Site icon Vistara News

Karnataka Election: ಜಯನಗರ ಶಾಸಕನ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಸೌಮ್ಯಾ ರೆಡ್ಡಿ ಅರ್ಜಿ

CK Ramamurthy and Sowmya Reddy

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣಾ (Karnataka Election) ಫಲಿತಾಂಶ ವಿವಾದ ಸಂಬಂಧ ಕಾಂಗ್ರೆಸ್‌ ಮಾಜಿ ಶಾಸಕಿ, ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮೇ 13ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿತ್ತು. ಈ ವೇಳೆ ಬಿಜೆಪಿ ಅಭ್ಯರ್ಥಿ ಸಿ. ಕೆ. ರಾಮಮೂರ್ತಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ವಿರುದ್ಧ 16 ಮತಗಳಿಂದ ಗೆಲುವು ಪಡೆದಿದ್ದರು. ಆಗ 837 ಅಂಚೆ ಮತಗಳನ್ನು ಮರು ಎಣಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅಂಚೆ ಮತಗಳ ಮರು ಎಣಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ Cauvery Dispute : ಸುಪ್ರೀಂನಲ್ಲಿ ನಾಳೆ ಕಾವೇರಿ ಕದನ; ತ.ನಾಡು ಕೇಳಿದಷ್ಟು ನೀರು ಬಿಡಲಾಗದು ಎಂದ ಕರ್ನಾಟಕ

2023 ಚುನಾವಣಾ ಆಯೋಗ ಹೊಸ ಅಧಿಸೂಚನೆ ಪ್ರಕಾರ ಮತ ಎಣಿಕೆ ಆಗಿಲ್ಲ, ಅರ್ಜಿ ದಿನ ಹಳೆಯ ಕಾಯ್ದೆ ಪ್ರಕಾರ ಚುನಾವಣಾಧಿಕಾರಿ ಎಣಿಕೆ ಮಾಡಿದ್ದಾರೆ. ಹೀಗಾಗಿ ಮತ್ತೆ ಅಂಚೆ ಮತ ಮರು ಎಣಿಕೆ ಮಾಡಬೇಕು ಎಂದು ಸೌಮ್ಯಾ ರೆಡ್ಡಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ರಾಚಯ್ಯ ಅವರಿದ್ದ ಏಕ ಸದಸ್ಯ ಪೀಠ, ಸೆ.7ಕ್ಕೆ ವಿಚಾರಣೆ ಮುಂದೂಡಿದೆ.

ಈ ಕುರಿತು ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ಆದೇಶದನ್ವಯ ಮತ ಎಣಿಕೆ ಆಗಿಲ್ಲ. ಮರು ಮತ ಎಣಿಕೆ ನಿಯಮಬಾಹಿರವಾಗಿ ಆಗಿದೆ. 837 ಅಂಚೆ ಮತ ಮರು ಎಣಿಕೆ ಆಗಬೇಕು. ವಿಡಿಯೊ ಫೂಟೇಜ್ ಪರಿಶೀಲಿಸಬೇಕೆಂದು ಅರ್ಜಿ ಹಾಕಲಾಗಿದೆ. 2023 ಚುನಾವಣಾ ಅಧಿಸೂಚನೆಯಂತೆ ಮತ ಎಣಿಕೆಯಾದರೆ ಗೆಲುವು ನಮ್ಮದಾಗುತ್ತದೆ. ಲೋಕಸಭೆ ಚುನಾವಣೆಗೆ ಸೌಮ್ಯಾ ರೆಡ್ಡಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

16 ಮತಗಳಿಂದ ಗೆಲುವು ದಾಖಲಿಸಿದ್ದ ಸಿ.ಕೆ.ರಾಮಮೂರ್ತಿ

ಬೆಂಗಳೂರು: ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನವಾದ ಮೇ 13ರಂದು ಭಾರಿ ಗೊಂದಲಕ್ಕೆ ಕಾರಣವಾದ ಮತ್ತು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರ (Jayanagar Election Results)ದಲ್ಲಿ ಮರು ಮತ ಎಣಿಕೆ ಬಳಿಕ ಬಿಜೆಪಿ ಗೆಲುವು ಸಾಧಿಸಿತ್ತು. ಮುಖ್ಯ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಬಳಿಕ ಅವರ ಸಮ್ಮುಖದಲ್ಲಿ ನಡೆದ ಮತ ಎಣಿಕೆ ಬಳಿಕ ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರು 16 ಮತಗಳಿಂದ ಗೆದ್ದಿದ್ದಾರೆ ಎಂದು ಘೋಷಿಸಲಾಗಿತ್ತು.

ಜಯನಗರ ಕ್ಷೇತ್ರದ ಶಾಸಕಿ ಆಗಿದ್ದ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ, ಬಿಜೆಪಿಯ ಸಿ.ಕೆ. ರಾಮ ಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಯನಗರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಮತ ಎಣಿಕೆಯ ಸಂದರ್ಭದಲ್ಲಿ ಹಾವು ಏಣಿ ಆಟ ನಡೆದು ಯಾರು ಗೆಲ್ಲುತ್ತಾರೆ ಎಂದು ಹೇಳುವುದೇ ಕಷ್ಟವಾಗಿತ್ತು. ಅಂತಿಮವಾಗಿ ಮತ ಎಣಿಕೆ ಮುಗಿದಾಗ ಸೌಮ್ಯಾ ರೆಡ್ಡಿ ಅವರು ಕೇವಲ 160 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು.

ಇದನ್ನೂ ಓದಿ | Modi in Bangalore : ನಾಳೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ ಕ್ಯಾನ್ಸಲ್; ಬಿಜೆಪಿ ಧ್ವಜಕ್ಕಿಲ್ಲ ಅವಕಾಶ!

ಆದರೆ ಮತ ಎಣಿಕೆ ಕಾರ್ಯದ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬಿಜೆಪಿ ಅಭ್ಯರ್ಥಿ ಸಿ. ಕೆ ರಾಮಮೂರ್ತಿ ಕಡೆಯಿಂದ ಮನವಿ ಮಾಡಿ, ಮರು ಎಣಿಕೆ ಮಾಡುವಂತೆ ಕೋರಿದ್ದರು. ಈ ಮನವಿ ಮೇರೆಗೆ ಮತ್ತೆ ಅಂಚೆ ಮತಗಳನ್ನು ಕೌಂಟ್ ಮಾಡಿದಾಗ ಆಗ ಬಿಜೆಪಿ ಅಭ್ಯರ್ಥಿ ಸಿ. ಕೆ ರಾಮಮೂರ್ತಿ 16 ಮತಗಳ ಮುನ್ನಡೆ ದೊರೆತಿತ್ತು. ಹೀಗಾಗಿ ಸಿ. ಕೆ ರಾಮಮೂರ್ತಿ ಅವರ ಗೆಲುವು ಪಡೆದಿರುವುದಾಗಿ ಚುನಾವಣಾ ಅಧಿಕಾರಿಗಳು ಘೋಷಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಸೌಮ್ಯಾ ರೆಡ್ಡಿ ಅವರು ಇದೀಗ, ಸಿ.ಕೆ.ರಾಮಮೂರ್ತಿ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Exit mobile version