Site icon Vistara News

Spandana Vijay Raghavendra : ಒಳಗೆ ಅವಳು ಶಾಂತಮೂರ್ತಿ, ಹೊರಗೆ ಇವನು ಕಲ್ಲುಬಂಡೆ!

spandana Vijay Raghavendra

ಬೆಂಗಳೂರು: ಗಾಜಿನ ಕಪಾಟಿನೊಳಗೆ ಆಕೆ ಶಾಂತ ಮುಖಮುದ್ರೆಯಿಂದ ಮಲಗಿದ್ದಾಳೆ (Spanada Vijay Raghavendra). ನಿದ್ದೆಯಲ್ಲಿದ್ದಾಳೆ, ಸ್ವಲ್ಪ ಹೊತ್ತಿನಲ್ಲಿ ಏಳುತ್ತಾಳೇನೋ ಎನ್ನುವಷ್ಟು ನಿರಾಳವಾದ ಮುಖಭಾವ. ಯಾವ ನೋವೂ ಇಲ್ಲ, ಯಾವ ಸಂಕಟವೂ ಇಲ್ಲ, ಕಂಡೂ ಕಾಣದ ಒಂದು ನಿಷ್ಕಲ್ಮಶ ನಗುವಷ್ಟೇ ಹೊಳೆಯುವ ಮುಖದ ಮೇಲಿದೆ. ಕಾಸಗಲದ ಕುಂಕುಮ ಅವಳ ಮುಖದ ಬೆಳಕು ಹೆಚ್ಚಿಸಿದೆ.

ಇತ್ತ ಇವನೋ.. ಕಲ್ಲರಳಿ ಹೂವಾದ ಹುಡುಗ (Vijay Raghavendra) ಈಗ ವಸ್ತುಶಃ ಬಂಡೆಯೇ ಆಗಿದ್ದಾನೆ. ಯಾರದೋ ತಬ್ಬುಗೆಯ ಭರವಸೆಯ ಹೆಗಲ ಮೇಲೆ ಒಂದೊಂದು ಹನಿ ಕಣ್ಣೀರು ಚೆಲ್ಲಿದ್ದು ಎಲ್ಲವನ್ನೂ ಒಳಗೆ ಅವುಡುಗಚ್ಚಿ ನಿಂತ ನಂಜುಂಡ. ಎಲ್ಲರ ಕಣ್ಣೀರನ್ನೂ ನೋಡುತ್ತಲೇ ತನ್ನ ಕಣ್ಣೀರನ್ನು ಒಳಗೊಳಗೆ ಅವುಡುಗಚ್ಚಿ ಇಂಗಿಸಿಕೊಂಡು ನಿಂತಿದ್ದ ಅವನು.

ಹೌದು.. ಅನುರೂಪ ದಾಂಪತ್ಯಕ್ಕೆ ಮತ್ತೊಂದು ಹೆಸರಾಗಿದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ( ಅವರನ್ನು ವಿಧಿ ಬೇರ್ಪಡಿಸಿದೆ. ಸ್ಪಂದನಾ (Vijay Raghavendra wife) ಇಲ್ಲದ ವಿಜಯ ರಾಘವೇಂದ್ರನನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಗಾಢವಾದ ಬಾಂಧವ್ಯಕ್ಕೆ ಈಗ ಅಂತಿಮ ಕ್ಷಣ ಬಂದಿದೆ. ಬ್ಯಾಂಕಾಕ್‌ನಲ್ಲಿ ಕುಸಿದುಬಿದ್ದು ಮೃತಪಟ್ಟ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ವಿಮಾನದಲ್ಲಿ ಹೊತ್ತುಕೊಂಡು ಬಂದ ವಿಜಯ ರಾಘವೇಂದ್ರ ಅವರು ಬುಧವಾರ ಬೆಳಗ್ಗಿನಿಂದ ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲೇ ನಿಂತಿದ್ದಾರೆ.

ಅಂತಿಮ ನಮನ ಸಲ್ಲಿಸಲು ಬಂದ ಪ್ರತಿಯೊಬ್ಬರೂ ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಹೆಚ್ಚಿನವರು ವಿಜಯ ರಾಘವೇಂದ್ರ ಅವರ ಹತ್ತಿರಕ್ಕೆ ಬರುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಅವನನ್ನು ಬಿಗಿದಪ್ಪಿ ಬೆನ್ನುತಡವುತ್ತಿದ್ದಾರೆ. ಆದರೆ ವಿಜಯ ರಾಘವೇಂದ್ರ ಮಾತ್ರ ಒಂದಿನಿತೂ ಮಿಸುಕಾಡದೆ ನಿಂತಿದ್ದಾರೆ. ಯಾವತ್ತೂ ಭಾವನೆಗಳೇ ತುಂಬಿರುವ, ಸಣ್ಣ ಸಣ್ಣ ಸಂಗತಿಗಳಿಗೂ ಮುಖ, ಕಣ್ಣರಳಸಿ ಪ್ರತಿಕ್ರಿಯಿಸುವ ವಿಜಯ್‌ ಬರಿದೆ ಮೌನಕ್ಕೆ ಜಾರಿದ್ದಾರೆ.

ಆಗೊಮ್ಮೆ ಈಗೊಮ್ಮೆ ಸೃಜನ್‌ ಲೋಕೇಶ್‌ ಎದೆಗೊತ್ತಿಕೊಂಡಾಗ, ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಬಂದು ಎದುರು ನಿಂತಾಗ ಕಣ್ಣು ಮಂಜಾಗಿದ್ದು ಬಿಟ್ಟರೆ ಉಳಿದಂತೆ ಎದೆಯೊಳಗೆ ಸಾವಿರ ಚಾಣಗಳ ಬಡಿತವಿದ್ದರೆ ಹೊರಗೆ ಕಲ್ಲು ಬಂಡೆಯಂತೆ ನಿಂತಿದ್ದಾರೆ.

ಅಂತಿಮ ದರ್ಶನಕ್ಕೆ ಬಂದ ಪ್ರತಿಯೊಬ್ಬರ ಸಾಂತ್ವನದ ಮಾತುಗಳನ್ನು, ಕಣ್ಣೀರನ್ನು ಸ್ವೀಕರಿಸುವ ರಾಘವೇಂದ್ರ ತಾವೇ ಅವರಿಗೆ ಸಾಂತ್ವನ ಹೇಳುತ್ತಿದ್ದಾರೇನೋ ಎಂದು ಭಾಸವಾಗುವಷ್ಟು ನಿರ್ಲಿಪ್ತತೆಯನ್ನು ಮುಖಕ್ಕೆ ಆವರಣವಾಗಿ ಕಟ್ಟಿಕೊಂಡಿದ್ದಾರೆ.

ಅಚ್ಚರಿ ಎಂದರೆ ಅಮ್ಮನನ್ನು ಅತಿಯಾಗಿ ಪ್ರೀತಿಸುವ ಮುದ್ದಿನ ಶೌರ್ಯನೂ ಎದೆಗಟ್ಟಿ ಮಾಡಿಕೊಂಡು ನಿಂತಿದ್ದಾನೆ. ಒಮ್ಮೆ ಅತ್ತುಬಿಡು, ಎದೆಯ ದುಃಖವೆಲ್ಲ ಕಣ್ಣೀರಾಗಿ ಹರಿಯಲಿ, ಹಾಗೆ ನಿರಾಳವಾಗು ಎಂದು ಹೇಳಿಬಿಡೋಣ ಅನಿಸುವ ಹಾಗಿದ್ದಾನೆ. ಆಗೊಮ್ಮೆ ಈಗೊಮ್ಮೆ ಆತ್ಮೀಯರ ಹೆಗಲಿಗೆ ತಲೆ ಇಟ್ಟು ಸಣ್ಣಗೆ ಕಂಪಿಸುವ ಹುಡುಗ ಅದು ಹೇಗೋ ಉಕ್ಕಿ ಬರುವ ದುಃಖವನ್ನೂ ಬಚ್ಚಿಟ್ಟುಕೊಂಡಿದ್ದಾನೆ.

ಖುದ್ದು ಅಪ್ಪ ವಿಜಯ ರಾಘವೇಂದ್ರ ಅವರ ಜತೆಗೆ ಮಾತನಾಡುವಾಗಲೂ ಯಾವ ಭಾವನೆಗಳನ್ನೂ ಪ್ರಕಟಿಸದೆ ಶಾಂತವಾಗಿದ್ದಾನೆ. ಹಾಗಂತ ಅವನು ಅತ್ತಿಲ್ಲವೆಂದಲ್ಲ, ಉಬ್ಬಿರುವ ಕಣ್ಣ ಅಂಚುಗಳು ಅವನ ಅಳುವಿನ ಕಥೆ ಹೇಳುತ್ತಿವೆ. ಮಾವನ ಮಡಿಲಲ್ಲಿ ಮಗುವಾಗುವಾಗ ಬಿಡುವ ನಿಟ್ಟುಸಿರು ಒಳಗೆ ನಡೆಯುತ್ತಿರುವ ಕದನದ ಕಥನವನ್ನು ಬಿಚ್ಚಿಡುತ್ತಿದೆ.

ಇದನ್ನೂ ಓದಿ : Spandana Vijay Raghavendra: ಹೋದವರು ಹೊರಟು ಹೋಗ್ತಾರೆ, ಇರೋರ ಕಷ್ಟ ನೋಡಿ! ಎಂದು ರಾಘಣ್ಣ ಭಾವುಕ

Exit mobile version