Site icon Vistara News

Sowjanya Murder : ಸೌಜನ್ಯ ಸಾವಿಗೆ ನ್ಯಾಯ ಒದಗಿಸಿ; ಸರ್ಕಾರ, ಸಿಬಿಐಗೆ ಡಾ. ಡಿ ವೀರೇಂದ್ರ ಹೆಗ್ಗಡೆ ಮನವಿ, ವಿಹಿಂಪ ಬೆಂಬಲ

Sowjanya murder case

ಮಂಗಳೂರು: 2012ರಲ್ಲಿ ಧರ್ಮಸ್ಥಳ ಸಮೀಪದ ಪಾಂಗಾಳದಲ್ಲಿ ನಡೆದ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಹತ್ಯೆ (Sowjanya Murder) ಪ್ರಕರಣದ ತನಿಖೆಯನ್ನು ನಡೆಸಿದ ಕೇಂದ್ರೀಯ ತನಿಖಾ ಮಂಡಳಿ (Central bureau of Investigation -CBI) ಆರೋಪಿಯೊಂದು ಗುರುತಿಸಲಾದ ಸಂತೋಷ್‌ ರಾವ್‌ (Santosh Rao) ಅವರನ್ನು ದೋಷಮುಕ್ತಗೊಳಿಸಿದೆ. ಪೊಲೀಸರು ಅಂದು ಸಂತೋಷನೇ ಕೊಲೆಗಾರ ಎಂದು ಹೇಳಿತ್ತು. ಈಗ ಸಿಬಿಐ ಆತನನ್ನು ದೋಷಮುಕ್ತಗೊಳಿಸಿದೆ. ಹಾಗಿದ್ದರೆ ಸೌಜನ್ಯಳನ್ನು ಕೊಂದವರು ಯಾರು ಎನ್ನುವ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂಬ ಆಗ್ರಹ ಜೋರಾಗಿದೆ. ಇದಕ್ಕೆ ಧರ್ಮಸ್ಥಳದ (Sri Kshetra Dharmasthala) ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Dr. D Veerendra Heggade) ಅವರೂ ಧ್ವನಿಗೂಡಿಸಿದ್ದಾರೆ.

ಸಂತೋಷ್‌ ರಾವ್‌ ಖುಲಾಸೆಯ ಬಳಿಕ ಕೆಲವು ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಮತ್ತೆ ಧರ್ಮಸ್ಥಳ ಕ್ಷೇತ್ರದತ್ತ ಬೆಟ್ಟು ಮಾಡುತ್ತಿರುವುದರಿಂದ ಪ್ರಕರಣದ ಸಮಗ್ರ ತನಿಖೆಯಾಗಲಿ ಎಂಬ ಅಭಿಪ್ರಾಯವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಪತ್ರಿಕಾ ಹೇಳಿಕೆಯನ್ನೇ ಬಿಡುಗಡೆ ಮಾಡಿದ್ದಾರೆ.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪತ್ರಿಕಾ ಹೇಳಿಕೆಯಲ್ಲಿ ಏನಿದೆ?

  1. 2012ರಲ್ಲಿ ನಡೆದ ಪಾಂಗಳದ ನಿವಾಸಿ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯಳ ಹತ್ಯೆಯ ಪ್ರಕರಣದಲ್ಲಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಸಿ.ಐ.ಡಿ. ನಂತರದಲ್ಲಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ. ಮೂಲಕ ತನಿಖೆ ನಡೆಸುವಂತೆ ಸರಕಾರವನ್ನು ಶ್ರೀಕ್ಷೇತ್ರದ ಪರವಾಗಿ ಮತ್ತು ನಮ್ಮ ಕುಟುಂಬಸ್ಥರ ಪರವಾಗಿ ಒತ್ತಾಯಿಸಲಾಗಿತ್ತು.
  2. ಹಾಗೂ ಅದರಂತೆ ಸರ್ಕಾರ ಸದರಿ ಪ್ರಕರಣವನ್ನು ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಿರುತ್ತದೆ. ಅದರಂತೆ ತನಿಖೆ ನಡೆಸಿ, ಸದರಿ ಇಲಾಖೆ ಆರೋಪ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ನಂತರದಲ್ಲಿ ಮಾನ್ಯ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿತನನ್ನು ಸದರಿ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದು, ತಿಳಿದಿದೆ.
  3. ಆ ನಂತರದಲ್ಲಿ ಕೆಲವು ವ್ಯಕ್ತಿಗಳು ಶ್ರೀ ಕ್ಷೇತ್ರವನ್ನು ಹಾಗೂ ನಮ್ಮ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಸುಳ್ಳು ಆರೋಪ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದರಿಂದ ಶ್ರೀ ಕ್ಷೇತ್ರದ ಭಕ್ತರಲ್ಲಿ ಹಾಗು ಕ್ಷೇತ್ರದೊಂದಿಗೆ ತೊಡಗಿಸಿಕೊಂಡಿರುವ ಅನೇಕರಿಗೆ ಖೇದ ಉಂಟಾಗಿದೆ.
  4. ಈ ಪತ್ರಿಕಾ ಹೇಳಿಕೆ ಮೂಲಕ ಸಮಸ್ತ ಭಕ್ತಾದಿಗಳಲ್ಲಿ ಹಾಗೂ ಸಾರ್ವಜನಿಕರ ಗಮನಕ್ಕೆ ತರ ಬಯಸುವುದೆಂದರೆ ಈ ಪ್ರಕರಣದ ಬಗ್ಗೆ ಶ್ರೀ ಕ್ಷೇತ್ರದ ವತಿಯಿಂದ ಈಗಾಗಲೇ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಹಾಗು ಅದರಂತೆ ಸರ್ಕಾರ ಸದರಿ ಪ್ರಕರಣವನ್ನು ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಿರುತ್ತದೆ.
  5. ಆ ಪ್ರಕಾರ ಸರ್ಕಾರ ಅತ್ಯುನ್ನತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿ, ನ್ಯಾಯಾಲಯಕ್ಕೆ ಪ್ರಕರಣವನ್ನು ವಿಚಾರಣೆಗಾಗಿ ಒಳಪಡಿಸಿರುತ್ತದೆ.
  6. ಪ್ರಸ್ತುತ ಸದರಿ ವಿಚಾರವು ನ್ಯಾಯಾಲಯ, ಸರ್ಕಾರ ಮತ್ತು ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿ ಇರುವುದರಿಂದ ಕು. ಸೌಜನ್ಯಳ ಸಾವಿಗೆ ಸಂಬಂಧಿಸಿದಂತೆ ಮಾನ್ಯ ಸರ್ಕಾರ ಹಾಗು ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಿ ಕೊಡುವಂತೆ ಒತ್ತಾಯಿಸುತ್ತೇನೆ.
  7. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಹಾಗೂ ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹಚ್ಚಿಸುತ್ತಿರುವುದರ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಬೇಡಿ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

ಸೌಜನ್ಯ ಪ್ರಕರಣಕ್ಕೆ ಎಂಟ್ರಿ ಕೊಟ್ಟ ವಿಶ್ವ ಹಿಂದೂ ಪರಿಷತ್

ಈ ನಡುವೆ ಸೌಜನ್ಯ ಪ್ರಕರಣಕ್ಕೆ ವಿಶ್ವ ಹಿಂದೂ ಪರಿಷತ್‌ ಎಂಟ್ರಿ ಕೊಟ್ಟಿದೆ. ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶ್ವ ಹಿಂದೂ ಪರಿಷತ್‌ ನಾಯಕರು, ಪ್ರಕರಣ ಇತ್ಯರ್ಥ ಆಗದೆ ಇರುವುದು ವ್ಯವಸ್ಥೆಗೆ ಕಪ್ಪು ಚುಕ್ಕೆ. ಹಾಲಿ ನ್ಯಾಯಧೀಶರಿಂದ ನ್ಯಾಯಾಂಗ ತನಿಖೆ ಆಗಲಿ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಮುಖಂಡ ಎಂ.ಬಿ. ಪುರಾಣಿಕ್ ಅವರು, ಯಾವ ರೀತಿ ತನಿಕೆ ಆಗಬೇಕು ಅನ್ನೋದು ವ್ಯವಸ್ಥೆಗೆ ಬಿಟ್ಟಿದ್ದು. ನಿಜವಾದ ಆರೋಪಿ ಯಾರು ಎಂದು ಗೊತ್ತಾಗಬೇಕು. ಆರೋಪಿಗಳಿಗೆ ಶಿಕ್ಷೆಯಾಗದೆ ಪ್ರಕರಣ ಅಂತ್ಯವಾಗೋದಿಲ್ಲ ಎಂದು ಹೇಳಿದರು.

ಎಲ್ಲ ದೇವಸ್ಥಾನ, ದೈವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ

ʻʻಸೌಜನ್ಯ ಸಾವಿಗೆ ನ್ಯಾಯ ಒದಗಿಸುವಂತೆ ದೇವರ ಹೋಗಲು ತೀರ್ಮಾನ ಮಾಡಲಾಗಿದೆ. ಎಲ್ಲಾ ದೇವಸ್ಥಾನ ದೈವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಕಾರ್ಯಕರ್ತರ ಮೂಲಕ ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾರ್ಥನೆ ನಡೆಸಲು ತೀರ್ಮಾನಿಸಲಾಗಿದೆʼʼ ಎಂದು ಅವರು ಹೇಳಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಸಲ್ಲದು

ಈ ನಡುವೆ, ಸೌಜನ್ಯ ಸಾವಿನ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಮಾನ ಮಾಡುವುದನ್ನು ನಿಲ್ಲಿಸುವಂತೆ ವಿಹಿಂಪ ಆಗ್ರಹಿಸಿದೆ. ʻʻಧರ್ಮಸ್ಥಳ ಕ್ಷೇತ್ರಕ್ಕೆ ಅದರದ್ದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದುಕೊಂಡಿದೆ. ಧಾರ್ಮಿಕ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ಸನಾತನ ಧರ್ಮದ ರಕ್ಷಣೆ ಧರ್ಮಸ್ಥಳದಲ್ಲಿ ಆಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಅದನ್ನು ವಿಶ್ವಹಿಂದೂ ಪರಿಷತ್‌ ಸಹಿಸುವುದಿಲ್ಲʼʼ ಎಂದು ಎಂ.ಬಿ. ಪುರಾಣಿಕ್‌ ಹೇಳಿದರು.

ʻʻಕ್ಷೇತ್ರ ಹಾಗೂ ಧರ್ಮಕ್ಕೆ ಅಪಚಾರ ಆಗಬಾರದು. ಅಪಚಾರ ಆದರೆ ವಿಶ್ವ ಹಿಂದೂ ಪರಿಷತ್ ವಿರೋಧಿಸುತ್ತದೆ. ಧರ್ಮಸ್ಥಳಕ್ಕೆ ಅಪಚಾರ ಆಗುವುದನ್ನ ನಾವೂ ಸಹಿಸೋದಿಲ್ಲ. ಧರ್ಮಸ್ಥಳಕ್ಕೆ ಮುತ್ತಿಗೆ ಹಾಕುವುದನ್ನು ನಾವು ಸಹಿಸುವುದಿಲ್ಲ. ಸೌಜನ್ಯ ಪ್ರಕರಣಕ್ಕೂ ಕ್ಷೇತ್ರಕ್ಕೂ ತಾಳೆ ಹಾಕಬಾರದುʼʼ ಎಂದು ಹೇಳಿರುವ ವಿಹಿಂಪ ನಾಯಕರು,
ಯಾವ ಬೆಲೆ ಕೊಟ್ಟಾದ್ರೂ ಕ್ಷೇತ್ರದ ಪ್ರತಿಷ್ಠೆಯನ್ನು ಉಳಿಸುತ್ತೇವೆ ಎಂದರು.

ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲಿ, ಆದರೆ, ಧರ್ಮಸ್ಥಳಕ್ಕೆ ಅಪಮಾನ ಸಲ್ಲದು

ಹುಬ್ಬಳ್ಳಿ: ಸೌಜನ್ಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳು ಮಾಡಲು ಯತ್ನಿಸುತ್ತಿರುವ ಪ್ರಯತ್ನವನ್ನು ಹುಬ್ಬಳ್ಳಿಯ ವರೂರು ನವಗೃಹ ತೀರ್ಥ ಕ್ಷೇತ್ರದ ಜೈನಮುನಿ ಆಚಾರ್ಯ ಗುಣಧರನಂದಿ ಮಹಾರಾಜ್ ಆಕ್ಷೇಪಿಸಿದ್ದಾರೆ.

ʻʻಸೌಜನ್ಯ ಸಾವಿನಿಂದ ಮನಸ್ಸಿಗೆ ಬಹಳ ನೋವಾಗಿದೆ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಹೀಗಂತ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡಿದ್ರೆ ನಾನು ಸಹಿಸುವುದಿಲ್ಲʼʼ ಎಂದು ಹೇಳಿದರು.

ಒಂದು ವೇಳೆ ಹೆಗ್ಗಡೆಯವರಾಗಲೀ ಅವರ ಕುಟುಂಬವಾಗಲೀ ಅಪರಾಧಿ ಆಗಿದ್ದರೆ ಅವರನ್ನು ಬಂಧಿಸಿ ಜೈಲಿಗೆ ಹಾಕಲಿ. ಆದರೆ, ಅವರು ಅಪರಾಧಿ ಎಂದು ಯಾರೋ ನಿರ್ಧಾರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅದರದ್ದೇ ಆದ ತನಿಖಾ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಇದೆ. ನಮಗೆ ಗೃಹ ಸಚಿವರು, ಪೊಲೀಸರ ಮೇಲೆ ನಂಬಿಕೆ ಇದೆ. ಒಳ್ಳೆ ಆಡಳಿತ ನೀಡಿದ ಸಿದ್ದರಾಮಯ್ಯ ಇದಾರೆ, ಅವರ ಮೇಲೆ ನಂಬಿಕೆ ಇದೆ ಎಂದು ಗುಣಧರ ನಂದಿ ಮಹಾರಾಜರು ಹೇಳಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಪದೇಪದೆ ಅಪಪ್ರಚಾರ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಮಾನಸಿಕ ಹಿಂಸೆ ಕೂಡ ಒಂದು ದೊಡ್ಡ ಹಿಂಸೆ. ದೇಹದ ನೋವಿಗಿಂತ ಮನಸ್ಸಿಗೆ ಆಗುವ ನೋವು ಕಷ್ಟ ಕೊಡುತ್ತದೆ. ಆಧಾರ ರಹಿತವಾಗಿ ಧರ್ಮಸ್ಥಳ ಕ್ಷೇತ್ರವನ್ನು ಟಾರ್ಗೆಟ್ ಮಾಡೋದು ಸರಿಯಲ್ಲ ಎಂದು ಹೇಳಿದರು ಜೈನ ಮುನಿ ಗುಣಧರನಂದಿ ಸ್ವಾಮೀಜಿ.

ಸರ್ಕಾರಕ್ಕೆ ಜೈನ ಮುನಿಗಳ ಮನವಿ

ʻʻಅಪಪ್ರಚಾರ ಮಾಡುವವರ ಮೇಲೆ ಕ್ರಮ ಜರುಗಿಸುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಜರುಗಿಸಬೇಕುʼʼ ಎಂದು ಆಗ್ರಹಿಸಿರುವ ಅವರು, ಅವಶ್ಯಕತೆಯಿದ್ದರೆ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ನಡೆಯಲಿ ಎಂದಿದ್ದಾರೆ.

Exit mobile version