ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರ ಮಂಗಳವಾರ ರಾತ್ರಿ ನಗರಕ್ಕೆ ತಲುಪಿದೆ. ಬ್ಯಾಂಕಾಕ್ನಿಂದ ಥಾಯ್ ಏರ್ ವೇಸ್ (Thai Airways)ವಿಮಾನದಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು (Kempegowda International airport) ತರಲಾಯಿತು.
ನಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಪುತ್ರಿ ಸ್ಪಂದನಾ ವಿಜಯ ರಾಘವೇಂದ್ರ ಥಾಯ್ಲೆಂಡ್ ಪ್ರವಾಸದಲ್ಲಿದ್ದ (Thailand tour) ವೇಳೆ ಭಾನುವಾರ ರಾತ್ರಿ ಹಠಾತ್ ಹೃದಯಾಘಾತದಿಂದ (Sudden Cardiac Arrest) ಕುಸಿದು ಬಿದ್ದು ಮೃತಪಟ್ಟಿದ್ದರು.
ಬ್ಯಾಂಕಾಕ್ನ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮುಕ್ತಾಯಗೊಂಡು ದಾಖಲೆಗಳ ವಿನಿಮಯ ನಡೆದ ಬಳಿಕ ಭಾರತೀಯ ದೂತಾವಾಸದ ಜತೆಗಿನ ಪ್ರಕ್ರಿಯೆ ಮತ್ತು ವಿಮಾನದಲ್ಲಿ ಮೃತದೇಹ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ನಂತರ ಥಾಯ್ಲೆಂಡ್ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೃತದೇಹದೊಂದಿಗೆ ವಿಜಯ ರಾಘವೇಂದ್ರ ಹಾಗೂ ಸಂಬಂಧಿಕರು ಆಗಮಿಸಿದರು.
ಇದನ್ನೂ ಓದಿ | Spandana Vijay Raghavendra : ಸ್ಪಂದನಾಗೆ ಕಂಟಕವಿತ್ತಾ? ನಾಲ್ಕು ತಿಂಗಳ ಮೊದಲೇ ಸೂಚನೆ ಸಿಕ್ಕಿತ್ತಾ?
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪಾರ್ಥಿವ ಶರೀರವನ್ನು ಮಲ್ಲೇಶ್ವರದಲ್ಲಿರುವ ಬಿಕೆ ಶಿವರಾಂ ಅವರ ಮನೆಗೆ (No.34, 4ನೇ ದೇವಸ್ಥಾನ ರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರ) ಕರೆತರಲಾಗುತ್ತದೆ. ಮಧ್ಯರಾತ್ರಿಯಿಂದ ಬುಧವಾರ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ನಗರದ ಸತ್ಯಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಈಡಿಗ ಸಮುದಾಯದ ವಿಧಿವಿಧಾನದಂತೆ ಅಂತ್ಯಕ್ರಿಯೆ ನೇರವೇರಿಸಲಾಗುವುದು ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.
ಶಿವರಾಂ ಮನೆಯ ಪರಿಸರದಲ್ಲಿ ಸಕಲ ಸಿದ್ಧತೆ
ಪಾರ್ಥಿವ ಶರೀರದ ಆಗಮನ ಮತ್ತು ಅಂತಿಮ ದರ್ಶನಕ್ಕೆ ಸಂಬಂಧಿಸಿ ಬಿ.ಕೆ. ಶಿವರಾಂ ಅವರ ಮನೆಯ ಪರಿಸರದಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಈಗಾಗಲೇ ಬಂಧುಗಳು, ಕುಟುಂಬಿಕರು ಮನೆಗೆ ಆಗಮಿಸಿದ್ದಾರೆ. ಬ್ಯಾರಿಕೇಡ್, ಟೇಬಲ್, ಕುರ್ಚಿಗಳನ್ನು ಹಾಕಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಬಿ.ಕೆ ಹರಿಪ್ರಸಾದ್ ಹಾಗೂ ಶ್ರೀಮುರುಳಿ ಅವರು ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Spandana Vijay Raghavendra : ಸ್ಪಂದನಾ ಜಿಮ್ ಸೇರಿದ್ದು ಬಾಡಿ ಬಿಲ್ಡ್ ಮಾಡಲು ಅಲ್ಲ, ಜೋತುಬಿದ್ದ ಚರ್ಮ tight ಆಗಲು!
ಸಾರ್ವಜನಿಕರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದ್ದು, ಯಾವುದೇ ಒತ್ತಡವಿಲ್ಲದೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿತ್ರನಟರು, ವಿಜಯ ರಾಘವೇಂದ್ರ ಅಭಿಮಾನಿಗಳು, ರಾಜಕಾರಣಿಗಳು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ.