ಯಾದಗಿರಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka election 2023) ಕಾವು ದಿನೇ ದಿನೆ ರಂಗು ಪಡೆದುಕೊಂಡಿದ್ದು, ಚುನಾವಣಾ ಪ್ರಚಾರಕ್ಕಾಗಿ ಎಂಜಿನಿಯರ್ ಒಬ್ಬರು, ವಿದೇಶದಿಂದ ಸ್ವದೇಶಕ್ಕೆ ಆಗಮಿಸಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದ ನಿವಾಸಿ ಬಸವರಾಜ ಸಂಕೀನ್, ಸ್ಪೇನ್ ದೇಶದ ಬಾರ್ಸಿಲೋನಾದ ಖಾಸಗಿ ಕಂಪನಿಯಲ್ಲಿ ಬಾಹ್ಯಾಕಾಶ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಬಸವರಾಜ ಸಂಕಿನ್ ಸ್ಪೇನ್ ದೇಶದ ಓವರ್‌ಸಿಸ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕೂಡ ಬಸವರಾಜ ಸಂಕೀನ್ ಸ್ಪೇನ್ ದೇಶದಿಂದ ತಾಯ್ನಾಡಿಗೆ ಆಗಮಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ್ದರು.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ತಾಯ್ನಾಡಿಗೆ ಆಗಮಿಸಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಈಗ ಯಾದಗಿರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಪರ ಯಾದಗಿರಿ ಕ್ಷೇತ್ರದಲ್ಲಿ ಸಂಚರಿಸಿ, ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಗ್ಯಾರೆಂಟಿ ಕಾರ್ಡ್ ಬಗ್ಗೆ ಮತದಾರರಿಗೆ ತಿಳಿಸುವುದರೊಂದಿಗೆ ಮತಬೇಟೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Road Accident: ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ; ಇಬ್ಬರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ
ಯಾದಗಿರಿ ಕ್ಷೇತ್ರದ ಜತೆಗೆ ಯಾದಗಿರಿ ಜಿಲ್ಲೆಯ ನಾಲ್ಕು ಕ್ಷೇತ್ರ ಹಾಗೂ ಮೈಸೂರಿನ ವರುಣ ಕ್ಷೇತ್ರ ಸೇರಿದಂತೆ ಮೊದಲಾದ ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಾಗುತ್ತದೆ. ವರುಣದಲ್ಲಿ ಮೇ 4ರಿಂದ ಸಿದ್ದರಾಮಯ್ಯ ಪರ ಪ್ರಚಾರ ಮಾಡಲಾಗುತ್ತದೆ ಎಂದು ಬಸವರಾಜ ಸಂಕೀನ್ ತಿಳಿಸಿದ್ದಾರೆ.