ ಶಕ್ತಿ ಇರುವುದು ಆಮ್‌ ಆದ್ಮಿ ಪಾರ್ಟಿಗೆ ಮಾತ್ರ ಇದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Party Join | ಆಮ್‌ ಆದ್ಮಿ ಪಾರ್ಟಿ ಸೇರಿದ ಟೆನಿಸ್‌ ಕೃಷ್ಣ

Exit mobile version